ಹುಣಸೂರು: ನಾಗರಹೊಳೆ ಉದ್ಯಾನವನದಂಚಿನ ನೇರಳೆ ಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಹುಲಿ ಉಪಟಳ ಮುಂದುವರಿದಿದ್ದು, ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಹಾಡುಹಗಲೇ ಮೇಯಲು ಬಿಟ್ಟಿದ್ದ ಕುರಿಯನ್ನು ಕೊಂದು ಹಾಕಿದೆ.
ತಾಲೂಕಿನ ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಪಂನ ಚಂದನಗಿರಿ ರಸ್ತೆಯ ಹಂದಿ ಹಳ್ಳದ ಬಳಿ ಭಾನುವಾರ ನೇರಳಕುಪ್ಪೆ ಗ್ರಾಮದ ಶಿವರಾಜು ಅವರಿಗೆ ಸೇರಿದ ಕುರಿಗಳನ್ನು ಮಧ್ಯಾಹ್ನ 3 ರ ವೇಳೆಯಲ್ಲಿ ಮೇಯಿಸುತ್ತಿದ್ದ ವೇಳೆ ದಿಢೀರ್ ಪ್ರತ್ಯಕ್ಷವಾದ ಹುಲಿ ಕುರಿಯ ಮೇಲೆರಗಿ ಒಂದು ಕುರಿಯನ್ನು ಕೊಂದು ಹಾಕಿದೆ.
ಬೇಟೆಯಾಡಿದ್ದ ಕುರಿಯನ್ನು ಹೊತ್ತೂಯ್ಯುವ ವೇಳೆ ಕುರಿಗಾಹಿಗಳು ಗಮನಿಸಿ ಸಹಾಯಕ್ಕಾಗಿ ಕೂಗಿಕೊಂಡಾಗ ಸುತ್ತಮುತ್ತಲಿನ ಜಮೀನಿನಲ್ಲಿದ್ದವರು ಜೋರಾಗಿ ಕೂಗಾಡಿದ್ದರಿಂದ ಹುಲಿಯು ಕೊಂದು ಹಾಕಿದ್ದ ಕುರಿಯನ್ನು ಅಲ್ಲೇ ಬಿಟ್ಟು ಹಂದಿಹಳ್ಳ ಅರಣ್ಯ ಪ್ರದೇಶದತ್ತ ಓಡಿದೆ.
ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಕಚುವಿನಹಳ್ಳಿ ಶ್ರೇಣಿಯ ಡಿಆರ್‌ಎಫ್‌ಓ ವೀರಭದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎರಡು ದಿನಗಳ ಹಿಂದೆ ಸಹ ಹುಲಿ ಪ್ರತ್ಯಕ್ಷವಾಗಿ ಚಂದನಗಿರಿಯಲ್ಲಿ ಮೇಕೆಯೊಂದನ್ನು ಕೊಂದು ಹಾಕಿತ್ತು.
ಕಳೆದ 2018ರ ಆಗಸ್ಟ್ ತಿಂಗಳಿನಿಂದ ಹುಲಿಗಳು ಆಗಾಗ್ಗೆ ಕಾಣಿಸಿಕೊಂಡು ಈ ಭಾಗದಲ್ಲಿ ಸಾಕಷ್ಟು ಸಾಕು ಪ್ರಾಣಿಗಳನ್ನು ಕೊಂದು ಹಾಕಿದೆ. ಕಳೆದ ಮೂರು ತಿಂಗಳ ಹಿಂದೆ ಕಾಡಿನಿಂದ ಬೇಟೆಯಾಡಲು ಬಂದಿದ್ದ ಹುಲಿಯು ರೈತರು ಹಂದಿಗೆ ಹಾಕಿದ್ದ ಉರುಳಿಗೆ ಸಿಲುಕಿ ಓಡಲಾಗದೆ ಪರಿತಪಿಸುತ್ತಿದ್ದ ಹುಲಿಯನ್ನು ಸೆರೆ ಹಿಡಿಯಲಾಗಿತ್ತು.
ಈ ಭಾಗದಲ್ಲಿ ಮತ್ತೆ ಹುಲಿ ಕಾಣಿಸಿಕೊಂಡಿರುವುದು ಕಾಡಂಚಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಹುಲಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.