ಬೆಂಗಳೂರು: ಹುಲಿ ಉಗುರು ವಿಚಾರಕ್ಕೆ ಸಂಬಂಧಿಸಿ ರಾಜ್ಯಸಭಾ ಸದಸ್ಯ ಹಾಗೂ ಚಿತ್ರನಟ ಜಗ್ಗೇಶ್ ಅವರಿಗೆ ಅರಣ್ಯ ಇಲಾಖೆ ನೀಡಿದ್ದ ನೋಟಿಸ್ ಹಾಗೂ ಸರ್ಚ್ ವಾರಂಟ್‌ಗೆ ಹೈಕೋರ್ಟ್ ಮಧ್ಯಾಂತರ ತಡೆ ನೀಡಿದೆ.
ಈ ಸಂಬಂಧ ಜಗ್ಗೇಶ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರಣ್ಯ ಇಲಾಖೆ ನೋಟಿಸ್ ಹಾಗೂ ಸರ್ಚ್ ವಾರಂಟ್‌ಗೆ ಮುಂದಿನ ವಿಚಾರಣೆವರೆಗೆ ತಡೆ ನೀಡಿತು.
ಅಕ್ಟೋಬರ್ 25ರಂದು ತಮ್ಮಲ್ಲಿ ಯಾವುದೇ ಹುಲಿ ಉಗುರು ಇದ್ದಲ್ಲಿ ಅರಣ್ಯ ಇಲಾಖೆಗೆ ಒಪ್ಪಿಸಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಆದಾದ ಒಂದು ಗಂಟೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ 14 ಅಧಿಕಾರಿಗಳು ಮನೆಗೆ ಭೇಟಿ ನೀಡಿ ಶೋಧನೆ ನಡೆಸಿದ್ದಾರೆ. ಹಲವು ವರ್ಷಗಳ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಶೀಲಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಈಗ ಶೋಧನೆ ನಡೆಸುವುದಕ್ಕೆ ಮುಂದಾಗಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಈ ವೇಳೆ ಸರಕಾರದ ಪರ ವಕೀಲರು, ಹುಲಿ ಉಗುರು ನಾಶ ಮಾಡಲಿದ್ದಾರೆಂಬ ಮಾಹಿತಿ ಲಭ್ಯವಾಗಿತ್ತು. ಇದೇ ಕಾರಣಕ್ಕೆ ದಾಳಿ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು. ಇದಕ್ಕೆ ಆಕ್ರೋಶಗೊಂಡ ನ್ಯಾಯಪೀಠ, ನೋಟಿಸ್ ನೀಡಿದ ಒಂದು ತಾಸಿನಲ್ಲಿ ಯಾವ ಮೂಲಗಳು ನಿಮಗೆ ಮಾಹಿತಿ ನೀಡಿದವು ಎಂದು ಪ್ರಶ್ನಿಸಿತು. ಅರಣ್ಯ ಉತ್ಪನ್ನಗಳನ್ನು ವಶದಲ್ಲಿಟ್ಟುಕೊಳ್ಳುವುದು ಕಾನೂನು ಪ್ರಕಾರ ತಪ್ಪು. ಆದರೆ ಸರಕಾರ ಮಾಡಿರುವ ಪ್ರಕ್ರಿಯೆ ಸರಿಯಾದ ಕ್ರಮವಲ್ಲ. ಸಂಪೂರ್ಣ ಪ್ರಚಾರಕ್ಕಾಗಿ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.