Advertisement

ಹುಲಿ ಗಣತಿ: ಕೆಮರಾ ಟ್ರ್ಯಾಪ್‌ ಸರ್ವೇ ಪೂರ್ಣ 

08:59 PM Mar 17, 2022 | Team Udayavani |

ಉಡುಪಿ: ಪ್ರತೀ 4 ವರ್ಷಕ್ಕೊಮ್ಮೆ ನಡೆಯುವ ಅಖೀಲ ಭಾರತ ಹುಲಿ ಗಣತಿ ಪ್ರಕ್ರಿಯೆ ಜಿಲ್ಲೆಯ ವ್ಯಾಪ್ತಿಯಲ್ಲಿ ಮುಕ್ತಾಯ ಹಂತಕ್ಕೆ ತಲುಪಿದೆ.

Advertisement

ಕೆಮರಾ ಟ್ರ್ಯಾಪ್‌ ಸರ್ವೇ ಪ್ರಕ್ರಿಯೆ ಪೂರ್ಣಗೊಂಡಿದೆ. ಪಶ್ಚಿಮಘಟ್ಟ ವನ್ಯ ಜೀವಿ ಸಂರಕ್ಷಣ ಪ್ರದೇಶ ಮತ್ತು ಕುಂದಾಪುರ ಅರಣ್ಯ ವಿಭಾಗದಲ್ಲಿ ಹುಲಿ ಗಣತಿ ಕಾರ್ಯ ನಡೆದಿದೆ. ಕಾರ್ಕಳ ವನ್ಯ ಜೀವಿ ವಿಭಾಗದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು,  ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಅರಣ್ಯ ಭಾಗ ಸೇರಿಕೊಂಡಿದೆ.

ಕೊಲ್ಲೂರು, ಸಿದ್ದಾಪುರ, ಅಮಾಸೆಬೈಲು, ಹೆಬ್ರಿ, ಕಾರ್ಕಳ ಭಾಗದಲ್ಲಿ ಹುಲಿ ಗಣತಿ ಸಮೀಕ್ಷೆಯಲ್ಲಿ ಕಾರ್ಕಳ ವನ್ಯ ಜೀವಿ ವಿಭಾಗದ ವತಿಯಿಂದ ಟ್ರ್ಯಾಪಿಂಗ್‌ ಕೆಲಸ ಮುಗಿದಿದೆ. ಕುಂದಾಪುರ ಅರಣ್ಯ ವಿಭಾಗದ ವತಿಯಿಂದಲೂ ಗಣತಿ ಕಾರ್ಯ ಸಂಪೂರ್ಣಗೊಂಡಿದೆ.

ಹುಲಿ ಗಣತಿಗಾಗಿ ಈ ಭಾರೀ ಅತ್ಯಾಧುನಿಕ ಟ್ರ್ಯಾಪರ್‌ ಕೆಮರಾಗಳನ್ನು ಅಳವಡಿಸಲಾಗಿದ್ದು, ಹುಲಿಗಳ ಚಲನವಲನ ಪತ್ತೆ ಮಾಡಲು ಕಾರ್ಕಳ ವನ್ಯಜೀವಿ ವಿಭಾಗದ ವತಿಯಿಂದ 320 ಕೆಮರಾಗಳನ್ನು ಅಳವಡಿಸಲಾಗಿತ್ತು. ಈ ಕೆಮರಾಗಳು ವಿಶೇಷ ಸೆನ್ಸರ್‌ ಡಿಟೆಕ್ಟರ್‌ ತಂತ್ರಜ್ಞಾನದಿಂದ ಕೂಡಿದೆ. ಯಾವುದೇ, ಪ್ರಾಣಿ ವ್ಯಕ್ತಿ ಎದುರಾದಾಗ ಸೆನ್ಸಾರ್‌ ತಂತ್ರಜ್ಞಾನದ ಮೂಲಕ ಗ್ರಹಿಸಿ ಚಿತ್ರವನ್ನು ತೆಗೆದಿಟ್ಟುಕೊಳ್ಳುತ್ತದೆ.

ಎಂ-ಸ್ಟ್ರೈಪ್ಸ್‌ ಆ್ಯಪ್‌ನಲ್ಲಿ ದಾಖಲೆ ಸಂಗ್ರಹ :

Advertisement

ಸೈನ್‌ ಸರ್ವೇಗಾಗಿ (ಸಸ್ಯಹಾರಿ ಮತ್ತು ಮಾಂಸಹಾರಿ ಪ್ರಾಣಿಗಳ ಗುರುತು ಪತ್ತೆ) ಅರಣ್ಯ ಇಲಾಖೆ ಅಧಿಕಾರಿಗಳು, ಸಿಬಂದಿ ಈ ಹಿಂದೆ ಗಣತಿ ಕಾರ್ಯದ ದಾಖಲೆ ಅಂಕಿಸಂಖ್ಯೆಗಳ ಸಂಗ್ರಹಕ್ಕೆ ಕಾಗದ ಬಳಕೆ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಎಂ- ಸ್ಟ್ರೈಪ್ಸ್‌  (ಮಾನಿಟರಿಂಗ್‌ ಸಿಸ್ಟಮ್‌ ಫಾರ್‌ ಟೈಗರ್‌ ಇಂಟೆನ್ಸಿವ್‌ ಪ್ರೊಟೆಕ್ಷನ್‌ ಆ್ಯಂಡ್‌ ಇಕಾಲಾಜಿಕಲ್‌ ಸ್ಟೇಟಸ್‌) ಎಂಬ ಇಕೋಲಾಜಿಕಲ್‌ ಆ್ಯಪ್‌ನ್ನು ಗಣತಿ ಕಾರ್ಯಕ್ಕೆ ಬಳಸಲಾಗಿದೆ. ಜಿಪಿಎಸ್‌ ಆಧರಿತ ಮಾಹಿತಿ ಚಿತ್ರಗಳ ಸಂಗ್ರಹ, ಅಂಕಿಸಂಖ್ಯೆ ದಾಖಲೆ ಇದರಲ್ಲಿ ಸೇರಿಸಲು ಅನುಕೂಲವಾಗುವಂತೆ ಆ್ಯಪ್‌ ರಚಿಸಲಾಗಿದೆ.

ಟೈಗರ್‌ ಸೆಲ್‌ನಲ್ಲಿ ವಿಶ್ಲೇಷಣೆ :

ಕಾರ್ಕಳ ವನ್ಯ ಜೀವಿ ವಿಭಾಗ, ಕುಂದಾಪುರ ಅರಣ್ಯ ವಿಭಾಗದ ಎಲ್ಲ ಉಪ ವಲಯ ಅರಣ್ಯಾಧಿಕಾರಿಗಳು, ಅರಣ್ಯ ರಕ್ಷಕರು, ವೀಕ್ಷಕರು ಎಲ್ಲ ಹಂತದ ಸಿಬಂದಿ 28 ದಿನಗಳ ಕಾಲ ಹುಲಿ ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡು ಮಾಹಿತಿ ಸಂಗ್ರಹಿಸಿವೆ. ಬೆಂಗಳೂರು ಅರಣ್ಯ ಭವನದಲ್ಲಿರುವ ಟೈಗರ್‌ ಸೆಲ್‌ಗೆ ಕೆಮರಾ ಟ್ರ್ಯಾಪಿಂಗ್‌ ಡಾಟ, ಆ್ಯಪ್ಸ್‌ ಮಾಹಿತಿ ದಾಖಲೆಗಳನ್ನು ಕಳುಹಿಸಿಕೊಡಲಾಗುತ್ತದೆ. ಟೈಗರ್‌ಸೆಲ್‌ನಲ್ಲಿ ನುರಿತ ತಂಡ, ತಜ್ಞರಿಂದ ವಿಶ್ಲೇಷಣೆಗೊಳಪಡಿಸಿದ ನಂತರ ಹುಲಿ ಗಣತಿ ಮುಕ್ತಾಯಗೊಂಡು ಸ್ಪಷ್ಟ ಅಂಕಿ ಅಂಶಗಳು ದೊರೆಯಲಿದೆ.

ಹುಲಿ ಗಣತಿ ಕೆಮರಾ ಟ್ರ್ಯಾಪಿಂಗ್‌ ಸರ್ವೇ ಕಾರ್ಯ ಮುಕ್ತಾಯಗೊಂಡಿದ್ದು, ಮಾ.25ರವರೆಗೂ ಗಣತಿ ಕಾರ್ಯದ ಕೆಲಸಗಳು ನಡೆಯಲಿದೆ. ಎಲ್ಲ ಹಂತದ ಅಧಿಕಾರಿಗಳು, ಸಿಬಂದಿ ಗಣತಿ ಪ್ರಕ್ರಿಯೆಗಾಗಿ ಶ್ರಮಿಸಿದ್ದಾರೆ. ರುಥ್ರೆನ್‌, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು. ಕಾರ್ಕಳ ವನ್ಯಜೀವಿ ವಿಭಾಗ

 

ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next