Advertisement

ಅಚ್ಚುಕಟ್ಟಾದ ರಂಗಪ್ರವೇಶ

02:21 PM Oct 27, 2017 | |

ರಂಗ ಪ್ರವೇಶ ಎನ್ನುವುದು ಒಬ್ಬ ನರ್ತಕಿ ಅಥವಾ ನರ್ತಕನ ಜೀವನದ ಬಹುಮುಖ್ಯವಾದ ಕ್ಷಣ. ಹಲವು ವರ್ಷಗಳ ತನ್ನ ಪರಿಶ್ರಮವನ್ನೂ ಸಾಧನೆಯನ್ನೂ ನಾಲ್ಕಾರು ಜನರ ಮುಂದೆ ಒರೆಗೆ ಹಚ್ಚುವ ಈ ಅವಕಾಶ ಆ ಕಲಾವಿದನ ನೃತ್ಯ ಜೀವನದ ಭವಿಷ್ಯವನ್ನು ನಿರ್ಣಯಿಸುತ್ತದೆ. ಇತ್ತೀಚೆಗೆ ಮಂಗಳೂರು ಪುರಭವನದಲ್ಲಿ ನಡೆದ ವಿ| ದೀಪಕ್‌ ಕುಮಾರ್‌ ಇವರ ಶಿಷ್ಯೆ ಕು| ಧನ್ಯಶ್ರೀ ಪ್ರಭು ಅವರ ರಂಗಪ್ರವೇಶ ಬಹಳ ಅಚ್ಚುಕಟ್ಟಾಗಿ ಮನಮುಟ್ಟಿತು. 

Advertisement

ಧನ್ಯಶ್ರೀಯ ರಂಗಪ್ರವೇಶದ ಮೊದಲ ನೃತ್ಯ ಪುಷ್ಪಾಂಜಲಿ. ಇದು ಅಪೂರ್ವವಾದ ರಾಗ ನಿರಂಜಿನಿ ಹಾಗೂ ಆದಿತಾಳದಲ್ಲಿ ಸಂಯೋಜನೆಗೊಂಡದ್ದಾಗಿತ್ತು. ಈ ನೃತ್ಯದಲ್ಲಿ ಮೊದಲಿಗೆ ಗಣೇಶನ ಸ್ತುತಿಯನ್ನು ಮಾಡಲಾಯಿತು. ಶ್ಲೋಕ ಕುಮಾರವ್ಯಾಸ ಭಾರತದಿಂದ ಆರಿಸಿಕೊಂಡದ್ದು. ಮುಂದೆ ಆಕೆ ಮಾಡಿದ ಅಲರಿಪು ತ್ರಿಶ್ರ ತ್ರಿಪುಟ ತಾಳದಲ್ಲಿ ಮೂಡಿಬಂದದ್ದು. ಸಾಮಾನ್ಯವಾಗಿ ಅಲರಿಪು ಸಂಯೋಜನೆಗೊಳ್ಳುವುದು ತ್ರಿಶ್ರ, ಚತುರಶ್ರ, ಖಂಡ, ಮಿಶ್ರ ಹಾಗೂ ಸಂಕೀರ್ಣ ತಾಳಗಳಲ್ಲಿ. ಆದರೆ ಇಲ್ಲಿ ಇವುಗಳನ್ನು ಹೊರತುಪಡಿಸಿದ ಅಲರಿಪುವಿನ ಸಂಯೋಜನೆಯನ್ನು ಕಾಣಬಹುದಾಗಿತ್ತು. ಈ ನೃತ್ಯ ದಲ್ಲಿನ ಮಂಡಿ ಅಡವುಗಳು ಮತ್ತು ಅದರ ಮುಕ್ತಾಯ ಬಹಳ ವಿಭಿನ್ನ ರೀತಿಯಲ್ಲಿ ಮೂಡಿಬಂದು ನೃತ್ಯದ ಸೊಬಗನ್ನು ಹೆಚ್ಚಿಸಿತ್ತು. ಮುಂದಿನ ಆಕೆಯ ನೃತ್ಯ ಜತಿಸ್ವರ. ಇಲ್ಲಿ ಪ್ರತಿಯೊಂದು ಕೋರ್ವೆಯ ಅನಂತರದ ಭಂಗಿಗಳು ಆಕರ್ಷಕವಾಗಿದ್ದವು. ಇದಕ್ಕೆ ಹೆಚ್ಚಿನ ಮೆರುಗು ನೀಡುವಂತಿದ್ದದ್ದು ಸಂಗೀತ. ಈ ನೃತ್ಯ ನಳಿನಕಾಂತಿ ರಾಗ ಹಾಗೂ ಆದಿತಾಳದಲ್ಲಿ ಮೂಡಿಬಂದಿತು.

ಮುಂದೆ ತ್ಯಾಗರಾಜರ ರಚನೆಯ ಮಾರವೈರಿ ರಮಣಿ ಎಂಬ ದೇವಿಯನ್ನು ಸ್ತುತಿಸುವ ಕೃತಿಯನ್ನು ತ್ರಿಶ್ರನಡೆ ಆದಿತಾಳ ಹಾಗೂ ನಾಸಿಕಭೂಷಿಣಿ ರಾಗದಲ್ಲಿ ಪ್ರಸ್ತುತಪಡಿಸಲಾಯಿತು. ಸಾಮಾನ್ಯವಾಗಿ ಸಂಚಾರಿ ಯನ್ನು ಸಂಗೀತದೊಡನೆ ಮಾಡಿದರೆ, ಇಲ್ಲಿ ದಾನವರನ್ನು ಸಂಹರಿಸುವ ದೇವಿಯ ಚಿತ್ರಣವನ್ನು ನೀಡುವ ಇಡೀ ಸಂಚಾರಿಯನ್ನು ಶೊಲ್ಕಟ್ಟಿನಲ್ಲಿ ನಿರೂಪಿಸಿರುವುದು ಈ ನೃತ್ಯದ ವಿಶೇಷವಾಗಿತ್ತು. ಹಾಗೆಯೇ ಈ ನೃತ್ಯ ಕೇವಲ ನರ್ತಕಿಯ ಸಾಮರ್ಥ್ಯಕ್ಕೆ ಅಲ್ಲದೆ ಮೃದಂಗ ಹಾಗೂ ನಟುವನಾರ್‌ರ ಸಾಮರ್ಥ್ಯವನ್ನೂ ಒರೆಹಚ್ಚುವಂತಿತ್ತು. 

ಮುಂದಿನ ನೃತ್ಯ ವರ್ಣ . ಇದು ಶ್ರೀರಂಜಿನಿ ರಾಗ ಹಾಗೂ ಆದಿತಾಳದಲ್ಲಿ ವೆಂಕಟೇಶ್ವರ ದೇವರ ಮೇಲೆ ಕನ್ನಡ ಭಾಷೆಯಲ್ಲಿ ರಚಿತಗೊಂಡದ್ದು. ಈ ನೃತ್ಯದ ಪೂರ್ವಾರ್ಧದಲ್ಲಿ ಏಳು ಗಿರಿಗಳ ಒಡೆಯ ವೆಂಕಟೇಶ್ವರನನ್ನು ಸ್ತುತಿಸಿ ವರ್ಣಿಸಿದರೆ, ಉತ್ತರಾರ್ಧದಲ್ಲಿ ದಶಾವತಾರದ ವರ್ಣನೆಯನ್ನು ಮಾಡಲಾಗಿತ್ತು. ಶ್ರೀನಿವಾಸನ ಮಹಿಮೆ ಬಣ್ಣಿಸದಸದಳವು ಎನ್ನುತ್ತಾ ಮಾಡಿದ ಈ ನೃತ್ಯ ಭಕ್ತಿ ಪ್ರಧಾನವಾದುದಾಗಿತ್ತು. ಈ ನೃತ್ಯ ವೇಗಕಾಲದಲ್ಲಿದ್ದು ಕ್ಲಿಷ್ಟಜತಿಗಳಿಂದ ಕೂಡಿ, ಬಹಳ ಆಕರ್ಷವಾಗಿತ್ತು, ನರ್ತಕಿಯ ಸಾಮರ್ಥ್ಯವನ್ನು ಪ್ರೇಕ್ಷಕರಿಗೆ ಮನದಟ್ಟು ಮಾಡುವಂತಿತ್ತು. ಅಷ್ಟು ದೀರ್ಘ‌ಕಾಲದ ನೃತ್ಯದಲ್ಲೆಲ್ಲೂ ಆಯಾಸ ವ್ಯಕ್ತಪಡಿಸದೆ ಉತ್ತಮ ರೀತಿಯ ಅಭಿನಯವನ್ನು ಕಲಾವಿದೆ ನೀಡಿದ್ದಾರೆ. ಇದು ಆಕೆಯ ಪರಿಶ್ರಮಕ್ಕೆ ಹಿಡಿದ ಕನ್ನಡಿ ಎಂದರೆ ಅತಿಶಯೋಕ್ತಿಯಲ್ಲ.

ಮುಂದೆ ಡಿವಿಜಿ ವಿರಚಿತ ಅಂತಃಪುರ ಗೀತೆಗೆ ಮಾಡಿದ ನೃತ್ಯ ಮೋಹನ ರಾಗ ಹಾಗೂ ಆದಿತಾಳದಲ್ಲಿ ಸಂಯೋಜನೆಗೊಂಡಿತ್ತು. ಡಂಗುರವನ್ನು ಹಿಡಿದಿರುವ ತಾಂಡವೇಶ್ವರಿ ಎಂಬ ಶಿಲಾಬಾಲಿಕೆಯ ಬಗೆಗಿನ ಈ ನೃತ್ಯದಲ್ಲಿ ಚೆನ್ನಕೇಶ್ವರನು ನಾಯಕ ಹಾಗೂ ಶೃಂಗಾರವೇ ಇಲ್ಲಿನ ಮುಖ್ಯ ಭಾವ. ಇಲ್ಲಿ ಕಲಾವಿದೆ ಯಾವುದೆ ಬಾಲಿಶತನಕ್ಕೆ ಅವಕಾಶ ನೀಡದೆ ಅತ್ಯಂತ ಪ್ರಬುದ್ಧ ಮಟ್ಟದಲ್ಲಿ ಅಭಿನಯಿಸಿದ್ದಾರೆ. ಇಲ್ಲಿ ಹಾಡುಗಾರಿಕೆ ಮತ್ತು ಲಯ ವಿಭಾಗದ ನಡುವಣ ಜುಗಲ್‌ಬಂದಿ ಪ್ರೇಕ್ಷಕರನ್ನೊಂದು ಸುಂದರ ಲೋಕಕ್ಕೆ ಕೊಂಡೊಯ್ದು ರಸದೌತಣವನ್ನೇ ಉಣಬಡಿಸಿತು. ಈ ನೃತ್ಯದ ಸಂಯೋಜನೆ ಗುರುಗಳ ಸಾಮರ್ಥ್ಯಕ್ಕೆ ಉತ್ತಮ ಉದಾಹರಣೆಯಾಗಿತ್ತು. ಮುಂದೆ ಪುರಂದರದಾಸ ವಿರಚಿತ ದೇವರನಾಮವನ್ನು ಪ್ರದರ್ಶಿಸಲಾಯಿತು. ಇಲ್ಲಿ ಸಖೀ, “ಏನೆಂದು ಮರುಳಾದೆಯಮ್ಮ ಎಲೆ ರುಕ್ಮಿಣಿ ಆ ಕೃಷ್ಣನಿಗೆ’ ಎನ್ನುತ್ತಾ, ಕೃಷ್ಣನಿಗಾಗಿ ಎಲ್ಲರನ್ನೂ ತೊರೆದು ಬಂದ ರುಕ್ಮಿಣಿಯ ಪ್ರೀತಿಯನ್ನು ಪರೀಕ್ಷಿಸುವ ಸನ್ನಿವೇಶ ವನ್ನು ಕಲಾವಿದೆ ಬಹಳ ಸುಂದರವಾಗಿ ಪ್ರಸ್ತುತಪಡಿಸಿ ದರು. ಇದು ಬೇಹಾಗ್‌ ರಾಗ ಹಾಗೂ ಆದಿತಾಳದಲ್ಲಿ ಮೂಡಿಬಂದ ನಿಂದಾಸ್ತುತಿ. 

Advertisement

ಕೊನೆಯದಾಗಿ ತಿಲ್ಲಾನ. ಇದು ನವೀನ ರೀತಿ ಯಲ್ಲಿ ಮೂಡಿಬಂದು ಬಹಳ ಆಕರ್ಷಕವಾಗಿತ್ತು. ಸಾಮಾನ್ಯವಾಗಿ ಪ್ರತೀ ತಿಲ್ಲಾನವು ವೇಗದ ಜತಿಗಳಿಂದ ಪ್ರಾರಂಭವಾಗಿ ಕೊನೆಗೆ ಸಾಹಿತ್ಯಾಭಿನಯದ ಮೂಲಕ ಮುಕ್ತಾಯಗೊಂಡರೆ; ಇಲ್ಲಿ ಮೊದಲಿಗೆ ಸಾಹಿತ್ಯಾಭಿನಯ ವಿದ್ದು, ನರ್ತಕಿ ರಾಧೆಯಾಗಿ ಕೃಷ್ಣನನ್ನು ವರ್ಣಿಸುತ್ತಾ ಅವನ ದರುಶನಕ್ಕಾಗಿ ಹಂಬಲಿಸುತ್ತಾ ಆತನನ್ನೇ ನೆನೆದು ಕನಸಲ್ಲೂ ಕನವರಿಸುತ್ತಿರುತ್ತಾಳೆ. ರಾಧೆ ಎಚ್ಚರಗೊಂಡಾಗ ಕಣ್ಣ ಮುಂದೆ ನಿಂತಿರುವ ಕೃಷ್ಣನನ್ನು ಕಂಡು ಆನಂದ ದಿಂದ ಆತನೊಡನೆ ನರ್ತಿಸುವಾಗ ಜತಿಗಳನ್ನು ಮಾಡಲಾಯಿತು. ಹಾಗಾಗಿ ಇದು ಹೊಸ ರೀತಿಯ ತಿಲ್ಲಾನವಾಗಿದ್ದು ಬಹಳ ಸೊಗಸಾಗಿತ್ತು. 

ಬಿ.ಸಿ.ರೋಡಿನ ನಿವಾಸಿಗಳಾದ ರಾಮ್‌ಗಣೇಶ್‌ ಪ್ರಭು ಮತ್ತು ಶುಭಲಕ್ಷ್ಮೀ ಪ್ರಭುಗಳ ಪುತ್ರಿಯಾಗಿರುವ ಧನ್ಯಶ್ರೀ ತನ್ನ ಪ್ರಾರಂಭಿಕ ನೃತ್ಯ ಗುರು ವಿ| ವಿದ್ಯಾ ಮನೋಜ್‌ ಇವರ ಮಾರ್ಗದರ್ಶನದೊಂದಿಗೆ ಪ್ರಸ್ತುತ ಗುರು ವಿ| ದೀಪಕ್‌ ಕುಮಾರ್‌ ಅವರ ಅಪಾರವಾದ ಪ್ರೋತ್ಸಾಹ, ಮಾರ್ಗದರ್ಶನಗಳನ್ನು; ಹೆತ್ತವರ ಶ್ರಮವನ್ನು ಮನಸಾರೆ ಸ್ಮರಿಸುತ್ತಾಳೆ. 

ರಂಗಪ್ರವೇಶದಂದು ನಡೆದ ಸಭಾಕಾರ್ಯಕ್ರಮ ಚುಟುಕಾಗಿದ್ದು ಸೇರಿದ ಕಲಾರಸಿಕರನ್ನು ರಸಭಂಗ ಗೊಳಿಸದೇ ಇದ್ದುದು ಗಮನಾರ್ಹ. ಹಿಮ್ಮೇಳದಲ್ಲಿ ಮೃದಂಗವಾದಕ ಹರ್ಷ ಸಾಮಗ ಸಮಯೋಚಿತ ವಾದನದ ಮೂಲಕ, ಕೊಳಲಿನಲ್ಲಿ ಕಾರ್ತಿಕ್‌ ಸಾರವಳ್ಳಿ ತಮ್ಮ ಮನೋಹ್ಲಾದಕ ನುಡಿಸುವಿಕೆಯಿಂದ, ಹಾಡುಗಾರಿಕೆಯಲ್ಲಿ ವಿ| ಪ್ರೀತಿಕಲಾ ಬಹಳಷ್ಟು ಗಮನ ಸೆಳೆದರು. ಪ್ರೀತಿಕಲಾ ಅವರ ಮಧುರವಾದ ಹಾಗೂ ಸಾಹಿತ್ಯಕ್ಕನುಗುಣವಾದ ಭಾವನೆಯನ್ನೂ ವ್ಯಕ್ತಪಡಿಸುವ ಸಂಗೀತ ಕಾರ್ಯಕ್ರಮದ ಧನಾತ್ಮಕ ಅಂಶ. ನಟುವನಾರ್‌ ವಿ| ಬಿ. ದೀಪಕ್‌ ಕುಮಾರ್‌ ಅವರ ಸಾರಥ್ಯ ಇಡೀ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿತು. 

ಸಾಯಿ ಶ್ರೀಪದ್ಮಾ

Advertisement

Udayavani is now on Telegram. Click here to join our channel and stay updated with the latest news.

Next