Advertisement

ಹೆಚ್ಚು ಸೀಟು ಗೆಲ್ಲಲು ಸಮರ್ಥರಿಗೆ ಟಿಕೆಟ್‌

12:21 PM Apr 10, 2018 | |

ಬೆಂಗಳೂರು: ರಾಜಧಾನಿಯಲ್ಲಿ ಅತಿ ಹೆಚ್ಚು ಸೀಟು ಗೆಲ್ಲುವ ಉದ್ದೇಶದಿಂದ ಬಿಜೆಪಿಯ ಎಲ್ಲ ಹಾಲಿ ಶಾಸಕರಿಗೂ ಮತ್ತೆ ಟಿಕೆಟ್‌ ನೀಡುವ ಜತೆಗೆ ಗೋವಿಂದರಾಜನಗರದಲ್ಲಿ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.

Advertisement

ನಗರದಲ್ಲಿ ಒಂದೊಂದು ಕ್ಷೇತ್ರವೂ ಪ್ರಮುಖವಾಗಿರುವುದರಿಂದ ಬಿಜೆಪಿ ಶಾಸಕರು ಇಲ್ಲದ ಕಡೆ ಸಮರ್ಥ ಅಭ್ಯರ್ಥಿಗೆ ಟಿಕೆಟ್‌ ನೀಡಲು ಚಿಂತನೆ ನಡೆಸಿದ್ದ ವರಿಷ್ಠರು, ಪ್ರಬಲ ಅಭ್ಯರ್ಥಿಗಳನ್ನು ಹುಡುಕುತ್ತಿದ್ದಾರೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಆರ್‌ಎಸ್‌ಎಸ್‌ ಮೂಲದ ತುಳಸಿ ಮುನಿರಾಜು ಗೌಡ ಆವರಿಗೆ ರಾಜರಾಜೇಶ್ವರಿ ನಗರದ ಟಿಕೆಟ್‌ ನೀಡಲಾಗಿದೆ. ಜತೆಗೆ ಯಶವಂತಪುರ, ಶಾಂತಿನಗರ, ವಿಜಯನಗರ, ಚಾಮರಾಜಪೇಟೆ, ಬಿಟಿಎಂ ಲೇಔಟ್‌, ಶಿವಾಜಿನಗರ, ಸರ್ವಜ್ಞನಗರ, ಬ್ಯಾಟರಾಯನಪುರ, ಕೆ.ಆರ್‌.ಪುರ ಕ್ಷೇತ್ರಗಳಲ್ಲಿಯೂ ಸಮರ್ಥರ ಹುಡುಕಾಟ ನಡೆಯುತ್ತಿದೆ.

ಶಿವಾಜಿನಗರದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬ್ಯಾಟರಾಯನಪುರದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಸಹೋದರ ರವಿ, ಕೆ.ಆರ್‌.ಪುರದಲ್ಲಿ ನಂದೀಶ್‌ರೆಡ್ಡಿ ಪ್ರಬಲ ಆಕಾಂಕ್ಷಿಗಳಾದರೂ ಮೊದಲ ಪಟ್ಟಿಯಲ್ಲಿ ಅವರ ಹೆಸರು ಪ್ರಕಟಿಸಿಲ್ಲ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವತಿಯಿಂದ ನಡೆಸಿರುವ ಸಮೀಕ್ಷೆಗಳಲ್ಲಿ ಕಳೆದ ಬಾರಿ ಸ್ಪರ್ಧಿಸಿ ಸೋತವರ ಬಗ್ಗೆ ಜನಸಮುದಾಯದಲ್ಲಿ ಅಷ್ಟಾಗಿ ಒಲವು ವ್ಯಕ್ತವಾಗದ ಕಾರಣ ಸಮರ್ಥರ ಹುಡುಕಾಟ ನಡೆಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಚಿಕ್ಕಪೇಟೆಯಲ್ಲಿ ಉದಯ ಗರುಡಾಚಾರ್‌ ಅವರಿಗೆ ಟಿಕೆಟ್‌ ಸಿಗಲು ಕೇಂದ್ರ ಸಚಿವ ಅನಂತಕುಮಾರ್‌ ಅವರು ಪಟ್ಟು ಹಿಡಿದಿದ್ದು ಕಾರಣ ಎನ್ನಲಾಗಿದ್ದು, ಕಳೆದ ಬಾರಿ ಸೋತಿರುವುದರಿಂದ ಮತ್ತೆ ಅವಕಾಶ ಕೊಡಬೇಕು ಎಂದು ಕೇಂದ್ರ ಚುನಾವಣಾ ಮಂಡಳಿ ಸಭೆಯಲ್ಲಿ ಪ್ರತಿಪಾದಿಸಿದರು. ಹೀಗಾಗಿ, ಆಕಾಂಕ್ಷಿಗಳಾದ ಪಿ.ಎನ್‌.ಸದಾಶಿವ, ಎನ್‌.ಆರ್‌.ರಮೇಶ್‌ ಅವರ ಹೆಸರು ಪಟ್ಟಿಯಲ್ಲಿದ್ದರೂ ಅಂತಿಮವಾಗಿ ಉದಯ ಗರುಡಾಚಾರ್‌ ಅವರಿಗೆ ಅದೃಷ್ಟ ಒಲಿಯಿತು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next