Advertisement
ಒಗ್ಗಟ್ಟು ಕಲಿಸುವ ಕೈರಂಪಣಿ ಮೀನುಗಾರಿಕೆ
ಕೈರಂಪಣಿ ಸಾಮುದಾಯಿಕ ಸಹಕಾರಿ ತತ್ತÌದ, ಒಗ್ಗಟ್ಟನ್ನು ಕಲಿಸುತ್ತಿದ್ದ ಮೀನುಗಾರಿಕೆ. ಇದರಲ್ಲಿ ಸುಮಾರು 50ರಿಂದ 60 ಮಂದಿ ಬೇಕಾಗುತ್ತದೆ. ಏಕೆಂದರೆ ಮೀನಿನ ಬಲೆಯೂ ಅರ್ಧ ಕಿ.ಮೀ. ಕ್ಕಿಂತಲೂ ಉದ್ದ ಇರುತ್ತದೆ. ಇಬ್ಬರಿಬ್ಬರು ಜೋಡಿಯಾಗಿ ಕೈಯಲ್ಲಿ ಬಲವಾದ ಕೋಲನ್ನು ಹಿಡಿದು ಒಬ್ಬರ ಹಿಂದೆ ಒಬ್ಬರು ನಿಲ್ಲುತ್ತಾರೆ. ಅವರು ಅಡ್ಡನಾಗಿ ಹಿಡಿದ ಕೋಲಿನ ಮೇಲೆ ಉದ್ದವಾದ ಬಲೆಯಲ್ಲಿ ಹಾಕಿರುತ್ತಾರೆ. ಆ ಬಲೆಯ ಒಂದು ತುದಿಯನ್ನು ದೋಣಿಯೊಂದರ ತುದಿಗೆ ಕಟ್ಟಲಾಗುತ್ತದೆ. ಆ ದೋಣಿ ಸಮುದ್ರದಲ್ಲಿ ಮುಂದೆ ಮುಂದೆ ಸಾಗುವಾಗ ದಡದಲ್ಲಿದ್ದವರು ಬಲೆ ಎಳೆದು ಕೊಡುತ್ತಾರೆ. ಸಮುದ್ರದಲ್ಲಿ ಸ್ವಲ್ಪ ದೂರ ಹೋದ ದೋಣಿ ವೃತ್ತಾಕಾರದಲ್ಲಿ ಹಿಂತಿರುಗುತ್ತದೆ. ಅದು ಸ್ವಲ್ಪ ದೂರದಲ್ಲಿ ದಡ ಸೇರಿದಾಗ ಬಲೆಯು ಅರ್ಧ ವೃತ್ತಾಕಾರದಲ್ಲಿ ಸಮುದ್ರದಲ್ಲಿ ಹರಡಿಕೊಂಡಿರುತ್ತದೆ. ಅನಂತರ ಎಲ್ಲರೂ ಸೇರಿ ಬಲೆಯನ್ನು ತೀರದತ್ತ ಎಳೆಯುತ್ತಾರೆ. ಆವಾಗ ಬಲೆಯಲ್ಲಿ ವಿವಿಧ ಜಾತಿಯ ಮೀನುಗಳು ಸಿಕ್ಕಿ ಹಾಕಿಕೊಳ್ಳುತ್ತವೆ. ಪ್ರಸ್ತುತ ಮಲ್ಪೆ ಬಂದರು ವ್ಯಾಪ್ತಿಯಲ್ಲಿ 40 ಕೈರಂಪಣಿ ದೋಣಿಗಳಿದ್ದು ಸಾವಿರಾರು ಮಂದಿಗೆ ಬದುಕು ಕಟ್ಟಿದೆ.
ಮಳೆಗಾಲದ ನಾಡದೋಣಿ (ಡಿಸ್ಕೋ ಫಂಡ್)ಗಳು 10 ಅಶ್ವಶಕ್ತಿ ಎಂಜಿನ್‌ನ್ನು ಬಳಸಿ ಕಡಲಿಗಿಳಿಯುತ್ತವೆ. ಸುಮಾರು 5-6 ನಾಟಿಕಲ್ ಮೈಲು ದೂರ ಮಾತ್ರ ಸಾಗುತ್ತಾರೆ. ಮಳೆ-ಗಾಳಿ ಸವಾಲುಗಳನ್ನು ಎದುರಿಸಿ ಅಪಾಯದ ನಡುವೆ ಮೀನುಗಾರಿಕೆ ನಡೆಸುತ್ತಾರೆ. ಕಡಲಲ್ಲಿ 2 ಗಂಟೆಯಿಂದ 10 ಗಂಟೆಯವರೆಗೆ ಇದ್ದು ಡಿಸ್ಕೊ ಬಲೆಯ ಮೂಲಕ ಮೀನುಗಾರಿಕೆ ನಡೆಸುತ್ತಾರೆ. ಚಂಡಮಾರುತ, ತೂಫಾನ್ ಎದ್ದರೆ ಕೂಡಲೇ ದಡ ಸೇರುವಷ್ಟು ದೂರ ಮಾತ್ರ ಹೋಗುತ್ತಾರೆ. ಇಲ್ಲಿ ಮಾಲಕ ಕಾರ್ಮಿಕ ಅನ್ನೋ ವಿಭಾಗ ಇಲ್ಲ. ಖರ್ಚು ಮತ್ತು ಆದಾಯವನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಈ ನಾಡದೋಣಿ ಬಲೆಗೆ ಸಿಗಡಿ, ಬಂಗುಡೆ, ಬೂತಾಯಿ ಮೀನು ಬೀಳುತ್ತದೆ. ಮಲ್ಪೆ ಬಂದರು ವ್ಯಾಪ್ತಿಯಲ್ಲಿ (ಉಚ್ಚಿಲದಿಂದ ಕೋಡಿಬೆಂಗ್ರೆವರೆಗೆ) ಇಂತಹ ಸುಮಾರು 40 ನಾಡದೋಣಿಗಳ ಗುಂಪು ಇದೆ. ಒಂದೊಂದರಲ್ಲಿ 40ರಿಂದ 60 ಮಂದಿ ಇರುತ್ತಾರೆ. ಬೇಸಗೆಯಲ್ಲೂ ಈ ಮೀನುಗಾರಿಕೆ ನಡೆಯುತ್ತದೆ. ಯಂತ್ರದ ಮೂಲಕ ನಡೆಸುವ ಬೇರೆ ವರ್ಗವಿದೆ. ಮೀನು ಹಿಡಿಯುವ ಬಲೆಗಳಲ್ಲೂ ವ್ಯತ್ಯಾಸವಿರುತ್ತದೆ. ಮರಣಬಲೆ
ತೂಫಾನ್ ಎದ್ದ ಬಳಿಕ ಸಮುದ್ರತೀರದಲ್ಲಿ ದೊಡ್ಡ ಹೊಂಡಗಳ ರೀತಿ ನಿರ್ಮಾಣವಾಗುತ್ತವೆ. ಇಲ್ಲಿ ನೀರಿನ ಸೆಳೆತವೂ ಜಾಸ್ತಿ ಇರುತ್ತದೆ. ಇದರ ಒಂದು ಬದಿಯಲ್ಲಿ ನಿಂತು ಬಲೆ ಬೀಸಿ ಮೀನು ಹಿಡಿಯಲಾಗುತ್ತದೆ. ಕುತ್ತಿಗೆಯವರೆಗೆ ನೀರಿಗಿಳಿದು ಬಲೆಯನ್ನು ಬಿಟ್ಟು ಹಗ್ಗದ ಸಹಾಯದಿಂದ ಎಳೆಯಲಾಗುತ್ತದೆ. ಸಮುದ್ರದ ಉಬ್ಬರ ಹೊತ್ತಿನಲ್ಲಿ ಇದು ಹೆಚ್ಚು ಅಪಾಯಕಾರಿ. ಎಚ್ಚರ ತಪ್ಪಿದರೆ ಸಮುದ್ರಪಾಲಾಗುವ ಸಾಧ್ಯತೆಯೂ ಇದೆ.
Related Articles
ಸಣ್ಣಟ್ರಾಲ್‌ದೋಣಿ ಮೀನುಗಾರಿಕೆಯಲ್ಲಿ 8 ಅಶ್ವಶಕ್ತಿ ಎಂಜಿನ್ ಬಳಸಿ 3 ಮಂದಿ ತೆರಳಿ ಸಮುದ್ರದಲ್ಲಿ ಮೀನು ಹಿಡಿಯಲಾಗುತ್ತದೆ. ಟ್ರಾಲ್ ದೋಣಿ ಬಲೆಗೆ ಹೆಚ್ಚಾಗಿ ಸಿಗಡಿ, ನಂಗ್, ಕಲ್ಲರ್ ಮೀನು ದೊರಕಿದರೆ, ಕಂತಬಲೆಯನ್ನು ಹೊಳೆ ಮತ್ತು ಸಮುದ್ರದಲ್ಲಿ ನಡೆಸಲಾಗುತ್ತದೆ. ಇದರಲ್ಲಿ ಒಂದೊಂದು ಮೀನಿಗೆ ಒಂದೊಂದು ತರಹದ ಬಲೆಗಳನ್ನು ಉಪಯೋಗಿಸಿ ಮೀನು ಹಿಡಿಯಲಾಗುತ್ತದೆ. ಕಂಡಿಗೆ, ನಂಗ್ ಸಿಗಡಿ ಸಿಗುತ್ತದೆ.
Advertisement
ಪಟ್ಟಬಲೆ ಮೀನುಗಾರಿಕೆ ಕಂತಬಲೆಯ ಮೀನುಗಾರಿಕೆ ರೀತಿಯೇ ಇದ್ದು, ಬಲೆ ಸಾಕಷ್ಟು ಉದ್ದವಿರುತ್ತದೆ. ವೃತ್ತಾಕಾರದಲ್ಲಿ ಬಲೆ ಹಾಕಿ ಮೀನನ್ನು ಹಿಡಿಯಲಾಗುತ್ತದೆ. ಇದರಲ್ಲಿ 4ರಿಂದ 6 ಮಂದಿ ಇರುತ್ತಾರೆ. ಬೀಸುಬಲೆ (ಬಿಸಣ) ಹೆಚ್ಚಾಗಿ ಹೊಳೆಯಲ್ಲಿ ಮಾತ್ರ ನಡೆಸಲಾಗುತ್ತದೆ. ಇದರಲ್ಲಿ ಇಬ್ಬರು ಇರುತ್ತಾರೆ. ಇಂತಹ ಮೀನುಗಾರಿಕೆ ಪಡುಬಿದ್ರೆ ಉಚ್ಚಿಲ, ಕಾಪು, ಉದ್ಯಾವರ, ಮಲ್ಪೆ, ತೊಟ್ಟಂ, ಹೂಡೆ ಬೆಂಗ್ರೆ, ಗಂಗೊಳ್ಳಿವರೆಗೆ ಇದೆ.
ಯುವಜನತೆ ನಿರಾಸಕ್ತಿಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲಿನ ನಾಡದೋಣಿ ಮೀನುಗಾರಿಕೆಯಿಂದ ಬಹಳಷ್ಟು ಜನ ವಿಮುಖರಾಗುತ್ತಿದ್ದಾರೆ. ಮಳೆ ಪ್ರಮಾಣ ಕಡಿಮೆಯಾಗಿ ಸಮುದ್ರದಲ್ಲಿ ಪೂರಕವಾದ ವಾತಾವರಣ ಇಲ್ಲದೆ ನಿರೀಕ್ಷೆಯ ಮೀನು ಸಿಗುತ್ತಿಲ್ಲ. ಯಾಂತ್ರಿಕ ದೋಣಿಯಲ್ಲಿ ತಂಡೇಲರಾಗಿ ದುಡಿಯುವ ಮಂದಿ ಈಗ ನಾಡದೋಣಿಗೆ ಬರುತ್ತಿಲ್ಲ. ಮಧ್ಯ ವಯಸ್ಸಿನ, ಹಿರಿಯ ತಲೆಗಳು ಮಾತ್ರ ನಾಡದೋಣಿಯಲ್ಲಿ ಉಳಿದುಕೊಂಡಿದ್ದಾರೆ.
-ದಿನೇಶ್ ಪಡುಕರೆ ಪ್ರಾಚೀನ ಮೀನುಗಾರಿಕೆ ಪದ್ಧತಿಉಳಿಯಬೇಕು
ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಬಹಳ ಹಿಂದಿನಿಂದ ಬಂದ ಪದ್ಧತಿ. ಮಳೆಗಾಲದಲ್ಲಿ ಸಾಹಸ ಮಾಡಿ ನಾವು ಮೀನು ಹಿಡಿಯಬೇಕು. ತೂಫಾನ್ ಬಂದರೆ ಮೀನುಗಾರಿಕೆ ಇಲ್ಲ. ಈ ಪ್ರಾಚೀನ ಪದ್ಧತಿ ಉಳಿಸಲು ಸರಕಾರವೂ ಅದಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಬೇಕು.
– ರಾಮ ಕಾಂಚನ್, ಹಿರಿಯ ನಾಡದೋಣಿ ಮೀನುಗಾರರು ಮಾಹಿತಿ: ನಟರಾಜ್ ಮಲ್ಪೆ
ಚಿತ್ರಗಳು: ಗಂಗಾಧರ ಪಡುಕರೆ, ವಾಮನ ಬಂಗೇರ ಪಡುಕರೆ.