ಯಾದಗಿರಿ : ತಾಲೂಕಿನ ಹತ್ತಿಕುಣಿ ಅರಣ್ಯ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಹುಲಿ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕ ಮನೆ ಮಾಡಿದೆ.
ಜಿಲ್ಲೆಯಲ್ಲಿ ಈ ಹಿಂದೆ ಎಲ್ಲಿಯೂ ಹುಲಿ ಕಂಡಿರಲಿಲ್ಲ. ಆದರೆ ಈಗ ಗ್ರಾಮಸ್ಥರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.
ಈ ಭಾಗದ ಅರಣ್ಯ ಪ್ರದೇಶದಲ್ಲಿ ಹತ್ತಿಕುಣಿ ಅರಣ್ಯ ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವುದು ವನ್ಯ ಜೀವಿಗಳ ವಾಸಕ್ಕೆ ಯೋಗ್ಯ ಸ್ಥಾನವಾಗಿದೆ.
ಕೆಲ ದಿನಗಳ ಹಿಂದೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ಪುರಸಭೆ ಸಿಬ್ಬಂದಿ ಬೀದಿ ನಾಯಿಗಳನ್ನು ಹತ್ತಿಕುಣಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋಗಿದ್ದರಿಂದ ಎಲ್ಲಿಯೋ ತಂಗಿದ್ದ ಹುಲಿ ಈಗ ಭೇಟೆಯಾಡಲು ಬಂದಿರಬಹುದು ಎನ್ನಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಹುಲಿ ಓಡಾಡಿರುವ ಕುರಿತು ಖಚಿತಪಡಿಸಿದ್ದು, ಭಯ ಪಡದಿರಿ ರಾತ್ರಿ ವೇಳೆ ತಪಾಸಣೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಇಲ್ಲಿನ ಜನರಲ್ಲಿ ತೀವ್ರ ಆತಂಕ ವ್ಯಕ್ತಪಡಿಸಿದ್ದು ಪ್ರಾಣ ಹಾನಿಗೂ ಮುನ್ನ ಹುಲಿಯನ್ನು ಸೆರೆ ಹಿಡಿಯಲು ಒತ್ತಾಯಿಸಿದ್ದಾರೆ.