ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹುಣಸೂರು ವಲಯದಂಚಿನ ನೇರಳಕುಪ್ಪೆ ಬಿ ಹಾಡಿಯ ಕುರಿಗಾಹಿ ಜಗದೀಶ್ ಎಂಬಾತನನ್ನು ಬಲಿಪಡೆದಿದ್ದ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿದೆ.
ಇದೀಗ ಅರಣ್ಯ ಇಲಾಖೆಯ ಬೋನಿನಲ್ಲಿ ಬಂಧಿಯಾಗಿರುವ ಈ ಹುಲಿಗೆ ಸುಮಾರು 12 ವರ್ಷ ಪ್ರಾಯ ಎಂದು ಅಂದಾಜಿಸಲಾಗಿದ್ದು, ಈ ಹುಲಿಯನ್ನು ಮಂಗಳವಾರ ರಾತ್ರಿ 8.30ರ ವೇಳೆಯಲ್ಲಿ ಬಂಧಿಸಲಾಗಿದೆ.
ಸಾಕಾನೆಗಳನ್ನು ಸೇರಿಸಿಕೊಂಡು ಅರಣ್ಯಾಧಿಕಾರಿಗಳು ಘಟನಾ ಸ್ಥಳದ ಆಸುಪಾಸಿನಲ್ಲಿ ಕೂಬಿಂಗ್ ಕಾರ್ಯಾಚರಣೆಯನ್ನು ನಡೆಸಿದ್ದರು. ಇದರ ಜೊತೆಗೆ ಹುಲಿಯನ್ನು ಹಿಡಿಯಲು ಬೋನನ್ನೂ ಸಹ ಇರಿಸಲಾಗಿತ್ತು. ಈ ಬೋನಿನಲ್ಲಿ ಇರಿಸಿದ್ದ ಹಂದಿ ಮಾಂಸ ತಿನ್ನಲು ಬಂದಿದ್ದ ನರಭಕ್ಷಕ ಹುಲಿ ಕೊನೆಗೂ ಬೋನಿನಲ್ಲಿ ಬಂಧಿಯಾಗಿದೆ.
ಹುಲಿಯ ಬಲಗಾಲು ಮತ್ತು ಹಣೆಯಲ್ಲಿ ಆಗಿರುವ ಗಾಯ ರಸಿಕೆಯಾಗಿದ್ದರಿಂದ ಕಾಡಿನೊಳಗೆ ಭೇಟೆಯಾಡಲು ಅಸಾಧ್ಯವಾಗಿ ಊರಿಗೆ ಬಂದಿರುವ ಸಾಧ್ಯತೆಗಳು ಇವೆ ಎಂದು ಡಿ.ಸಿ.ಎಫ್ ಮಹೇಶ್ ಕುಮಾರ್ ತಿಳಿಸಿದ್ದಾರೆ.
ಇದೀಗ ಸೆರೆ ಸಿಕ್ಕಿರುವ ಹುಲಿಯನ್ನು ಬನ್ನೇರು ಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸಾಗಿಸಿ ಅಲ್ಲಿ ಅದರ ಗಾಯಕ್ಕೆ ಚಿಕಿತ್ಸೆ ನೀಡಲಾಗುವುದೆಂದು ಡಿಸಿಎಫ್ ಮಹೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಇದಕ್ಕೂ ಮೊದಲು ಈ ಹುಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ನೇರಳಕುಪ್ಪೆ ಬಿ ಹಾಡಿಯ ಕುರಿಗಾಹಿ ಜಗದೀಶ್ ಅವರನ್ನು ಎಳೆದೊಯ್ದು ಅವರ ದೇಹದ ಬಹುಭಾಗವನ್ನು ತಿಂದು ಹಾಕಿತ್ತು.
ಜಗದೀಶ್ ಅವರ ಶವದ ಅವಶೇಷಗಳು ಇಲ್ಲಿನ ಹಂದಿ ಹಳ್ಳದ ಬಳಿ ಮಂಗಳವಾರ ಪತ್ತೆಯಾಗಿತ್ತು. ಜಗದೀಶ್ ದೇಹದ ಬಹು ಭಾಗವನ್ನು ಹುಲಿ ತಿಂದು ಹಾಕಿದ್ದು ಅವರ ಕೈ ಹಾಗೂ ತಲೆಬುರುಡೆ ಭಾಗ ಮಾತ್ರವೇ ಪತ್ತೆಯಾಗಿತ್ತು.