Advertisement

ಹಳ್ಳಿ ಹಳ್ಳಿಗೆ ಭೇಟಿ ನೀಡಿದವರಿಗೆ ಮಾತ್ರ ಟಿಕೆಟ್; ಮುಖಂಡರ ಹಿಂದೆ ಇದ್ದವರಿಗೆ ಇಲ್ಲ: ಡಿಕೆಶಿ

09:22 AM Jul 08, 2021 | Team Udayavani |

ಶಿರಸಿ: ಹಳ್ಳಿಗೆ ಹೋಗೋರಿಗೆ, ಮನೆಮನೆಗೆ ಹೋಗುವವರಿಗೆ ಮಾತ್ರ ಟಿಕೆಟ್.  ನನ್ ಹಿಂದೆ, ಲೀಡರ್ ಗಳ ಹಿಂದೆ ಓಡಾಡಿದರೆ  ಖೆಲ್ ಖತಂ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

Advertisement

ಅವರು ಉತ್ತರ ಕನ್ನಡದ ಶಿರಸಿಯಲ್ಲಿ ಮಾರಿಕಾಂಬಾ ದೇವಸ್ಥಾನದಿಂದ ಕೇಂದ್ರ ರಾಜ್ಯ ಸರಕಾರ ಇಂಧನ ದರ ಏರಿಕೆ ಮಾಡಿದ್ದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಸೈಕಲ್ ಜಾಥಾ ನಡೆಸಿ ಪ್ರತಿಭಟನೆ ನಡೆಸಿ‌ ಮಾತನಾಡಿದರು.

ಯಾರು ಎಷ್ಟು ಜನರಿಗೆ ಸಹಕಾರ‌ ಮಾಡಿದ್ದಾರೆ‌, ಕೊರೋನಾ‌ ಸಂಕಷ್ಟದಲ್ಲಿ ಯಾರು ಎಷ್ಟು ಜನರಿಗೆ ನೆರವಾಗಿದ್ದಾರೆ,  ಕಾರ್ಯಕರ್ತರ ಸಂಘಟನೆ ಮಾಡಿದ್ದಾರೆ ಎಂಬೆಲ್ಲ ಲೆಕ್ಕಾಚರ ನೋಡುತ್ತೇವೆ. ಮುಖಂಡರ ಹಿಂದೆ ಇದ್ದವರಿಗೆ ಟಿಕೆಟ್ ಇಲ್ಲ. ಮನೆ ಮನೆ, ಹಳ್ಳಿ ಹಳ್ಳಿಗೆ ಭೇಟಿ ನೀಡಿದವರಿಗೆ  ಮಾತ್ರ ಆದ್ಯತೆ ಎಂದರು.

ಈ ದೇಶದಲ್ಲಿ ಆಗುತ್ತಿರುವ ಅನ್ಯಾಯ ನೋಡಿ ಪ್ರತಿಭಟನೆ ನಡೆಸಿದ್ದೇವೆ‌. ಜನರ ಜೇಬಿಗೆ ನೇರ ಪಿಕ್ ಪಾಕೆಟ್ ಮಾಡುತ್ತಿದ್ದಾರೆ. ಇದರ ವಿರುದ್ದ ಹೋರಾಟ ಇಡೀ ದೇಶದ ಕಾರ್ಯಕ್ರಮವಾಗಿ ಕಾಂಗ್ರೆಸ್ ನಡೆಸಿದೆ. ಹದಿನೈದು‌ ದಿನದ ಹಿಂದೆ ನಾಟೌಟ್ 100 ಆದಾಗ 5 ದಿನ ಐದು ಸಾವಿರ ಕಡೆ ರಾಜ್ಯ, ಜಿಲ್ಲೆ, ತಾಲೂಕು, ಜಿಲ್ಲಾ ಪಂಚಾಯ್ತಿ‌ ಮಟ್ಟದಲ್ಲಿ‌ ಪ್ರತಿಭಟನೆ ಮಾಡಲಾಗಿದೆ.

ರಾಜ್ಯದ, ಸಾಮಾನ್ಯ ಜನರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೇವೆ. ಈಗಲೂ ಸೈಕಲ್ ಜಾಥಾ ನಡೆಸಿ ಉಭಯ ಪ್ರತಿಭಟನೆ ನಡೆಸಿದ್ದೇವೆ. ಇಲ್ಲೂ ಎರಡು ಸಭೆ ನಡೆಸುವ ಸ್ಥಳವನ್ನೂ ನಿರ್ಬಂಧಿಸಿದ್ದಾರೆ. ಇದು‌ ಜನರ ಕಾರ್ಯಕ್ರಮ. ಅವರ ನೋವನ್ನು‌ ಕಾಂಗ್ರೆಸ್ ಮೂಲಕ ಹೊರ ಹಾಕಿದ್ದೇವೆ. ಪೆಟ್ರೋಲ್ ದರ ಇಳಿಸಬೇಕು ಎಂದು ಆಗ್ರಹಿಸಿದ್ದೇವೆ ಎಂದರು.

Advertisement

ಹಿಂದೆ ಎಂಪಿಗಳೆಲ್ಲ ನಮ್ಮ ತಲೆ‌ಮೇಲೆ ಡಬ್ಬಾ ಇಟ್ಟಿದ್ದಾರೆ. ಅನಂತರ ಎಲ್ಲೋದರು? ಶೋಭಕ್ಕ, ಯಡಿಯೂರಪ್ಪ,  ಅನಂತಕುಮಾರ ಹೆಗಡೆ,  ಸದಾನಂದ ಗೌಡರು ಎಲ್ಲೋದರು. ಅಂದು‌ ಮಾತನಾಡಿದರು ಇಂದು ಯಾಕೆ ಮಾತಾಡೊಲ್ಲ. 25 ಜನ ಎಂಪಿ ಇದ್ದರೂ ಒಬ್ಬರೂ ಪೆಟ್ರೋಲ್ ದರ ಏರಿಕೆಗೆ‌ ಮಾತನಾಡುತ್ತಿಲ್ಲ?

ರಾಜ್ಯದ ಕರಾವಳಿ ಭಾಗದ ಜ್ವಲಂತ ಸಮಸ್ಯೆಯಾದ ಮೀನುಗಾರರ ಸಮಸ್ಯೆ ಬಗ್ಗೆ ವಿಧಾನಸೌಧದಲ್ಲಿ ಧ್ವನಿ ಎತ್ತಲಾಗುತ್ತದೆ. ಒಬ್ಬ ಮೀನುಗಾರ 10 ಜನರಿಗೆ ಉದ್ಯೋಗ ಸೃಷ್ಟಿ ಮಾಡುತ್ತಾನೆ. ಈ ಕಾರಣ ಕರಾವಳಿ ಜಿಲ್ಲೆಗಳಲ್ಲಿ ಸಂಚರಿಸಿ ಮೀನುಗಾರರ ಸಮಸ್ಯೆ ಆಲಿಸಲಾಗಿದೆ. ಸಮಸ್ಯೆಗಳ ಪಟ್ಟಿಯನ್ನು ಸಿದ್ಧ ಮಾಡಲಾಗಿದ್ದು, ವಿಧಾನಸೌಧದಲ್ಲಿ ಈ ಬಗ್ಗೆ ಧ್ವನಿ ಎತ್ತಲಾಗುವುದು ಎಂದರು. ಹೊನ್ನಾವರದ ಕಾಸರಕೋಡ್ ನಲ್ಲಿ  ಬಂದರು ವಿಸ್ತರಣೆ ಯೋಜನೆ ನಡೆದಿದೆ. ಸರ್ಕಾರ ಏನೇ ಯೋಜ‌ನೆ ಜಾರಿಮಾಡಿದರೂ ಜನಪರವಾಗಿ ಕಾಂಗ್ರೆಸ್ ಹೋರಾಡುತ್ತದೆ. ಬಂದರು ಬೇರೆಲ್ಲಾದರೂ ಮಾಡಲಿ ಆದರೆ ಮೀನುಗಾರರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಿ ಎಂದು ಹೇಳಿದರು.

ಮೇಕೆದಾಟು, ಮಹಾದಾಯಿ ಎರಡೂ ನಮ್ಮ ಹಕ್ಕು. ಆ ರಾಜ್ಯಕ್ಕೆ ಪತ್ರ ಬರೆಯುವ ಅಗತ್ಯವೂ ಇರಲಿಲ್ಲ ಎಂದರು.

ಈ ವೇಳೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ವಿ.ಪ.ಸದಸ್ಯ ಬಿ.ಕೆ.ಹರಿಪ್ರಸಾದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಪ್ರಶಾಂತ ದೇಶಪಾಂಡೆ, ಸತೀಶ ಸೈಲ್, ಮಂಕಾಳ ವೈದ್ಯ, ನಿವೇದಿತ್ ಆಳ್ವಾ, ಸುಷ್ಮಾ ರಾಜಗೋಪಾಲ, ಸಂತೋಷ ಶೆಟ್ಟಿ, ಶಿವಾನಂದ ಹೆಗಡೆ, ದೀಪಕ ದೊಡ್ಡೂರು, ನಾಗರಾಜ ನಾರ್ವೇಕರ್ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next