Advertisement

ವಿಶ್ವಕಪ್‌ ಆಯ್ಕೆಗೆ ಸಮಯವಿದೆ: ರೋಹಿತ್‌

12:02 AM Mar 22, 2021 | Team Udayavani |

ಅಹ್ಮದಾಬಾದ್‌: ನಾವು ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿ ಗೆದ್ದಿರಬಹುದು, ಆದರೆ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಆಡುವ ಬಳಗವನ್ನು ಅಂತಿಮಗೊಳಿಸಲು ಇನ್ನೂ ಸಾಕಷ್ಟು ಸಮಯವಿದೆ ಎಂಬುದಾಗಿ ಭಾರತ ತಂಡದ ಉಪನಾಯಕ ರೋಹಿತ್‌ ಶರ್ಮ ಹೇಳಿದ್ದಾರೆ. ವಿರಾಟ್‌ ಕೊಹ್ಲಿ ಇನ್ನಿಂಗ್ಸ್‌ ಆರಂಭಿಸಿದ್ದು ಕೇವಲ “ತಾಂತ್ರಿಕ ನಡೆ’ಯಾಗಿದೆ ಎಂದೂ ಹೇಳಿದರು.

Advertisement

“ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಇನ್ನೂ ಸಾಕಷ್ಟು ಸಮಯವಿದೆ. ನಮ್ಮ ಬ್ಯಾಟಿಂಗ್‌ ಸರದಿಯನ್ನು ಅಂತಿಮಗೊಳಿಸುವ ಬಗ್ಗೆ ಈಗಲೇ ನಿರ್ಧಾರವೊಂದಕ್ಕೆ ಬರಲು ಸಾಧ್ಯವಿಲ್ಲ. ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ಐಪಿಎಲ್‌ ನಡೆಯಲಿದೆ. ಅನಂತರವೂ ಕೆಲವು ಟಿ20 ಸರಣಿಗಳಿವೆ. ನಾವೆಲ್ಲ ಕುಳಿತು ಚರ್ಚಿಸಿ ಅನಂತರವೇ ಸೂಕ್ತ ತೀರ್ಮಾನವೊಂದನ್ನು ತೆಗೆದುಕೊಳ್ಳಬೇಕಾಗುತ್ತದೆ’ ಎಂದು ರೋಹಿತ್‌ ಶರ್ಮ ಹೇಳಿದರು.

ರಾಹುಲ್‌ ಕೀ ಪ್ಲೇಯರ್‌ :

“ಈ ಪಂದ್ಯದಲ್ಲಿ ಕೊಹ್ಲಿ ಇನ್ನಿಂಗ್ಸ್‌ ಆರಂಭಿ ಸಿದ್ದು ಕೇವಲ ಒಂದು ತಾಂತ್ರಿಕ ನಡೆಯಾಗಿತ್ತು. ನಮಗೆ ಹೆಚ್ಚುವರಿ ಬೌಲರ್‌ ಓರ್ವನ ಅಗತ್ಯ ವಿತ್ತು. ಇದಕ್ಕಾಗಿ ಓರ್ವ ಬ್ಯಾಟ್ಸ್‌ಮನ್‌ನನ್ನು ಕೈಬಿಡಬೇಕಾಯಿತು. ಇಲ್ಲಿ ರಾಹುಲ್‌ಗೆ ದುರ ದೃಷ್ಟ ಎದುರಾಯಿತು. ಆದರೆ ಇದು ಅತ್ಯಂತ ಕಠಿನ ನಿರ್ಧಾರವಾಗಿತ್ತು’ ಎಂದರು.

“ರಾಹುಲ್‌ ಸೀಮಿತ ಓವರ್‌ ಪಂದ್ಯಗಳಲ್ಲಿ, ಮುಖ್ಯವಾಗಿ ಟಿ20 ಪಂದ್ಯದಲ್ಲಿ ನಮ್ಮ ಕೀ ಪ್ಲೇಯರ್‌. ಆಟಗಾರರ ಈಗಿನ ಫಾರ್ಮ್ ಆಧರಿಸಿ ಸರಣಿ ನಿರ್ಣಾಯಕ ಪಂದ್ಯಕ್ಕೆ ಬಲಿಷ್ಠ ಹನ್ನೊಂದರ ತಂಡವನ್ನು ಆರಿಸಲಾಯಿತು. ಇದರಿಂದ ರಾಹುಲ್‌ಗೆ ಯಾವುದೇ ಸಂದೇಶ ರವಾನೆಯಾಗಿಲ್ಲ’ ಎಂಬುದಾಗಿ ರೋಹಿತ್‌ ಹೇಳಿದರು. ಸರಣಿಗೂ ಮುನ್ನ ರೋಹಿತ್‌-ರಾಹುಲ್‌ ಮೊದಲ ಆಯ್ಕೆಯ ಓಪನರ್ ಎಂಬುದಾಗಿ ನಾಯಕ ಕೊಹ್ಲಿ ಹೇಳಿದ್ದರು. ಹಾಗೆಯೇ ಮೊದಲೆರಡು ಪಂದ್ಯಗಳ ವೇಳೆ ರೋಹಿತ್‌ಗೆ ವಿಶ್ರಾಂತಿಯನ್ನೂ ನೀಡಲಾಗಿತ್ತು.

Advertisement

ಕೊಹ್ಲಿಯೇ ಜೋಡಿ ಆಗಬೇಕೇ? :

ನಿಮ್ಮ ಜತೆ ಮುಂದೆಯೂ ಕೊಹ್ಲಿಯೇ ಇನ್ನಿಂಗ್ಸ್‌ ಆರಂಭಿಸಬೇಕು ಎಂದು ಬಯ ಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೋಹಿತ್‌, “ಒಂದು ನಿರ್ದಿಷ್ಟ ಬ್ಯಾಟಿಂಗ್‌ ಆರ್ಡರ್‌ನೊಂದಿಗೆ ಈ ಪಂದ್ಯವನ್ನು ಗೆಲ್ಲುವುದು ನಮ್ಮ ಯೋಜನೆಯಾಗಿತ್ತು. ಆದರೆ ಇದೇ ಖಾಯಂ ಎಂದೇನಲ್ಲ. ನಿರ್ದಿಷ್ಟ ಸಮಯಲ್ಲಿ ನಾಯಕ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗುತ್ತದೆ. ಆದರೆ ಮುಂದಿನ ಏಕದಿನ ಸರಣಿಯಲ್ಲಿ ಕೊಹ್ಲಿ ಓಪನಿಂಗ್‌ ಬರುತ್ತಾರೆಂದು ನಾನು ಭಾವಿಸುವುದಿಲ್ಲ’ ಎಂದರು.

ಐಪಿಎಲ್‌ನಲ್ಲೂ ಓಪನಿಂಗ್‌: ಕೊಹ್ಲಿ  :

ಅಂತಿಮ ಟಿ 20 ಪಂದ್ಯದಲ್ಲಿ ಇನ್ನಿಂಗ್ಸ್‌ ಆರಂಭಿಸಿ ಯಶಸ್ಸು ಕಂಡ ವಿರಾಟ್‌ ಕೊಹ್ಲಿ, ಮುಂಬರುವ ಐಪಿಎಲ್‌ನಲ್ಲೂ ಓಪನಿಂಗ್‌ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ.

“ಪಂತ್‌ ಮತ್ತು ಅಯ್ಯರ್‌ ಆಡಲಿಳಿಯದೆಯೇ 224 ರನ್‌ ಪೇರಿಸಿದ್ದು ನಮ್ಮ ಬ್ಯಾಟಿಂಗ್‌ ಆಳ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿ. ನಾನು ಮತ್ತು ರೋಹಿತ್‌ ಓಪನಿಂಗ್‌ನಲ್ಲಿ ಉತ್ತಮ ಯಶಸ್ಸು ಸಾಧಿಸಿದೆವು. ನಮ್ಮ ಮಧ್ಯಮ ಕ್ರಮಾಂಕವೀಗ ಹೆಚ್ಚು ಬಲಿಷ್ಠವಾಗಿರುವುದರಿಂದ ನಾನು ರೋಹಿತ್‌ ಜತೆ ಇನ್ನಿಂಗ್ಸ್‌ ಆರಂಭಿಸಲು ಇಳಿದೆ. ಐಪಿಎಲ್‌ನಲ್ಲೂ ಓಪನಿಂಗ್‌ ನಡೆಸುವುದು ನನ್ನ ಯೋಜನೆಯಾಗಿದೆ’ ಎಂದು ಸರಣಿಶ್ರೇಷ್ಠ ಕೊಹ್ಲಿ ಹೇಳಿದರು.

ಆರ್‌ಸಿಬಿ ಪರ ಕೊಹ್ಲಿ-ಗೇಲ್‌ ಬಹಳಷ್ಟು ಸಲ ಇನ್ನಿಂಗ್ಸ್‌ ಆರಂಭಿಸಿದ್ದರು. ಆದರೆ ಪಡಿಕ್ಕಲ್‌ ಕ್ಲಿಕ್‌ ಆದ ಬಳಿಕ ಕೊಹ್ಲಿ ವನ್‌ಡೌನ್‌ನಲ್ಲೇ ಕ್ರೀಸ್‌ ಇಳಿಯತೊಡಗಿದರು. ಈ ಬಾರಿ ಆರನ್‌ ಫಿಂಚ್‌ ಇಲ್ಲದ ಕಾರಣ ಪಡಿಕ್ಕಲ್‌-ಕೊಹ್ಲಿ ಓಪನಿಂಗ್‌ ಬರುವ ಸಾಧ್ಯತೆ ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next