Advertisement

ಸರಕಾರದ ಧಾರಣೆಯಲ್ಲಿ ಅರಣ್ಯ ಇಲಾಖೆಯಿಂದ ಮರ ಒದಗಣೆ!

04:50 AM Jul 12, 2017 | Karthik A |

ಪುತ್ತೂರು: ಚೆನ್ನೈಯ ಹಸಿರು ಪೀಠ ಸ್ವಂತ ಜಾಗದಿಂದ ಮರ ಕಡಿಯಬಾರದು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪಟ್ಟಾ ಜಮೀನು, ಅರಣ್ಯ ಇಲಾಖೆ ವ್ಯಾಪ್ತಿ ಪ್ರದೇಶಕ್ಕೂ ಈ ಆದೇಶ ಅನ್ವಯವಾಗಲಿದೆ. ಹಾಗಾದರೆ ಅಗತ್ಯ ಸಂದರ್ಭದ ಮರಮಟ್ಟುಗಳಿಗೆ ಏನು ಮಾಡುವುದು ಎಂಬ ಚಿಂತೆ ಕಾಡುವುದು ಸಹಜ. ರಾಜ್ಯದ ಜನರಿಗೆ ಆ ಚಿಂತೆ ಬೇಡ. ಕಾರಣ ಅಗತ್ಯ ಸಂದರ್ಭ ಮರ ಒದಗಿಸಲು ರಾಜ್ಯ ಸರಕಾರ ಅರಣ್ಯ ಇಲಾಖೆ ಮೂಲಕ ಹೊಸ ಯೋಜನೆ ಅನುಷ್ಠಾನಿಸುತ್ತಿದೆ. ಅಂದರೆ ಸರಕಾರಿ ಧಾರಣೆಯಲ್ಲೇ ಅರಣ್ಯ ಇಲಾಖೆಯ ಡಿಪೋದಿಂದ ಮರ ಒದಗಿಸುವ ಮಹತ್ವದ ಯೋಜನೆ ಜು. 14ರಂದು ಜಾರಿಗೆ ಬರಲಿದೆ!

Advertisement

ಏನು ಮಾಡಬೇಕು?
ಮರ ಬೇಕಾದ ವ್ಯಕ್ತಿ ತನ್ನ ವ್ಯಾಪ್ತಿಯ ಸ್ಥಳೀಯಾಡಳಿತ ಸಂಸ್ಥೆಯಿಂದ (ಗ್ರಾ.ಪಂ.,ಪಟ್ಟಣ ಪಂಚಾಯತ್‌ ಇತ್ಯಾದಿ) ಮನೆಗೆ ಬೇಕಾದ ಮರದ ಬಗ್ಗೆ ಪ್ಲಾನ್‌ ತಯಾರಿಸಬೇಕು. ಅದರ ಜತೆಗೆ ಖರೀದಿಗೆ ಸಂಬಂಧಿಸಿ ಅರಣ್ಯ ಇಲಾಖೆಯ ಅರ್ಜಿ ಫಾರಂನಲ್ಲಿ ಬೇಕಾದ ಮರದ ಪ್ರಮಾಣ, ಯಾವ ಜಾತಿಯ ಮರ ಎನ್ನುವುದನ್ನು ದಾಖಲಿಸಬೇಕು. ಇಷ್ಟಾದ ಬಳಿಕ ಅರಣ್ಯ ಇಲಾಖೆ ಡಿಪೋದಲ್ಲಿ ಬಯಸಿದ ಮರಗಳನ್ನು ಸರಕಾರಿ ಧಾರಣೆಯಂತೆ ತತ್‌ಕ್ಷಣವೇ ನೀಡಲಾಗುತ್ತದೆ. ಅರ್ಜಿಯಲ್ಲಿ ದಾಖಲಿಸದ ಮರ ಬೇಕು ಎಂದರೆ, ಅದಕ್ಕೆ ಸರಕಾರಿ ಧಾರಣೆಯ ಶೇ.10 ಅಧಿಕ ಮೊತ್ತ ತೆತ್ತು ಪಡೆದುಕೊಳ್ಳುವ ಅವಕಾಶ ಇದೆ ಎನ್ನಲಾಗಿದೆ. ಸಾಗುವಾನಿ, ಹಲಸು ಮೊದಲಾದ ಅಗತ್ಯ ಮರ ಖರೀದಿ ಪಟ್ಟಿಯಲ್ಲಿ ಇರುವುದರಿಂದ ಜನರಿಗೆ ಅನುಕೂಲವಾಗಲಿದೆ. ಈ ಯೋಜನೆ ಹೇಗೆಂದರೆ ಅಂಗಡಿಯಲ್ಲಿ ದುಡ್ಡು ಕೊಟ್ಟು ತಮಗೆ ಬೇಕಾದ ವಸ್ತು ಖರೀದಿಸುವಂತೆ.

ಯೋಜನೆ ಲಾಭವೇನು?
ಮಧ್ಯವರ್ತಿಗಳ ಲಾಬಿಯಿಂದ ಜನರಿಗೆ ಮುಕ್ತಿ ಸಿಗಲಿದೆ. ವ್ಯಾಪಾರಿಗಳಿಗೆ ದುಪ್ಪಟ್ಟು ದರ ತೆತ್ತು ಮರ ಖರೀದಿಸಬೇಕಿಲ್ಲ. ಪಂಚಾಯತ್‌ ಅಥವಾ ಇನ್ನಿತರ ಸ್ಥಳೀಯ ಸಂಸ್ಥೆಯಿಂದ ಪ್ಲಾನ್‌ ಕೊಟ್ಟರೆ ಸಾಕು. ಇಲ್ಲಿ ಅರಣ್ಯ ಇಲಾಖೆಯೇ ಮರ ನೀಡುತ್ತದೆ. ಅಕ್ರಮ ಮರ ಸಾಗಾಟ, ಕಡಿಯುವಿಕೆ ಇವೆಲ್ಲದಕ್ಕೆ ಮುಕ್ತಿ ದೊರೆಯಲಿದೆ ಎಂಬ ಲೆಕ್ಕಚಾರ ಇಲಾಖೆಯದ್ದು.

ಮರ ಕಡಿಯುವುದಾದರೆ…
ಸ್ವಂತ ಉದ್ದೇಶಕ್ಕೂ ಮರ ಕಡಿಯುವಂತಿಲ್ಲ ಎಂಬ ಚೆನ್ನೈ ಹಸಿರು ಪೀಠ ಆದೇಶದ ಹಿನ್ನೆಲೆಯಲ್ಲಿ, ಡಿಪೋದಿಂದಲೇ ಅಗತ್ಯ ಮರ ವಿತರಿಸುವ ಯೋಜನೆ ಮಹತ್ವ ಪಡೆದಿದೆ. ಆದರೆ ಮರ ಕಡಿಯಬೇಕು ಎಂದಾದರೆ ಅದಕ್ಕೂ ಅವಕಾಶ ಇದೆ. ಕಡಿದ ಒಂದು ಮರಕ್ಕೆ ಪರ್ಯಾಯವಾಗಿ ಹತ್ತು ಗಿಡ ನೆಡುವುದೇ ಇದಕ್ಕಿರುವ ಪರಿಹಾರ ಕ್ರಮ. ಗಿಡ ನೆಡುವ ಪ್ರಕ್ರಿಯೆ ಮರ ಕಡಿಯುವ ಮೊದಲೇ ಆಗಬೇಕು. ಗಿಡ ನೆಟ್ಟು ಪೋಷಣೆ ಮಾಡದಿದ್ದರೆ ಅದರಿಂದ ಪ್ರಯೋಜನ ಇಲ್ಲ ಎಂಬ ಕಾರಣಕ್ಕೆ ಮರ ಕಡಿಯುವ, ಗಿಡ ನೆಡುವ ವ್ಯಕ್ತಿ ಪ್ರತಿ ಗಿಡದ ಪೋಷಣೆಗೆ ತಲಾ 200 ರೂ. ನಂತೆ ಅರಣ್ಯ ಇಲಾಖೆಯಲ್ಲಿ ಠೇವಣಿ ಇಡಬೇಕು. ನೆಟ್ಟ ಗಿಡಕ್ಕೆ ಐದು ವರ್ಷ ತುಂಬಿದ ಅನಂತರ ಠೇವಣಿ ಹಣ ಮರು ಪಾವತಿಸಲಾಗುತ್ತದೆ ಎಂದೂ ಉಲ್ಲೇಖೀಸಲಾಗಿದೆ.

ಈಗಾಗಲೇ ಒಂದು ಮರ ಕಡಿದರೆ 2 ಗಿಡ ನೆಡಬೇಕು ಎಂಬ ಕಾನೂನು ಜಾರಿ ಇರುವ ಹಿನ್ನೆಲೆಯಲ್ಲಿ ಹೊಸ ಆದೇಶ ಪಾಲನೆಗೆ ತೊಂದರೆ ಆಗಬಹುದು ಎಂದು ಅರಣ್ಯ ಇಲಾಖೆ ಹಸಿರು ಪೀಠಕ್ಕೆ ಅಫಿದವಿತ್‌ ಸಲ್ಲಿಸಿತ್ತು. ಆದರೆ ಆದೇಶವನ್ನು ಯಥಾವತ್ತು ಪಾಲಿಸುವಂತೆ, ಹಸಿರು ಪೀಠ ಈಗಾಗಲೇ ಸೂಚಿಸಿದೆ. ಈ ಆದೇಶ ಪಟ್ಟಾಭೂಮಿ ಮಾತ್ರ ಅಲ್ಲ. ಬದಲಿಗೆ ಅರಣ್ಯ ಇಲಾಖೆ ವ್ಯಾಪ್ತಿಯ ಪ್ಲಾಂಟೇಶನ್‌ಗಳಿಗೂ ಅನ್ವಯಿಸುತ್ತದೆ.

Advertisement

80,000 ಮರ
ರಾಜ್ಯದ ಅರಣ್ಯ ಇಲಾಖೆಯ ಡಿಪೋದಲ್ಲಿ 80,000 ಮರಗಳ ಸಂಗ್ರಹವಿದೆ. ರಸ್ತೆ ವಿಸ್ತರಣೆ ಸಂದರ್ಭ ಕಡಿದ ಮರ ಇದಾಗಿದೆ. ಮರಮಟ್ಟು ಒದಗಿಸುವ ಯೋಜನೆಯಡಿ ಅದನ್ನು ಫಲಾನುಭವಿಗೆ ನೀಡಬಹುದು. ಹಸಿರು ಪೀಠದ ಆದೇಶದ ಅನ್ವಯ ಇನ್ನು ಮುಂದೆ ರಸ್ತೆ ಬದಿಗಳಲ್ಲೂ ಮರ ಕಡಿಯುವಂತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಮರ ವಿತರಣೆಗೆ ಕೊರತೆ ಎದುರಾಗುವ ಸಾಧ್ಯತೆ ಇದೆ ಅನ್ನುವುದು ಗಮನದಲ್ಲಿರಬೇಕಾದ ಸಂಗತಿ.

ಯೋಜನೆ ಸಿದ್ಧ
ಅಗತ್ಯದ ಸಂದರ್ಭ ಜನರಿಗೆ ಮನೆ, ಕಟ್ಟಡ ನಿರ್ಮಾಣಕ್ಕೆ ಬೇಕಾದ ಮರ ವಿತರಿಸುವ ಯೋಜನೆ ಜು. 14ರಂದು ಜಾರಿಗೆ ಬರಲಿದೆ. ಇಲ್ಲಿ ಫಲಾನುಭವಿ ದಾಖಲೆ ಪತ್ರ ಸಲ್ಲಿಸಿ ಅರಣ್ಯ ಇಲಾಖೆಯಿಂದ ಮರ ಪಡೆದುಕೊಳ್ಳುವುದು. ಅದಕ್ಕೆ ಇಂತಿಷ್ಟು ಧಾರಣೆ ಪಾವತಿಸಬೇಕು. ಧಾರಣೆ ಕುರಿತಂತೆ ಯೋಜನೆ ಜಾರಿ ಸಂದರ್ಭ ಪಟ್ಟಿ ಪ್ರಕಟಿಸಲಾಗುವುದು.
– ಸಂಜಯ್‌ ಎಸ್‌. ಬಿಜೂರು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು

ಮರ ಕಡಿಯುವಂತಿಲ್ಲ
ಹಸಿರು ಪೀಠ ಸೂಚನೆಯಂತೆ ಸ್ವಂತ ಜಮೀನಿನಿಂದ ಮರ ಕಡಿಯುವಂತಿಲ್ಲ. ತುರ್ತು ಸಂದರ್ಭ ಮರ ಕಡಿಯಬೇಕಿದ್ದರೆ, 1 ಮರಕ್ಕೆ 10 ಗಿಡ ನೆಡಬೇಕು. ಪೋಷಣೆಗೆ ಠೇವಣಿ ಇರಿಸಬೇಕು.
– ವಿ.ಪಿ. ಕಾರ್ಯಪ್ಪ, ವಲಯ ಅರಣ್ಯಧಿಕಾರಿ, ಪುತ್ತೂರು,

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next