ಎಚ್.ಡಿ.ಕೋಟೆ: ತಾಲೂಕಿನ ನಾಗರ ಹೊಳೆ ಉದ್ಯಾನದ ಡಿ.ಬಿ.ಕುಪ್ಪೆ ವ್ಯಾಪ್ತಿ ಯಲ್ಲಿ ಇಬ್ಬರನ್ನು ಕೊಂದಿದ್ದ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯು ಐದು ಆನೆಗಳ ಸಹಾಯ ದಿಂದ ಗುರವಾರ ಕೂಡ ಕಾರ್ಯಾಚರಣೆ ನಡೆಸುತ್ತಿದ್ದರೆ, ಇತ್ತ ನರಭಕ್ಷಕ ಹುಲಿ ಮತ್ತೂಬ್ಬರನ್ನು ಬಲಿಪಡೆದಿದೆ. ಇದರೊಂದಿಗೆ ಮೂರು ಮಂದಿಯನ್ನು ಬಲಿ ಪಡೆದುಕೊಂಡಿದೆ.
ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಪಂ ವ್ಯಾಪ್ತಿಯ ತಿಮ್ಮನಹೊಸಹಳ್ಳಿ ಗಿರಿಜನ ಹಾಡಿಯ ಕೆಂಚ ಆಲಿಯಾಸ್ ಬೊಳ್ಳ (55) ಗುರುವಾರ ಹುಲಿ ದಾಳಿಗೆ ಸಿಲುಕಿ ಮೃತಪಟ್ಟ ದುರ್ದೈವಿ. ಕೆಂಚ ತನ್ನ ಮೊಮ್ಮಗ 15 ವರ್ಷದ ಕುಳ್ಳನೊಂದಿಗೆ ಮೇಕೆ (ಆಡು) ಮೇಯಿಸಿ ಕೊಂಡು ನಾಗರಹೊಳೆ ಉದ್ಯಾನವನಕ್ಕೆ ಚಾಚಿಕೊಂಡಿರುವ ಸೇಬಿನಕೊಲ್ಲಿಗೆ ತೆರಳಿದ್ದರು.
ಮೇಕೆಗಳನ್ನು ಮೇಯಿಸಿ ಕೊಂಡು ತಿನ್ನಲು ಗೆಡ್ಡೆ ಗೆಣಸನ್ನು ಸಂಗ್ರಹಿಸಿಕೊಂಡು ಮನೆಯ ಕಡೆಗೆ ಬರುತ್ತಿದ್ದಾಗ ಹುಲಿ ಏಕಾಏಕಿ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಜೊತೆ ಯಲ್ಲಿದ್ದ ಮೊಮ್ಮಗ ಕುಳ್ಳ ತನ್ನ ಬಳಿಯಿದ್ದ ಕಬ್ಬಿಣದ ರಾಡಿನಿಂದ, ಕಲ್ಲಿನಿಂದ ಹುಲಿಗೆ ಹೊಡೆದು ಓಡಿಸಿದ್ದಾನೆ. ಅಷ್ಟೊತ್ತಿ ಗಾಗಲೇ ಹುಲಿ ದಾಳಿಯಿಂದ ಗಂಭಿರ ವಾಗಿ ಗಾಯಗೊಂಡ ಕೆಂಚ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕಳೆದ ಡಿ.25 ರಂದು ಮಾನಿಮೂಲೆ ಹಾಡಿಯಲ್ಲಿ ಮಧು ಎಂಬ ಯುವಕನ ಮೇಲೆ ದಾಳಿ ಬಲಿ ಪಡೆದಿದ್ದ ವ್ಯಾಘ್ರ, ಕಳೆದ ಮೂರು ದಿನಗಳ ಹಿಂದಷ್ಟೇ ಜ.28 ರ ಸೋಮಾರ ಮಚ್ಚಾರು ಸಮೀಪದ ಹುಲ್ಲುಮಟ್ಲು ಗ್ರಾಮದ ಚಿನ್ನಪ್ಪನ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಘಟನೆ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ನರಭಕ್ಷಕ ಹುಲಿ ಸೆರೆಗಾಗಿ ಹತ್ತಾರು ಟ್ರ್ಯಾಪಿಂಗ್ ಕ್ಯಾಮರಾಗಳನ್ನು ಆಳವಡಿಸಿ, 5 ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ಕೈಗೊಂಡಿದ್ದರೂ ವ್ಯಾಘ್ರನ ಸುಳಿವು ಸಿಕ್ಕಿರಲಿಲ್ಲ.
ಗುರುವಾರ ಕೂಡ ಹುಲಿ ಸೆರೆಗಾಗಿ ಸಾಕಾನೆಗಳಾದ ಅರ್ಜುನ, ಕೃಷ್ಣ, ಭೀಮ, ಸರಳ ಮತ್ತು ಕುಮಾರಸ್ವಾಮಿ ಆನೆಗಳನ್ನು ಕಾರ್ಯಾಚರಣೆಗೆ ಬಳಸಿ ಕೊಂಡು ಕಾಡಂಚಿನ ಗ್ರಾಮ ಹಾಗೂ ಕಬಿನಿ ಹಿನ್ನೀರಿನ ಸುತ್ತಮುತ್ತ ಸುಮಾರು 10 ಕಿ.ಮೀ.ಗೂ ಹೆಚ್ಚು ಕಾಡಿನ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸ ಲಾಗುತ್ತಿತ್ತು. ಈ ವೇಳೆ ತಿಮ್ಮನ ಹೊಸಳ್ಳಿ ಹಾಡಿ ಬಸ್‌ನಿಲ್ದಾಣದ ಸಮೀಪದಲ್ಲೇ ನರಭಕ್ಷಕ ಪ್ರತ್ಯಕ್ಷನಾಗಿ ದಾಳಿ ಮಾಡಿ ಕೆಂಚನನ್ನು ಕೊಂದು ಹಾಕಿದೆ.
ಬೋನ್ ಅಳವಡಿಕೆ: ಹುಲಿ ಸೆರೆಗೆ ಕೆಲವೆಡೆ ಬೋನು ಇರಿಸಿದ್ದು, ಸ್ಥಳದಲ್ಲಿ ವನ್ಯಜೀವಿ ತಜ್ಞ ವೈದ್ಯ ಡಾ.ಮುಜೀಬ್ ಅಹ್ಮದ್ ಸಹ ಬೀಡು ಬಿಟ್ಟಿದ್ದು, ಅರವಳಿಕೆ ಚುಚ್ಚುಮದ್ದನ್ನು ನೀಡಲು ತಯಾರಿ ಮಾಡಿಕೊಂಡಿದ್ದಾರೆ. ಡಿ.ಬಿ. ಕುಪ್ಪೆ ವನ್ಯಜೀವಿ ವಲಯದ ಆರ್‌ಎಫ್‌ಒ ಸುಬ್ರಹ್ಮಣ್ಯ ಮತ್ತು ಇನ್ನಿತರ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾ ಚರಣೆಯಲ್ಲಿ ಉಪಸ್ಥಿತರಿದ್ದರು.