Advertisement

ಸೋರಿ ಹೋಗುವ ಕಾಲ

06:28 PM Mar 05, 2020 | mahesh |

ಕಾಲವನ್ನು ತಡೆಯೋರು ಯಾರೂ ಇಲ್ಲ ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ ಎಂಬಂತೆ ಕಾಲ ನಿಂತ ನೀರಲ್ಲ ಸದಾ ಚಲಿಸುತ್ತಿರುತ್ತದೆ. ನಮ್ಮ ಜೀವನದಲ್ಲಿ ಸಮಯವು ಅತೀ ಅಮೂಲ್ಯವಾದುದು. ಕಳೆದುಹೋದ ಸಮಯ ಮತ್ತೆ ಹಿಂತಿರುಗಿ ಬರಲು ಸಾಧ್ಯವಿಲ್ಲ. ಹಾಗಾಗಿ, ಈ ಸಮಯ ನಮ್ಮೊಂದಿಗೆ ಇದ್ದವರು ಇನ್ನೊಂದು ಘಳಿಗೆ ನಮ್ಮೊಂದಿಗೆ ಇರಲಾರರು ಎಂಬುದು ಸೂರ್ಯನಷ್ಟೇ ಸತ್ಯ.

Advertisement

ಹೀಗೆ ನನಗೆ ಸಣ್ಣ ವಯಸ್ಸಿನಿಂದಲೂ ಸೈನ್ಯಕ್ಕೆ ಸೇರಿ ದೇಶಸೇವೆ ಮಾಡಬೇಕೆಂಬ ತುಡಿತವಿತ್ತು. ಆಗಾಗ ಕನ್ನಡಿ ಮುಂದೆ ನಿಂತಾಗ ನನ್ನೊಳಗೊಬ್ಬ ಸೈನಿಕನನ್ನು ಕಂಡು ಹೆಮ್ಮೆ ಪಟ್ಟಿದ್ದಿದೆ. ಎಷ್ಟೋ ದಿನ ನಿದ್ರೆಯಲ್ಲಿ ಕನಸು ಕಂಡು ಸೈನಿಕನಂತೆ ಓಡಾಡಿದ್ದು ಇದೆ. ಹೀಗೆ ನಾನು ಪಿ.ಯು.ಸಿ ಮುಗಿಸಿ ಪದವಿಗೆ ಸೇರಿದ ಮೊದಲ ವಾರ. ನನಗಂತೂ ಎನ್‌.ಸಿ.ಸಿ.ಯಲ್ಲಿ ಬಹಳ ಆಸಕ್ತಿ ಇದ್ದ ಕಾರಣ ಅದನ್ನೇ ಆಯ್ದುಕೊಂಡೆ. ತರಗತಿಯಲ್ಲಿ ಇದ್ದರೂ ಕೂಡ ನನ್ನ ಗಮನ ಮಾತ್ರ ಕಾಲೇಜಿನ ಎನ್‌.ಸಿ.ಸಿ. ಆಫೀಸ್‌ ಕಡೆಗೇ ಇರುತ್ತಿತ್ತು. ಆ ಸಮಯದಲ್ಲಿ ಎನ್‌.ಸಿ.ಸಿ.ಗೆ ಸೇರಲು ಒಂದು ಅವಕಾಶ ಸಿಕ್ಕಿದರೆ ಸಾಕೆನಿಸುತ್ತಿತ್ತು.

ನನ್ನಂತೆಯೇ ನನ್ನ ತರಗತಿಯ ಕೆಲವು ಸ್ನೇಹಿತರು ಕೂಡ ಬಹಳ ಆಸಕ್ತಿ ತೋರಿದ್ದ‌ರು. ಅಂತೂ ಆ ದಿನ ಬಂದೇ ಬಿಟ್ಟಿತು. ಆದರೆ, ಎನ್‌.ಸಿ.ಸಿ. ಸೆಲೆಕ್ಷನ್‌ ದಿನ ಆಸಕ್ತಿ ತೋರಿದ ಒಂದಿಷ್ಟು ಗೆಳೆಯರು ಆಯ್ಕೆ ಮಾಡುವ ಸಮಯದಲ್ಲಿ ಬರಲೇ ಇಲ್ಲ. ಯಾವುದೋ ನೆಪ ಹೇಳಿ ಸೆಲೆಕ್ಷನ್‌ ತಪ್ಪಿಸಿಕೊಂಡರು. ನಾನು ಈ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ಈಗ ಎನ್‌.ಸಿ.ಸಿ. ಸಮವಸ್ತ್ರ ಧರಿಸಿ ಕಾಲೇಜಿನ ಕಾರಿಡಾರ್‌ನಲ್ಲಿ ಸೈನಿಕನಂತೆ ಎದೆಯುಬ್ಬಿಸಿ ನಡೆದಾಗ ಅವಕಾಶ ಕಳೆದುಕೊಂಡ ಗೆಳೆಯರು ನನ್ನನ್ನು ಆಸೆಭರಿತ ಕಣ್ಣುಗಳಿಂದ ದಿಟ್ಟಿಸುವುದನ್ನು ಬಹಳ ಬಾರಿ ಕಂಡಿದ್ದೆ. ಕಳೆದುಹೋದ ಸಮಯ ಮತ್ತೆ ತಿರುಗಿ ಬಾರದೇ ಇರುವ ಕಾರಣ ಸಮಯಕ್ಕೆ ವಂಚಿಸಿದರೆ ತಮ್ಮ ಆತ್ಮಸಾಕ್ಷಿಗೆ ವಂಚಿಸಿಕೊಂಡಂತೆ ಎಂಬ ಸತ್ಯವೂ ನನ್ನ ಸೇಹಿತರಿಗೆ ಅರಿವಾಗಿ ಇರಬಹುದು.

ಸಂದೀಪ್‌ ಎಸ್‌. ಮಂಚಿಕಟ್ಟೆ
ಪ್ರಥಮ ಬಿಎ (ಪತ್ರಿಕೋದ್ಯಮ), ವಿವೇಕಾನಂದ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next