Advertisement

ಆಪ್ತರಿಗೆ ಸಿಗದ ಟಿಕೆಟ್‌: ಬಿಎಸ್‌ವೈ ಅಸಮಾಧಾನ

03:37 PM Jul 16, 2019 | Lakshmi GovindaRaju |

ಬೆಂಗಳೂರು: ಬಿಜೆಪಿಯ ಹಾಲಿ ಸಂಸದರಿಗೆಲ್ಲಾ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತ ಕುಮಾರ್‌ ಹಾಗೂ ಚಿಕ್ಕೋಡಿಯಲ್ಲಿ ರಮೇಶ್‌ ಕತ್ತಿ ಅವರಿಗೆ ಟಿಕೆಟ್‌ ಸಿಗದಿರುವುದಕ್ಕೆ ತೀವ್ರ ಅಸಮಾಧಾನಗೊಂಡಿದ್ದಾರೆ.

Advertisement

ಕಳೆದ ಬಾರಿ ಕೇವಲ 3000 ಮತಗಳ ಅಂತರದಿಂದ ಪರಾಭವಗೊಂಡಿದ್ದ ರಮೇಶ್‌ ಕತ್ತಿ ಅವರಿಗೆ ಚಿಕ್ಕೋಡಿಯಿಂದ ಟಿಕೆಟ್‌ ನೀಡಬೇಕು ಎಂಬುದು ಯಡಿಯೂರಪ್ಪ ಅವರ ಆಶಯವಾಗಿತ್ತು. ಅದರಂತೆ ಕೋರ್‌ ಕಮಿಟಿಯಿಂದ ಶಿಫಾರಸು ಮಾಡಲಾದ ಸಂಭಾವ್ಯರ ಪಟ್ಟಿಯಲ್ಲಿ ರಮೇಶ್‌ ಕತ್ತಿ ಹೆಸರು ಪ್ರಧಾನವಾಗಿತ್ತು.

ಅಲ್ಲದೇ ಕ್ಷೇತ್ರದಲ್ಲಿ ಸಕ್ರಿಯವಾಗಿರುವಂತೆ ಯಡಿಯೂರಪ್ಪ ಅವರು ರಮೇಶ್‌ ಕತ್ತಿ ಅವರಿಗೆ ಸೂಚಿಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಅವರಿಗೆ ಟಿಕೆಟ್‌ ನೀಡದಿರುವುದರಿಂದ ಯಡಿಯೂರಪ್ಪ ತೀವ್ರ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ಮಾಜಿ ಸಚಿವ ಉಮೇಶ್‌ ಕತ್ತಿಯವರು ಚಿಕ್ಕೋಡಿ ಮಾತ್ರವಲ್ಲದೆ ಬೆಳಗಾವಿ ಭಾಗದಲ್ಲೂ ಪ್ರಭಾವಿಯಾಗಿದ್ದು, ಸಹೋದರನಿಗೆ ಟಿಕೆಟ್‌ ನೀಡದಿರುವ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿದ್ದಾರೆ. ಒಂದೊಮ್ಮೆ ಉಮೇಶ್‌ ಕತ್ತಿ ಚುನಾವಣೆಯಲ್ಲಿ ತಟಸ್ಥವಾಗಿ ಉಳಿದರೆ,

ಇಲ್ಲವೇ ಇನ್ನಾವುದೇ ನಿರ್ಧಾರ ಕೈಗೊಂಡರೆ ಚಿಕ್ಕೋಡಿ ಮಾತ್ರವಲ್ಲದೆ ಬೆಳಗಾವಿ ಕ್ಷೇತ್ರದ ಫ‌ಲಿತಾಂಶದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆ ಹಿನ್ನೆಲೆಯಲ್ಲಿ ರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾಗುವ ಆತಂಕದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Advertisement

ಇನ್ನೊಂದೆಡೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತ ಕುಮಾರ್‌ ಅವರಿಗೆ ಟಿಕೆಟ್‌ ನೀಡದಿರುವುದು ಸಹ ಯಡಿಯೂರಪ್ಪ ಅವರ ಅಸಮಾಧಾನವನ್ನು ಹೆಚ್ಚಿಸಿದೆ. ಸಂಘಟನೆ ಸೇರಿದಂತೆ ಪ್ರಚಾರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ತೇಜಸ್ವಿನಿ ಅನಂತ ಕುಮಾರ್‌ ಅವರಿಗೆ ಅವಕಾಶ ನೀಡದಿರುವುದು ಸಂಘಟನೆಯ ಮೇಲೆ ಪರಿಣಾಮ ಬೀರಲಿದೆ.

ಜತೆಗೆ ತೇಜಸ್ವಿನಿ ಅನಂತ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್‌ ನೀಡಿರುವುದರಿಂದ ಮುಖಂಡರು, ಕಾರ್ಯಕರ್ತರಿಗೂ ಅಸಮಾಧಾನವಾಗಿರುವುದು ಯಡಿಯೂರಪ್ಪ ಅವರ ತಲೆಬಿಸಿ ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಚಾರವಾಗಿ ರಾಜ್ಯ ಬಿಜೆಪಿ ಚುನಾವಣಾ ಪ್ರಭಾರಿ ಮುರಳೀಧರರಾವ್‌ ಅವರ ಬಳಿಯೂ ಯಡಿಯೂರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇಷ್ಟಾದರೂ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಎಲ್ಲರೂ ಸಂಘಟಿತವಾಗಿ ಅಭ್ಯರ್ಥಿ ಪರ ಪ್ರಚಾರ ನಡೆಸುವಂತೆ ಮಾಡುವ ನಿಟ್ಟಿನಲ್ಲಿ ತೆರೆಮರೆಯಲ್ಲೇ ಮುಖಂಡರ ಮನವೊಲಿಸುತ್ತಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next