Advertisement

ಡಿಮೆನ್ಶಿಯಾದಲ್ಲಿ ಸಮಯದ ನಿರ್ವಹಣೆ

10:23 AM Mar 02, 2020 | mahesh |

ಡಿಮೆನ್ಶಿಯಾ ಎಂಬುದು ಮೆದುಳಿನ ನರಕ್ಕೆ ಸಂಬಂಧಿಸಿದ, ಹಿರಿಯರಲ್ಲಿ ಕಂಡು ಬರುವ ಅರಿವಿನ ಸಾಮರ್ಥ್ಯಗಳನ್ನು ಒಳಗೊಂಡ ಒಂದು ವಿಶಾಲವಾದ ಪದವಾಗಿದೆ. ಇದು ಜ್ಞಾಪಕ ಶಕ್ತಿ, ಕಲಿಕೆಯ ಸಾಮರ್ಥ್ಯ ಮತ್ತು ಹಿರಿಯರ ಚಿಂತನೆಯ ಮೇಲೆ ಪರಿಣಾಮ ಬೀರುತ್ತದೆ. ಡಿಮೆನ್ಶಿಯಾದ ಲಕ್ಷಣವು ವಯಸ್ಸಾದವರು ಸ್ವತಂತ್ರವಾಗಿ ಬದುಕುವ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತದೆ. ಅವರು ಎದುರಿಸುವ ತೊಂದರೆಗಳಲ್ಲಿ ಸಮಯಕ್ಕೆ ಸಂಬಂಧಿಸಿದ ಪರಿಕಲ್ಪನೆಯು ಇದರ ಸಾಮಾನ್ಯ ಲಕ್ಷಣವಾಗಿದೆ. ಅವುಗಳೆಂದರೆ, ದಿನದ ಸಮಯವನ್ನು ನೆನಪಿಟ್ಟುಕೊಳ್ಳುವಲ್ಲಿ ತೊಂದರೆ, ದಿನ, ವಾರ, ತಿಂಗಳು, ವರ್ಷ, ಸರಿಯಾದ ಅನುಕ್ರಮದಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ತೊಂದರೆ ಇತ್ಯಾದಿಗಳನ್ನು ಒಳಗೊಂಡಿದೆ.

Advertisement

ಈ ಸಮಯ ಸಂಬಂಧಿತ ತೊಂದರೆಗಳು ದೈನಂದಿನ ಚಟುವಟಿಕೆಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತವೆ. ಅದರಲ್ಲೂ ಮುಖ್ಯವಾಗಿ, ಡಿಮೆನ್ಶಿಯಾದ ಆರಂಭಿಕ ಹಂತದಲ್ಲಿ ಅತೀ ಹೆಚ್ಚು ಪರಿಣಾಮ ಬೀರುತ್ತವೆ. ಉದಾ: ಸಮಯಕ್ಕೆ ಸರಿಯಾಗಿ ಔಷಧಗಳನ್ನು ತೆಗೆದುಕೊಳ್ಳುವಲ್ಲಿ ತೊಂದರೆ, ಸಾಮಾಜಿಕ ಕಾಯಕ್ರಮಗಳನ್ನು ತಪ್ಪಿಸಿಕೊಳ್ಳುವುದು, ವೈದ್ಯರನ್ನು ಭೇಟಿಯಾಗಲು ನಿಗದಿಪಡಿಸಿದ ಸಮಯ, ಬಿಲ್‌ ಪಾವತಿ ಇತ್ಯಾದಿ ಅವರು ಪ್ರತಿಯೊಂದು ವಿಷಯವನ್ನು ನೆನಪಿಸಲು ಕುಟುಂಬದ ಸದಸ್ಯರನ್ನು ಅವಲಂಬಿಸಿರುತ್ತಾರೆ.

ಈ ಡಿಮೆನ್ಶಿಯಾದ ಸಮಸ್ಯೆ ಹೆಚ್ಚಾದಂತೆ ಈ ರೀತಿಯ ಅಂದರೆ, ಜ್ಞಾಪಿಸಿಕೊಳ್ಳಲು ಕುಟುಂಬದ ಸದಸ್ಯರನ್ನು ಅವಲಂಬಿಸುವುದೂ ಹೆಚ್ಚಾಗುತ್ತದೆ. ಕೇಳಿದ ಪ್ರಶ್ನೆಯನ್ನೇ ಪದೇ ಪದೆ ಕೇಳುವುದು ಒಂದು ಪ್ರಮುಖ ಲಕ್ಷಣ. ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳೆಂದರೆ, ಈಗ ಎಷ್ಟು ಗಂಟೆ? ಇದು ಊಟದ ಸಮಯವೇ? ಇದರ ಜತೆಗೆ ಸಮಯದ ಪರಿವೆ ಇಲ್ಲದೆ ಬೆಳಗ್ಗೆ ಹೊತ್ತು ಮಲಗಿರುವುದು ಮತ್ತು ರಾತ್ರಿ ವೇಳೆ ಎಚ್ಚರವಾಗಿರುವುದು- ಇಂತಹ ನಿಯಮಿತ ನಿದ್ರೆಯ ಮಾದರಿಗಳೊಂದಿಗೆ ಈ ಸಮಸ್ಯೆಗಳು ಹೆಚ್ಚಾಗುತ್ತವೆ. ಇವು ಹಿರಿಯರಲ್ಲಿ ಸಾಕಷ್ಟು ತೊಂದರೆಯನ್ನು ಉಂಟು ಮಾಡಬಹುದು. ಕುಟುಂಬದ ಸದಸ್ಯರು, ಅದರಲ್ಲೂ ವಿಶೇಷವಾಗಿ ಅವರ ಬಾಳಸಂಗಾತಿ ಈ ಸಮಸ್ಯೆಗಳನ್ನು ನಿರಂತರವಾಗಿ ಎದುರಿಸಿ ಬಳಲಬಹುದು.

ವಿಶ್ವಾದ್ಯಂತ ಈ ಡಿಮೆನ್ಶಿಯಾದ ಬಗ್ಗೆ ಸಾಕಷ್ಟು ಮಹತ್ವದ ಸಂಶೋಧನೆಗಳು ನಡೆಯುತ್ತಿವೆ. ಇತ್ತೀಚೆಗೆ ಅಂದರೆ 2019ರ ನವೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ ಸ್ವೀಡನ್‌ನ ರಾಜ ಮತ್ತು ರಾಣಿ ಡಿಮೆನ್ಶಿಯಾದಿಂದ ಬಳಲುತ್ತಿರುವ ಜನರ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವ ಮಹತ್ವದ ವಿಚಾರವನ್ನು ಎತ್ತಿ ಹಿಡಿದರು. ಈ ಮೂಲಕ ಭಾರತ ಮತ್ತು ಸ್ವೀಡನ್‌ ಸರಕಾರಗಳು ಹಿರಿಯರಿಗೆ ಮತ್ತು ಡಿಮೆನ್ಶಿಯಾಕ್ಕೆ ಸಂಬಂಧಿತ ಸಂಶೋಧನೆಗಳಿಗೆ ಬೆಂಬಲ ನೀಡುವ ಒಪ್ಪಂದಕ್ಕೆ ಸಹಿ ಹಾಕಿವೆ.

ಈ ಒಪ್ಪಂದದ ಅಡಿಯಲ್ಲಿ ಅಂತಾರಾಷ್ಟ್ರೀಯ ಸಂಶೋಧನ ಸಹಯೋಗದಿಂದ ಈ ಯೋಜನೆಗೆ ಅನುಮೋದನೆ ದೊರಕಿದೆ. ಇದರ ಅಂಗವಾಗಿ ಮಾಹೆಯ ಮಣಿಪಾಲ ಕಾಲೇಜ್‌ ಆಫ್ ಹೆಲ್ತ್‌ ಪ್ರೊಫೆಶನ್ಸ್‌ನ ಆಕ್ಯುಪೇಶನಲ್‌ ಥೆರಪಿ ವಿಭಾಗ ಮತ್ತು ಸೆಂಟರ್‌ ಫಾರ್‌ ಕ್ಲಿನಿಕಲ್‌ ರಿಸರ್ಚ್‌, ದಲಾರ್‌ನಾ; ಸಾರ್ವಜನಿಕ ಆರೋಗ್ಯ ಮತ್ತು ಆರೈಕೆ ವಿಜ್ಞಾನ ಇಲಾಖೆ; ಸ್ವೀಡನ್‌ನ ಉಪ್ಸಲಾ ವಿಶ್ವವಿದ್ಯಾಲಯದ ಡಿಸೇಬಿಲಿಟಿ ಮತ್ತು ಹಾಬಿಲಿಟೇಶನ್‌ ವಿಭಾಗಗಳು ಒಡಂಬಡಿಕೆ ಮಾಡಿಕೊಂಡಿವೆ. “ಡಿಮೆನ್ಶಿಯಾದಲ್ಲಿ ಸಮಯದ ನಿರ್ವಹಣೆ’ ಎಂಬ ಶೀರ್ಷಿಕೆಯನ್ನು ಹೊಂದಿರುವ ಈ ಯೋಜನೆಯಲ್ಲಿ ಸಮಯದ ದೃಷ್ಟಿಕೋನ ಮತ್ತು ನಿರ್ವಹಣೆಯಲ್ಲಿ ಡಿಮೆನ್ಶಿಯಾ ಹೊಂದಿರುವ ವೃದ್ಧರನ್ನು ಬೆಂಬಲಿಸಲು ಉಪಯೋಗಿಸುವ ಸಹಾಯಕ ಸಾಧನಗಳ ನಡುವೆ ಒಂದು ಸಾಂಸ್ಕೃತಿಕ ಹೋಲಿಕೆಯನ್ನು ಒಳಗೊಂಡಿರುತ್ತದೆ. ಭಾರತೀಯ ವಿಭಾಗಕ್ಕೆ ಸಂಬಂಧಿಸಿದ ಈ ಯೋಜನೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಧನಸಹಾಯವನ್ನು ನೀಡಿದೆ. ಡಿಮೆನ್ಶಿಯಾದಿಂದ ಬಳಲುತ್ತಿರುವ ಹಿರಿಯರಿಗೆ ಸಹಾಯಕ ಸಾಧನವನ್ನು ಬಳಸಿ ಅಧ್ಯಯನ ಮಾಡಿದ ಭಾರತದ ಮೊದಲ ಯೋಜನೆ ಇದಾಗಿದೆ. ಈ ಸಾಧನಗಳನ್ನು ಈಗಾಗಲೇ ಸ್ವೀಡನ್‌ ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬಳಸಲಾಗುತ್ತಿದೆ. ಆದರೆ ಅದು ಸಾಮಾನ್ಯವಾಗಿ ಸಿಗುವಂಥದಲ್ಲ ಮತ್ತು ಭಾರತೀಯ ಸನ್ನಿವೇಶಕ್ಕೆ ತಕ್ಕಂತೆ ಬಳಸಲಾಗುತ್ತದೆ.

Advertisement

ಈ ಯೋಜನೆಯ ಉದ್ದೇಶ ಕೊಟ್ಟಿರುವ ಸಾಧನವನ್ನು ಭಾರತೀಯ ಹಿರಿಯ ನಾಗರಿಕರು ಮತ್ತು ಅವರ ಕುಟುಂಬ ಸದಸ್ಯರು ಮೊದಲು ಸ್ವೀಕರಿಸುವಂತಾಗಬೇಕು. ಈ ಸಾಧನವು ಅವರ ಸಮಯದ ದೃಷ್ಟಿಕೋನವನ್ನು ಅಭಿವೃದ್ಧಿ ಪಡಿಸುವುದು, ದಿನಚರಿ ಹಾಗೂ ನಿಲುವನ್ನು ಸುಧಾರಿಸಲು ಸಹಕಾರಿಯಾಗುವುದು. ಅಲ್ಲದೆ ಅರ್ಥಪೂರ್ಣವಾದ ಚಟುವಟಿಕೆಗಳನ್ನು ಸರಿಯಾದ ಸಮಯದಲ್ಲಿ ಮಾಡುವುದಕ್ಕೆ ಮತ್ತು ಕುಟುಂಬ ಸದಸ್ಯರಿಂದ ಕಡಿಮೆ ಅವಧಿಯನ್ನು ತಮಗಾಗಿ ಅಪೇಕ್ಷಿಸುವುದಕ್ಕೆ ಸಹಕಾರಿಯಾಗಬೇಕು. ಈ ಎಲ್ಲ ಉದ್ದೇಶಗಳನ್ನು ರೂಢಿಸಿಕೊಳ್ಳುವುದು ಈ ಯೋಜನೆಯ ಗುರಿಯಾಗಿದೆ.

ಈ ಯೋಜನೆಯಡಿ ಸ್ವೀಡನ್‌ ಮತ್ತು ಭಾರತದಲ್ಲಿ 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ, ಡಿಮೆನ್ಶಿಯಾದಿಂದ ಬಳಲುತ್ತಿರುವ (ಕನಿಷ್ಠದಿಂದ ಮಧ್ಯಮ ಹಂತ) ವೃದ್ಧರನ್ನು ಈ ಅಧ್ಯಯನದಲ್ಲಿ ಭಾಗವಹಿಸಲು ಆಹ್ವಾನಿಸಲಾಗುತ್ತದೆ. ಈ ಅಧ್ಯಯನದ ನಿಯಮಗಳನ್ನು ಪೂರೈಸುವ ಆಸಕ್ತ ವೃದ್ಧರು ಮತ್ತು ಅವರನ್ನು ಪಾಲನೆ ಮಾಡುವವರನ್ನು ಸಂದರ್ಶಿಸಲಾಗುವುದು. ಅವರ ನೆನಪಿನ ಶಕ್ತಿ, ಸಮಯ-ಸಂಬಂಧಿತ ಸಾಮರ್ಥ್ಯಗಳು ಮತ್ತು ದೈನಂದಿನ ಸಮಯ ನಿರ್ವಹಣೆಗೆ ಸಂಬಂಧಿಸಿದಂತೆ ಒಂದು ಸಣ್ಣ ಲಿಖೀತ ಪರೀಕ್ಷೆಯೊಂದಿಗೆ ಮೌಲ್ಯಮಾಪನ ಮಾಡಲಾಗುತ್ತದೆ. ಅನಂತರ ಅವರಿಗೆ ಉಚಿತವಾಗಿ ಈ ಸಮಯ ಸಹಾಯಕ ಸಾಧನವನ್ನು ನೀಡಲಾಗುವುದು. ಅದರ ಬಳಕೆಯ ತರಬೇತಿಯನ್ನು ನೀಡಲಾಗುತ್ತದೆ. ಅವರು ಮೂರು ತಿಂಗಳ ಅವಧಿಗೆ ಈ ಸಾಧನವನ್ನು ಬಳಸುತ್ತಾರೆ. ಅನಂತರ ಅವರನ್ನು ಮರು ಮೌಲ್ಯಮಾಪನ ಮಾಡಿ, ಪ್ರತಿಕ್ರಿಯೆಗಳನ್ನು ಪಡೆಯಲಾಗುತ್ತದೆ.

ಈ ಯೋಜನೆಯು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಉಡುಪಿ ಮತ್ತು ಮಂಗಳೂರು ನಗರದಲ್ಲಿ ಕನಿಷ್ಠತೆಯಿಂದ ಮಧ್ಯಮತೆಯ ಹಂತದ ಡಿಮೆನ್ಶಿಯಾವನ್ನು ಹೊಂದಿರುವ ಹಿರಿಯರು ಮತ್ತು ಅವರ ಪಾಲನೆಯನ್ನು ಮಾಡುವವರನ್ನು ಈ ಅಧ್ಯಯನದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಸಂಶೋಧನಾಧಿಕಾರಿಯನ್ನು ಸಂಪರ್ಕಿಸಬಹುದು:
ಡಾ| ಸೆಬೆಸ್ಟಿನಾ ಅನಿತಾ ಡಿ’ಸೋಜಾ,
ದೂರವಾಣಿ ಸಂಖ್ಯೆ: 0820-2937305
ಕು| ಕ್ಷಮಾ ಬಂಗೇರ,
ದೂರವಾಣಿ ಸಂಖ್ಯೆ: 8762379439

ಡಾ| ಸೆಬೆಸ್ಟಿನಾ ಅನಿತಾ ಡಿ’ಸೋಜಾ, ಪಿಎಚ್‌.ಡಿ.
ಪ್ರಾಧ್ಯಾಪಕರು, ಆಕ್ಯುಪೇಶ‌ನಲ್‌ ಥೆರಪಿ ವಿಭಾಗ,
ಎಂಸಿಎಚ್‌ಪಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next