Advertisement
ವಶಕ್ಕೆ ಪಡೆದಿದ್ದ ವ್ಯಕ್ತಿಯನ್ನು ಪೊಲೀಸರೇ ಲಾಕಪ್ ಡೆತ್ ಮಾಡಿದ್ದಾರೆಂದು ಆರೋಪಿಸಿ ಐದು ನೂರಕ್ಕೂ ಹೆಚ್ಚು ಜನ ಏಕಾಏಕಿ ಠಾಣೆಗೆ ನುಗ್ಗಿ ಕಲ್ಲು ತೂರಾಟ ನಡೆಸಿ, ಠಾಣೆಯ ಕಿಟಕಿ ಬಾಗಿಲು, ಪೊಲೀಸರ ಬಸ್, ಜೀಪ್ ಸೇರಿದಂತೆ ಇನ್ನಿತರ ವಾಹನಗಳನ್ನು ಉರುಳಿಸಿ ಧ್ವಂಸಗೊಳಿಸಿದ್ದರು. ಇದನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಸಿಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು.
Related Articles
Advertisement
ಮಟ್ಕಾ ಜೂಜಾಟದ ಅನುಮಾನದ ಮೇಲೆ ವಿಚಾರಣೆ ನಡೆಸಲು ಪಟ್ಟಣದ ಟಿಪ್ಪುನಗರದ ನಿವಾಸಿ ಕಾರ್ಪೆಂಟರ್ ಆದಿಲ್ (32)ನನ್ನು ಪೊಲೀಸರು ಠಾಣೆಗೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಆತ ಕಡಿಮೆ ರಕ್ತದೊತ್ತಡದಿಂದ ಕುಸಿದು ಬಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದುರೂ ಆತ ಬದುಕುಳಿಯಲಿಲ್ಲ. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು, ಸಂಬಂಧಿಕರು ಠಾಣೆಯ ಮುಂದೆ ಶವ ಇಟ್ಟು, ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಆದಿಲ್‌ನನ್ನು ಪೊಲೀಸರೇ ಹೊಡೆದು ಲಾಕಪ್ ಡೆತ್ ಮಾಡಿದ್ದಾರಂತೆ ಎಂಬ ಸುದ್ದಿ ಮಿಂಚಿನಂತೆ ಹಬ್ಬಿ, 500ಕ್ಕೂ ಹೆಚ್ಚು ಜನರು ಠಾಣೆಗೆ ನುಗ್ಗಿ ಕಿಟಕಿ ಗಾಜು, ಪೊಲೀಸ್ ವಾಹನಗಳಿಗೆ ಕಲ್ಲು ತೂರಿ ಧ್ವಂಸಗೊಳಿಸಿದ್ದರು.
ಠಾಣೆಯಲ್ಲಿ ಆರೇಳು ನಿಮಿಷವೂ ಇರಲಿಲ್ಲ- ಎಸ್ಪಿ
ನಿನ್ನೆ ಪೊಲೀಸ್ ಆದಿಲ್ ಎಂಬ ವ್ಯಕ್ತಿಯನ್ನು ಕರೆತರಲಾಗಿತ್ತು. ಠಾಣೆಗೆ ಕರೆತರುತ್ತಿದ್ದಂತೆ ಆತ ಕುಸಿದು ಬಿದ್ದ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಆರರಿಂದ ಏಳು ನಿಮಿಷ ಕೂಡ ಇರಲಿಲ್ಲ. ಮೃತನ ಕಡೆಯವರು ಲಾಕಪ್ ಡೆತ್ ಎಂದು ಹೇಳುತ್ತಿದ್ದಾರೆ, ನಮ್ಮಲ್ಲಿ ಸಿಸಿ ಕ್ಯಾಮರಾ ಇದೆ. ಎಲ್ಲ ಪರಿಶೀಲನೆ ಮಾಡಲಾಗುತ್ತಿದೆ. ಪ್ರಾಮಾಣಿಕ ತನಿಖೆ ಮಾಡುತ್ತೇವೆ. ಮೃತನ ತಂದೆ ಈ ಕುರಿತು ದೂರು ಕೊಟ್ಟಿದ್ಸಾರೆ ತನಿಖೆ ಆಗುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿ ಮೂರು ಪ್ರಕರಣ ದಾಖಲಾಗಿದೆ. ಏಳು ಪೊಲೀಸ್ ವಾಹನ ಹಾಗೂ ಹನ್ನೊಂದು ಜನ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ನಿಷೇಧಾಜ್ಞೆ ಜಾರಿಗೊಳಿಸಿಲ್ಲ ಎಂದು ದಾವಣಗೆರೆ ಎಸ್ ಪಿ ಉಮಾ ಪ್ರಶಾಂತ್ ಹೇಳಿದ್ದಾರೆ.
ನ್ಯಾಯಾಧೀಶರ ಸಮ್ಮುಖದಲ್ಲೇ ಮರಣೋತ್ತರ ಪರೀಕ್ಷೆ: ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಈಗಾಗಲೇ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಗಂಭೀರ ಪ್ರಕರಣ ಇದಾಗಿರುವದರಿಂದ ನ್ಯಾಯಾಧೀಶರ ಸಮ್ಮುಖದಲ್ಲಿ ಶವ ಪರೀಕ್ಷೆ ಮಾಡಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.