Advertisement

ಬದಲಾವಣೆಯ ಸಮಯ?

01:50 AM Jun 20, 2019 | Sriram |

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಸೂಚನೆಗಳು ಕಂಡುಬರುತ್ತಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯನ್ನು ವಿಸರ್ಜಿಸುವ ಮಹತ್ವದ ತೀರ್ಮಾನವನ್ನು ಹೈಕಮಾಂಡ್‌ ಕೈಗೊಂಡಿದೆ.

Advertisement

ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಕೆಪಿಸಿಸಿಗೆ ಮೇಜರ್‌ ಸರ್ಜರಿ ಮಾಡಲು ಉದ್ದೇಶಿಸಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಮಾತ್ರ ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪರ್ದಿಯಲ್ಲಿ ಹೊಸ ಪಡೆ ಕಟ್ಟಲು ಅವಕಾಶ ಕಲ್ಪಿಸಲಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಡಾ| ಜಿ. ಪರಮೇಶ್ವರ್‌ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನೇಮಕಗೊಂಡಿದ್ದ 275ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ಕೈಬಿಡಲಾಗಿದ್ದು, ಇವರಲ್ಲಿ ಹೆಚ್ಚಿನವರು ಪರಮೇಶ್ವರ್‌, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್‌ ಅವರ ನಿಕಟವರ್ತಿಗಳು ಎನ್ನಲಾಗಿದೆ. ಇದರೊಂದಿಗೆ ಸಿದ್ದರಾಮಯ್ಯ ದಿಲ್ಲಿಯಲ್ಲಿ ರಾಜಕೀಯ ದಾಳವನ್ನು ಉರುಳಿಸಿ ಪಕ್ಷದಲ್ಲಿ ತಮಗಿರುವ ಬಿಗಿ ಪಟ್ಟನ್ನು ಮತ್ತೂಮ್ಮೆ ಸಾಬೀತುಪಡಿಸಿದ್ದಾರೆ ಎನ್ನಲಾಗಿದೆ.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಇತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ರಾಹುಲ್ಗಾಂಧಿ ಅವರನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಜೆಡಿಎಸ್‌ ಜತೆಗಿನ ಮೈತ್ರಿಯಿಂದ ಭವಿಷ್ಯದಲ್ಲಿ ಪಕ್ಷಕ್ಕೆ ತೊಂದರೆಯಾಗಲಿದೆ. ಹೀಗಾಗಿ ಮೈತ್ರಿ ಬಿಟ್ಟು ವಿಪಕ್ಷ ಸ್ಥಾನದಲ್ಲಿ ಕುಳಿತು ಪಕ್ಷ ಕಟ್ಟಿ ಚುನಾವಣೆಗೆ ಹೋಗುವುದು ಸೂಕ್ತ ಎಂಬ ಅಭಿಪ್ರಾಯ ನೀಡಿದ್ದಾರೆ ಎಂದು ಹೇಳಲಾಗಿದೆ.

Advertisement

ಇದರ ಸುಳಿವರಿತ ಕುಮಾರಸ್ವಾಮಿ ಅವರು ಖರ್ಗೆ ಅವರನ್ನು ಭೇಟಿ ಮಾಡಿ ಹೈಕಮಾಂಡ್‌ ಜತೆ ಚರ್ಚಿಸಿ ಮೈತ್ರಿ ಮುಂದು ವರಿಯುವಂತೆ ಮಾಡಿ ಎಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಬದಲಾವಣೆಯಾಗುತ್ತಾ?
ಸಮನ್ವಯ ಸಮಿತಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕವಾಗಲಿದ್ದಾರೆ. ಶಾಸಕಾಂಗ ಪಕ್ಷದ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕವಾಗಲಿದ್ದಾರೆ. ಸಿದ್ದರಾಮಯ್ಯ ಒಪ್ಪದಿದ್ದರೆ ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಮೇಲ್ನೋಟಕ್ಕೆ ಮತ್ತೆ ಹೈಕಮಾಂಡ್‌ ಮಟ್ಟದಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿರುವುದರಿಂದ ಅಷ್ಟು ಸುಲಭವಾಗಿ ಸಮನ್ವಯ ಸಮಿತಿ ಹಾಗೂ ಶಾಸಕಾಂಗ ಪಕ್ಷದ ಅಧ್ಯಕ್ಷ ಸ್ಥಾನ ಬಿಟ್ಟುಕೊಡುತ್ತಾರಾ ಎಂಬ ಮಾತುಗಳು ಕೇಳಿಬರುತ್ತಿವೆ.

ಎಚ್‌ಡಿಕೆ- ಖರ್ಗೆ ಮಾತುಕತೆ

ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಗ್ರಾಮ ವಾಸ್ತವ್ಯ ಕುರಿತು ಚರ್ಚಿಸಲು ಬಂದಿದ್ದರು ಎಂಬ ಸಮಜಾಯಿಷಿ ನೀಡಲಾಗಿದೆಯಾದರೂ ರಾಜಕೀಯ ವಿಚಾರಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರು ಮೈತ್ರಿ ಕಡಿದುಕೊಳ್ಳುವ ಬಗ್ಗೆ ಹೈಕಮಾಂಡ್‌ಗೆ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಬೇರೆ ರೀತಿಯ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದ್ದರೆ ಮೈತ್ರಿ ಮುಂದುವರಿಕೆಗೆ ಹೈಕಮಾಂಡ್‌ ಜತೆ ಮಾತನಾಡಿ ಎಂದು ಮನವಿ ಮಾಡಿದರು ಎಂದು ಹೇಳಲಾಗಿದೆ. ದಿಲ್ಲಿಯಲ್ಲಿ ರಾಹುಲ್ ಗಾಂಧಿಯವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದ ಸಚಿವ ಡಿ.ಕೆ.ಶಿವಕುಮಾರ್‌ ಸಹ ರಾಜ್ಯ ರಾಜಕೀಯದ ಕುರಿತು ಮಾಹಿತಿ ನೀಡಿದ್ದಾರೆ.

ವಿಶ್ವನಾಥ್‌- ರಾಮಲಿಂಗಾ ರೆಡ್ಡಿ ಚರ್ಚೆ

ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್. ವಿಶ್ವನಾಥ್‌ ಅವರು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿರುವ ವಿಶ್ವನಾಥ್‌, ಸಚಿವ ಸ್ಥಾನ ಸಿಗದ ಕಾರಣ ಮುನಿಸಿಕೊಂಡಿರುವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಮೈತ್ರಿಯಿಂದ ಕಾಂಗ್ರೆಸ್‌ಗೆ ನಷ್ಟ

ಬುಧವಾರ ಬೆಳಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಲೋಕಸಭೆ ಚುನಾವಣೆ ಸೋಲಿಗೆ ಮೈತ್ರಿಯೇ ಕಾರಣ ಎಂದು ಹೇಳಿದ್ದಾರೆ. ಮುಂದೆಯೂ ಮೈತ್ರಿ ಮುಂದುವರಿದರೆ ಪಕ್ಷಕ್ಕೆ ತೊಂದರೆಯೇ ಹೆಚ್ಚು. ತಳಮಟ್ಟದಲ್ಲಿ ಕಾರ್ಯಕರ್ತರು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂಬುದಕ್ಕೆ ಲೋಕಸಭೆ ಚುನಾವಣೆ ಫ‌ಲಿತಾಂಶವೇ ಉದಾಹರಣೆ ಎಂದು ತಿಳಿಸಿದರು ಎನ್ನಲಾಗಿದೆ. ಮಧ್ಯಾಂತರ ಚುನಾವಣೆಗೆ ಹೋಗುವುದು ಸೂಕ್ತ. ಶಾಸಕರು ಒಪ್ಪದಿದ್ದರೆ ಮೈತ್ರಿ ಕಡಿದುಕೊಂಡು ವಿಪಕ್ಷ ಸ್ಥಾನದಲ್ಲಿ ಕುಳಿತು ಕೆಲಸ ಮಾಡಿ ಪಕ್ಷವನ್ನು ಮತ್ತೆ ಬಲಿಷ್ಠವಾಗಿ ಕಟ್ಟೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ. ಸಿದ್ದರಾಮಯ್ಯ ಅವರು ಎ.ಕೆ.ಆ್ಯಂಟನಿ, ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾದ ಅನಂತರ ರೋಷನ್‌ ಬೇಗ್‌ ಅವರ ಅಮಾನತು ಆದೇಶ ಹೊರಬಿದ್ದಿತ್ತು. ರಾಹುಲ್ಗಾಂಧಿಯವರನ್ನು ಭೇಟಿಯಾದ ಬಳಿಕ ಅಧ್ಯಕ್ಷ -ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿ ಕೆಪಿಸಿಸಿ ಸಮಿತಿ ವಿಸರ್ಜನೆ ಆದೇಶ ಹೊರಡಿಸಲಾಗಿದೆ.

ಚುನಾವಣೆಯಲ್ಲಿ ಸೋತಿರುವ ನಾನು ಸರಕಾರಕ್ಕೆ ಯಾವ ಸಲಹೆ ನೀಡಲಿ? ವರಿಷ್ಠರ ಜತೆಗೆ ಸಿದ್ದರಾಮಯ್ಯ ಭೇಟಿಯಾಗಿರುವ ಬಗ್ಗೆ ಮಾಹಿತಿ ಇಲ್ಲ.
– ಮಲ್ಲಿಕಾರ್ಜುನ ಖರ್ಗೆ,ಕಾಂಗ್ರೆಸ್‌ ನಾಯಕ
Advertisement

Udayavani is now on Telegram. Click here to join our channel and stay updated with the latest news.

Next