ಬೆಂಗಳೂರು: ಜೆಡಿಎಸ್ ಭಿನ್ನಮತೀಯ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸಕ್ಕೆ ಇಂಧನ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಸಮಾಲೋಚನೆ ನಡೆಸಿದರು.
ಜೆಡಿಎಸ್ ಭಿನ್ನಮತೀಯ ಶಾಸಕರ ತಂಡದ ನೇತೃತ್ವ ವಹಿಸಿರುವ ಜಮೀರ್ ಅಹಮದ್ ಜತೆಗೂಡಿ ಮಂಗಳವಾರ ಬೆಳಗ್ಗೆ ಕಾವಲ್‌ಭೈರಸಂದ್ರದಲ್ಲಿರುವ ಅಖಂಡ ಶ್ರೀನಿವಾಸಮೂರ್ತಿ ನಿವಾಸಕ್ಕೆ ಭೇಟಿ ನೀಡಿದ್ದ ಶಿವಕುಮಾರ್, ಒಂದು ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದರು.
ಕಾಂಗ್ರೆಸ್ ಸೇರ್ಪಡೆಯಾದರೆ ನಿಮ್ಮ ಹಿತಾಸಕ್ತಿ ಕಾಯಲಾಗುವುದು ಎಂದು ಶಿವಕುಮಾರ ಇದೇ ವೇಳೆ ಭರವಸೆ ನೀಡಿದರು ಎಂದು ಹೇಳಲಾಗಿದೆ. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಅಖಂಡ ಶ್ರೀನಿವಾಸಮೂರ್ತಿ ನಮ್ಮ ಸ್ನೇಹಿತರು. ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ನಮಗೆ ಸಹಕಾರ ನೀಡಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರಗಳಿಗೂ ಭೇಟಿ ನೀಡುತ್ತಿದ್ದೇನೆ. ಅದೇ ರೀತಿ ಇಲ್ಲಿಗೂ ಬಂದಿದ್ದೇನೆ ಎಂದು ಹೇಳಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಹೈಕಮಾಂಡ್ ಈಗಾಗಲೇ ಏಳು ಜೆಡಿಎಸ್ ಶಾಸಕರಿಗೆ ಟಿಕೆಟ್ ಕೊಡುವ ಭರವಸೆ ನೀಡಿದೆ. ಹೈಕಮಾಂಡ್ ತೀರ್ಮಾನ ಕೈಗೊಂಡ ನಂತರ ನಮ್ಮದೇನೂ ಇರುವುದಿಲ್ಲ ತಿಳಿಸಿದರು.
ಜಮೀರ್ ಅಹಮದ್ ಮಾತನಾಡಿ, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ನಮಗೆ ಟಿಕೆಟ್ ನೀಡುವ ವಿಚಾರದಲ್ಲಿ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ, ಟಿಕೆಟ್‌ನ ಬಗ್ಗೆ ನಮಗೇನೂ ಚಿಂತೆಯಿಲ್ಲ. ವಿಧಾನಮಂಡಲ ಅಧಿವೇಶನ ಮುಗಿದ ನಂತರ ಫೆ.26 ಅಥವಾ 28 ಕ್ಕೆ ಏಳು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮಾತನಾಡಿ, ನಾವೆಲ್ಲಾ ಏಳು ಶಾಸಕರೂ ಒಟ್ಟಾಗಿದ್ದೇವೆ. ನಾನು ಮುಂದಿನ ಚುನಾವಣೆಯಲ್ಲಿ ಪುಲಿಕೇಶಿ ನಗರದಿಂದಲೇ ಸ್ಪರ್ಧಿಸುತ್ತೇವೆ ಎಂದರು.