Advertisement

ಕಾಡ್ಗಿಚ್ಚಿಗೆ ಟಿಂಬರ್‌ ಮಾಫಿಯಾ ಕಾರಣ

12:21 PM Mar 06, 2017 | Team Udayavani |

ಮೈಸೂರು: ಬಂಡೀಪುರ ಅರಣ್ಯದಲ್ಲಿ ಕಾಣಿಸಿಕೊಂಡಿರುವ ಬೆಂಕಿ ಅನಾಹುತಕ್ಕೆ ಟಿಂಬರ್‌ ಮಾಫಿಯಾ ಹಾವಳಿ ಪ್ರಮುಖ ಕಾರಣವಾಗಿದ್ದು, ಇದನ್ನು ಹತ್ತಿಕ್ಕುವಲ್ಲಿ ಅರಣ್ಯ ಇಲಾಖೆ ವಿಫ‌ಲವಾಗಿದೆ ಎಂದು ಮಾಜಿ ಅರಣ್ಯ ಸಚಿವ ಸಿ.ಎಚ್‌.ವಿಜಯಶಂಕರ್‌ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕೇರಳ ಭಾಗದಿಂದ ಸಂಶಯಾಸ್ಪದ ವ್ಯಕ್ತಿಗಳು ಅತಿಕ್ರಮವಾಗಿ ರಾಜ್ಯದ ಅರಣ್ಯಕ್ಕೆ ಬಂದು ಹೋಗುತ್ತಿದ್ದು, ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದಾಗಿ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದೆ. ಇವರನ್ನು ಹತ್ತಿಕ್ಕುವಲ್ಲಿ ಅರಣ್ಯ ಇಲಾಖೆ ವಿಫ‌ಲವಾಗಿದೆ. ಕಾಡಿನ ದಾರಿಗಳು ಟಿಂಬರ್‌ ಮಾಫಿಯಾ ಹಾಗೂ ದನಗಳ ಕಳ್ಳ ಸಾಗಾಣಿಕೆಗೆ ಅನುಕೂಲವಾಗಿದ್ದು, ಸಂಜೆ ವೇಳೆಯಲ್ಲಿ ಯಾವುದೇ ಆತಂಕವಿಲ್ಲದೆ, ಕಾನೂನಿನ ಭಯವಿಲ್ಲದೆ ಈ ಚಟುವಟಿಕೆಗಳು ನಡೆಯುತ್ತಿದೆ ಎಂದು ದೂರಿದರು.

ಅಧಿಕಾರಿಗಳನ್ನು ಕಾಡಿಗಟ್ಟಿ: ಕಾಡಿನ ಮಧ್ಯಭಾಗದಲ್ಲಿ ಹೈಟೆನÒನ್‌ ವಿದ್ಯುತ್‌ ತಂತಿ ಹಾದು ಹೋಗಿರುವುದರಿಂದಲೂ ಬೆಂಕಿ ಬಿದ್ದಿರುವ ಸಾಧ್ಯತೆ ಇದೆ. ಜತೆಗೆ ವರ್ಷದಿಂದ ಅರಣ್ಯದಲ್ಲಿ ವಾಸವಾಗಿದ್ದ ಆದಿವಾಸಿಗಳನ್ನು ಕಾಡಿನಿಂದ ಹೊರಗೆ ಓಡಿಸಲಾಗಿದೆ. ಜೊತೆಗೆ ಕಾಡಂಚಿನ ಗ್ರಾಮಗಳ ಜನರೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ವಿಶ್ವಾಸ ಕಳೆದುಕೊಂಡಿದ್ದಾರೆ. ಸದ್ಯ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅನೇಕ ಅಧಿಕಾರಿಗಳಿಗೆ ಅರಣ್ಯದ ಪರಿಚಯವೇ ಇಲ್ಲಾ. ಎಲ್ಲಾ ಅಧಿಕಾರಿಗಳು ಬೆಂಗಳೂರಿನ ಮಲ್ಲೇಶ್ವರಂನ ಅರಣ್ಯಭವನದಲ್ಲಿ ಕಾಲ ಕಳೆಯುತ್ತಿದ್ದು, ಇವರನ್ನು ಮೊದಲು ಕಾಡಿನತ್ತ ಕಳಿಸಬೇಕು ಎಂದು ಒತ್ತಾಯಿಸಿದರು.

ಕಾರು, ಕಂಪ್ಯೂಟರ್‌ಗೆ ಸೀಮಿತ: ಅರಣ್ಯ ಇಲಾಖೆ ಯಲ್ಲಿ ಕಾಡುತ್ತಿರುವ ಸಿಬ್ಬಂದಿ ಕೊರತೆಯಿಂದಾಗಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ. ಅದರಂತೆ ಇಲಾಖೆಯಲ್ಲಿ ಎಸಿಎಫ್-11, ಆರ್‌ಎಫ್ಒ-188, ಡಿಆರ್‌ಎಫ್ಒ-1181, ಅರಣ್ಯ ವೀಕ್ಷಕರು-159, ಉನ್ನತ ಅಧಿಕಾರಿಗಳು-22 ಹುದ್ದೆಗಳು ಖಾಲಿ ಇವೆ. ಇದರ ನಡುವೆ ಮೂವರು ಐಎಫ್ಎಸ್‌ ಅಧಿಕಾರಿಗಳು ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದು, ಜತೆಗೆ ಇಲಾಖೆಯಲ್ಲಿರುವ 99 ಮಂದಿ ಎಎಫ್ಎಸ್‌ ಅಧಿಕಾರಿಗಳಲ್ಲಿ ಶೇ.50 ಮಂದಿ ಕಾರು ಮತ್ತು ಕಂಪ್ಯೂಟರ್‌ಗೆ ಮಾತ್ರವೇ ಸೀಮಿತವಾಗಿದ್ದಾರೆ. ಇವರುಗಳಿಗೆ ಕಾಡಿನ ರಕ್ಷಣೆ ಹಾಗೂ ಕಾಡಿನ ಬಗ್ಗೆ ಕಿಂಚಿತ್ತು ಮಾಹಿತಿ ಇಲ್ಲ ಎಂದು ಸಿ.ಎಚ್‌. ವಿಜಯಶಂಕರ್‌ ಕಿಡಿಕಾರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ನಗರಾಧ್ಯಕ್ಷ ಡಾ. ಮಂಜುನಾಥ್‌, ಪ್ರಮುಖರಾದ ಮೈ.ಪೋ.ರಾಜೇಶ್‌, ಪ್ರಬಾಕರ್‌ ಶಿಂಧೆ ಹಾಜರಿದ್ದರು.

Advertisement

ನಾನು ಅರಣ್ಯ ಸಚಿವನಾಗಿದ್ದಾಗ ಈ ರೀತಿ ಬೆಂಕಿ ಬಿದ್ದಿದ್ದರೆ ಅದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೆ. ಅರಣ್ಯಕ್ಕೆ ಬೆಂಕಿ ಬಿದ್ದಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು. ಈ ವಿಚಾರದ ಬಗ್ಗೆ ಚರ್ಚಿಸುವ ಸಲುವಾಗಿಯೇ ವಿಶೇಷ ಅಧಿವೇಶನವನ್ನು ಕರೆಯಬೇಕು. ನಿವೃತ್ತ ಸೇನಾಯೋಧರನ್ನು ಅರಣ್ಯ ರಕ್ಷಣೆಗೆ ನೇಮಿಸಿಕೊಳ್ಳಬೇಕು.
-ಸಿ.ಎಚ್‌.ವಿಜಯಶಂಕರ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next