Advertisement

ಬಿಜೆಪಿಯಿಂದ ಹುಲಿ ಸವಾರಿ : ರೈ ವ್ಯಂಗ್ಯ

12:40 PM Dec 09, 2017 | Team Udayavani |

ಬೆಳ್ತಂಗಡಿ: ಬಿಜೆಪಿ ಹುಲಿ ಸವಾರಿ ಮಾಡುತ್ತಿದೆ. ಮುಂದೊಂದು ಅದೇ ಹುಲಿ ಇವರನ್ನು ಆಹುತಿ ತೆಗೆದುಕೊಳ್ಳುತ್ತದೆ ಎಂಬ ಸತ್ಯ ಅವರಿಗಿಲ್ಲ . ಸಂಸದರಾದ ಪ್ರತಾಪ್‌ ಸಿಂಹ, ನಳಿನ್‌ ಕುಮಾರ್‌ ಕಟೀಲ್‌, ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಅವರು ಸಭ್ಯತೆ ಮೀರಿ ಮಾತನಾಡುತ್ತಿದ್ದಾರೆ. ಗಲಾಟೆಗೆ ಬಿಜೆಪಿ ಹೈಕಮಾಂಡ್‌ ಸೂಚಿಸುತ್ತದೆ ಎಂದಾದರೆ ಅವರಿಗೆ ಅಧಿಕಾರ ಸಿಕ್ಕಿದರೆ ಪರಿಸ್ಥಿತಿ ಏನಾಗಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಪ್ರಶ್ನಿಸಿದರು. 

Advertisement

ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ, ಮಾತನಾಡಿ, ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ ನೀಡುವ  ಸಂಸದರಿಂದ ಯಾವ ಸಂಸ್ಕಾರ ನಿರೀಕ್ಷಿಸಬಹುದು? ದ.ಕ. ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ಹಿಂದೂ ಸಮಾಜಕ್ಕೆ ಕಾಂಗ್ರೆಸ್‌ ಸರಕಾರದ ಹಲವು ಯೋಜನೆಗಳಿಂದ ಪ್ರಯೋಜನಗಳಾಗಿವೆ. ಬಿಜೆಪಿಯಿಂದ ಜೈಲು ಭಾಗ್ಯ ಮಾತ್ರ. ಜಿಲ್ಲೆಯಲ್ಲಿ ಜನ ಭಯಭೀತರಾಗಿ ಬಾಳುವಂತೆ ಹತ್ಯೆಗಳನ್ನು ನಡೆಸಿದರು. ಆದ್ದರಿಂದ ಜಾತ್ಯತೀತ ಮನೋಭಾವದ ಸಮಾನ ಮನಸ್ಕ ಸಂಘಟನೆಗಳ ಜತೆಗೂಡಿ ಡಿ.12ರಂದು ಫ‌ರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯದ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದರು. ಇಂತಹ ನಡಿಗೆಯನ್ನು ಮುಂದಿನ ದಿನಗಳಲ್ಲಿ ಇತರ ವಿಧಾನಸಭಾ ಕ್ಷೇತ್ರದಲ್ಲೂ ಹಮ್ಮಿಕೊಳ್ಳಲಾಗುವುದು. ಇದರಲ್ಲಿ ಯಾವುದೇ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವಿಲ್ಲ. ಹತ್ಯೆಗಳಲ್ಲಿ ಭಾಗಿಯಾದ ಸಂಘಟನೆಗಳನ್ನು ಹೊರತುಪಡಿಸಿ, ಇತರೆಲ್ಲ ಸಂಘಟನೆಗಳು, ಪಕ್ಷಗಳು ನಡಿಗೆಯಲ್ಲಿ ಭಾಗಿಯಾಗಲಿವೆ ಎಂದರು.   

ಶಾಸಕ ಕೆ. ವಸಂತ ಬಂಗೇರ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೆ. ಹರೀಶ್‌ ಕುಮಾರ್‌, ಕೆಪಿಸಿಸಿ ಹಿಂದುಳಿದ ಘಟಕದ ರಾಜ್ಯ ಉಪಾಧ್ಯಕ್ಷ ಬಿ. ಪೀತಾಂಬರ ಹೇರಾಜೆ, ಬ್ಲಾಕ್‌ ಕಾಂಗ್ರೆಸ್‌ ನಗರ ಅಧ್ಯಕ್ಷ ರಾಜಶೇಖರ ಅಜ್ರಿ, ಗ್ರಾಮಾಂತರ ಅಧ್ಯಕ್ಷ ಶ್ರೀನಿವಾಸ ಕಿಣಿ, ಕೆಪಿಸಿಸಿ ಸದಸ್ಯ ರಾಮಚಂದ್ರ ಗೌಡ, ಸಿಪಿಐಎಂ ಕಾರ್ಯದರ್ಶಿ ಶಿವಕುಮಾರ್‌, ರೈತ ಸಂಘದ ಬಿ.ಎಂ. ಭಟ್‌, ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗ ಸಂಚಾಲಕ ಚಂದು ಎಲ್‌, ಜಿ.ಪಂ. ಸದಸ್ಯರಾದ ಧರಣೇಂದ್ರ, ಸಾಹುಲ್‌ ಹಮೀದ್‌ ಕೆ.ಕೆ., ನಮಿತಾ, ಶೇಖರ ಕುಕ್ಕೇಡಿ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್‌ , ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next