Advertisement

ಮೀಸಲಾತಿ ಮಿತಿ ಪರಾಮರ್ಶೆಗೆ ಸಕಾಲ

01:33 AM Mar 10, 2021 | Team Udayavani |

ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಜಾತಿ, ವರ್ಗ, ಸಮುದಾಯಗಳ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸದುದ್ದೇಶದಿಂದ ಸರಕಾರಿ ಉದ್ಯೋಗ, ಶಿಕ್ಷಣ, ಆಡಳಿತ ವ್ಯವಸ್ಥೆಗಳಲ್ಲಿ ಮೀಸಲಾತಿ ನೀಡುವ ಪರಿಕಲ್ಪನೆ ಸಂವಿಧಾನದಲ್ಲಿಯೇ ಇದೆ. ಸಂವಿಧಾನ ಜಾರಿಗೆ ಬಂದು ಏಳು ದಶಕಗಳೇ ಕಳೆದಿದ್ದರೂ ಮೀಸಲಾತಿಯ ಉದ್ದೇಶ ಈಡೇರಿದೆಯೇ? ಎಂದು ಆತ್ಮಾವಲೋಕನ ಮಾಡಿಕೊಂಡರೆ ನಾವು ಎಡವಿರುವುದು ಸ್ಪಷ್ಟವಾಗುತ್ತದೆ. ಹಾಗೆಂದು ಮೀಸಲಾತಿಯಿಂದ ಪರಿಶಿಷ್ಟ ಜಾತಿ, ಪಂಗಡ, ಬುಡಕಟ್ಟು, ಹಿಂದುಳಿದ ಸಮುದಾಯದ ಮಂದಿಗೆ ಪ್ರಯೋಜನವಾಗಿಲ್ಲ ಎಂದರೆ ಅದು ಖಂಡಿತಾ ತಪ್ಪಾದೀತು. ಈ ಎಲ್ಲ ವರ್ಗಗಳ ಕೆಲವರಾದರೂ ಮೀಸಲಾತಿಯ ಕಾರಣದಿಂದಾಗಿಯೇ ಉನ್ನತ ಸ್ಥಾನಕ್ಕೇರಿದ್ದಾರೆ.

Advertisement

ಮೀಸಲಾತಿ ವಿಚಾರವಾಗಿ ಕಳೆದ ಹಲವಾರು ದಶಕಗಳಿಂದ ಚರ್ಚೆ, ಜಿಜ್ಞಾಸೆಗಳು ನಡೆಯುತ್ತಲೇ ಬಂದಿವೆ. ಮೀಸಲಾತಿಯ ಔಚಿತ್ಯದ ಬಗೆಗೇ ಹಲವಾರು ಬಾರಿ ಪ್ರಶ್ನೆಗಳು ಎದ್ದಿವೆಯಾದರೂ ಸಂವಿಧಾನದಲ್ಲಿಯೇ ಈ ವಿಚಾರ ಪ್ರಸ್ತಾವವಾಗಿರುವುದರಿಂದ ಇವು ಅಷ್ಟೇ ವೇಗದಲ್ಲಿ ಹಿನ್ನೆಲೆಗೆ ಸರಿದಿವೆ. 1992ರಲ್ಲಿ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಒಂಬತ್ತು ಸದಸ್ಯರ ಪೀಠ ಎಲ್ಲ ಸಮುದಾಯಗಳಿಗೆ ನೀಡಲಾಗುವ ಮೀಸಲಾತಿ ಪ್ರಮಾಣ ಶೇ. 50ರ ಗಡಿಯನ್ನು ಮೀರಬಾರದು ಎಂಬ ಮಹತ್ತರವಾದ ತೀರ್ಪನ್ನು ನೀಡಿತ್ತು. ಇದಾದ ಬಳಿಕ ಮೀಸಲಾತಿ ಹೋರಾಟ ಒಂದಿಷ್ಟು ತಣ್ಣಗಾಗಿತ್ತು. 2018ರಲ್ಲಿ ಮಹಾರಾಷ್ಟ್ರ ಸರಕಾರ ಮರಾಠ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 16ರಷ್ಟು ಮೀಸಲಾತಿಯನ್ನು ನೀಡುವ ಕಾಯಿದೆ ಜಾರಿಗೆ ತಂದ ಬಳಿಕ ಮೀಸಲಾತಿ ಕುರಿತಾದ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂತು. ಈ ನಿರ್ಧಾರದಿಂದಾಗಿ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ. 50ರ ಗಡಿಯನ್ನು ಮೀರಿ, ಹೊಸ ವಿವಾದವೊಂದು ಸೃಷ್ಟಿಯಾಯಿತಲ್ಲದೆ ಅನ್ಯ ರಾಜ್ಯಗಳೂ ಇದೇ ರೀತಿಯ ಬೇಡಿಕೆಯನ್ನು ಇಡಲಾರಂಭಿಸಿದವು. ತಮಿಳುನಾಡು ಸಹಿತ ಇನ್ನಿತರ ಕೆಲವೊಂದು ರಾಜ್ಯಗಳಲ್ಲಿಯೂ ಮೀಸಲಾತಿ ಪ್ರಮಾಣ ಈಗ ಶೇ. 50ರ ಗಡಿ ಮೀರಿದೆ. 2018ರಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ಸಂವಿಧಾನದ 102ನೇ ತಿದ್ದುಪಡಿಯ ಅನುಸಾರ ಸದ್ಯ ಮೀಸಲಾತಿ ಪಟ್ಟಿಗೆ ಜಾತಿ ಅಥವಾ ಸಮುದಾಯಗಳನ್ನು ಸೇರ್ಪಡೆಗೊಳಿಸುವ ಅಧಿಕಾರ ರಾಷ್ಟ್ರಪತಿಗಳದ್ದಾಗಿದೆ.

ಮಹಾರಾಷ್ಟ್ರ ಸರಕಾರದ ಮೀಸಲಾತಿ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಸೋಮವಾರದ ವಿಚಾರಣೆಯ ವೇಳೆ ಪಂಚ ಸದಸ್ಯ ಪೀಠ ಎಲ್ಲ ರಾಜ್ಯಗಳಿಗೆ ನೋಟಿಸ್‌ ಜಾರಿಗೊಳಿಸಿ ಈ ಸಂಬಂಧ ಅಭಿಪ್ರಾಯವನ್ನು ಕೋರಿದೆ. ಮೀಸಲಾತಿಗಾಗಿ ನಿರ್ದಿಷ್ಟ ಸಮುದಾಯವನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದೆ ಎಂದು ಘೋಷಿಸುವ ಅಧಿಕಾರ ರಾಜ್ಯಗಳ ಶಾಸಕಾಂಗಗಳಿಗೆ ಇದೆಯೇ? ಎಂಬ ಕುರಿತಂತೆ ಸುಪ್ರೀಂ ಕೋರ್ಟ್‌ ಪರಿಶೀಲನೆ ನಡೆಸುವ ಜತೆಯಲ್ಲಿ ಶೇ. 50ರ ಮೀಸಲಾತಿ ಗಡುವಿನ ಕುರಿತಂತೆಯೂ ಪರಾಮರ್ಶೆ ನಡೆಸುವುದಾಗಿ ತಿಳಿಸಿದೆ.

ಮೀಸಲಾತಿಯ ಪ್ರಮಾಣ ವರ್ಷಗಳುರುಳಿದಂತೆಯೇ ಹೆಚ್ಚುತ್ತಿರು ವುದು, ಮೀಸಲಾತಿ ಪಟ್ಟಿಗೆ ಜಾತಿ, ಸಮುದಾಯಗಳ ನಿರಂತರ ಸೇರ್ಪಡೆ ಮತ್ತು ಇದರಿಂದ ಅರ್ಹರಿಗಾಗುತ್ತಿರುವ ಅನ್ಯಾಯ, ಮೀಸಲಾತಿಯ ದುರುಪಯೋಗ, ಸದ್ಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯಲ್ಲಿ ಜಾತಿವಾರು ಮೀಸಲಾತಿಯ ಅಗತ್ಯತೆ, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಒದಗಿಸುವುದು..ಮತ್ತಿತರ ಗಂಭೀರ ವಿಚಾರಗಳ ಬಗೆಗೆ ದೇಶದಲ್ಲಿ ಗಂಭೀರ ಮಟ್ಟದ ಚರ್ಚೆ ನಡೆಯಬೇಕಿದೆ. ಇಂಥ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಮೀಸಲಾತಿ ನಿಗದಿತ ಪ್ರಮಾಣ ಪರಾಮರ್ಶೆಯ ಚರ್ಚೆಗೆ ನಾಂದಿ ಹಾಡಿರುವುದು ಶ್ಲಾಘನೀಯವೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next