ನಾನು ಪದವಿಯಲ್ಲಿ ಓದುತ್ತಿದ್ದ ಸಂದರ್ಭ. ಎಕ್ಸಾಮ್‌ಗಳು ಸಮೀಪಿಸಿದ್ದವು ಸೆಮ್ ಪೂರ್ತಿ ಹುಡುಗಾಟದಲ್ಲಿ ಕಾಲ ಕಳೆದ ನಮಗೆ ಪರೀಕ್ಷೆ ಒಂದು ರೀತಿಯಲ್ಲಿ ಮೂರನೆಯ ಮಹಾಯುದ್ಧದಂತೆ ಕಾಣುತ್ತಿತ್ತು. ಓದಲು ಕುಳಿತರೆ ಆರು ವಿಷಯಗಳ ಪೈಕಿ ಮೂರು ವಿಷಯಗಳೂ ಮುಗಿಯುತ್ತಿರಲಿಲ್ಲ. ಎಕನಾಮಿಕ್ಸ್‌ನಲ್ಲಿ ಬರುವ ಸಿದ್ಧಾಂತಗಳು ಏನು ಮಾಡಿದರೂ ತಲೆ ಸೇರುತ್ತಿರಲಿಲ್ಲ. ಪರೀಕ್ಷೆಯ ದಿನ ಒಂದು ಚೀಟಿಯಲ್ಲಿ ಎಲ್ಲ ಸಿದ್ಧಾಂತಗಳನ್ನು ಬರೆದುಕೊಂಡು ಸಾಕ್ಸ್‌ನಲ್ಲಿ ಇಟ್ಟುಕೊಂಡು ಪರೀûಾ ಹಾಲ್‌ಗೆ ಹೋದೆ. ಸೂಪರ್‌ವೈಸರ್ ತುಂಬಾ ಸ್ಟ್ರಿಕ್ಟ್ ಆಗಿದ್ದರು. ಉತ್ತರ ಪತ್ರಿಕೆಯನ್ನು ಕೊಟ್ಟ ನಂತರ ಹಾಲ್‌ಟಿಕೆಟ್‌ನಲ್ಲಿ ಸಹಿ ಮಾಡುತ್ತಾ ಎಲ್ಲ ವಿದ್ಯಾರ್ಥಿಗಳ ಹತ್ತಿರ ಕಾಪಿ ಚೀಟಿ ಹುಡುಕುತ್ತಿದ್ದರು. ಸಿಕ್ಕರೆ ಪೇಪರ್ ಕಸಿದುಕೊಳ್ಳುವುದಾಗಿ ಬೆದರಿಕೆ ಹಾಕಿದರು.
ಒಂದು ವೇಳೆ ಕಾಪಿ ಸಿಕ್ಕರೆ ಎಲ್ಲ ಹುಡುಗಿಯರ ಮುಂದೆ ಅವಮಾನವಾಗುತ್ತದೆ. ಅದಕ್ಕೇ ಕಾಪಿಗಿಂತ ಮಾನ ಮುಖ್ಯ ಎಂದುಕೊಂಡು ಸಾಕ್ಸ್‌ನಲ್ಲಿ ಬಚ್ಚಿಟ್ಟಿದ್ದ ಚೀಟಿಯನ್ನು ಕಿಟಕಿಯಿಂದ ಹೊರಗೆ ಎಸೆದು ಬಿಟ್ಟೆ. ನನ್ನ ಸರದಿ ಬಂದಾಗ ಸೂಪರ್‌ವೈಸರ್ “ಹಾಲ್‌ಟಿಕೆಟ್ ಕೊಡು’ ಎಂದರು.
ಎದೆಯ ಜೇಬಿನಲ್ಲಿ ಇಟ್ಟುಕೊಂಡಿದ್ದ ಹಾಲ್‌ಟಿಕೆಟ್ ತೆಗೆದು ಅವರ ಕೈಗೆ ಕೊಟ್ಟೆ. ಅವರು ಸಿಟ್ಟಿನಿಂದ ನನ್ನನ್ನೇ ದುರುದುರು ನೋಡಲು ಶುರುಮಾಡಿದರು. ಯಾಕೆ ಹೀಗೆ ನನ್ನನ್ನೇ ದುರುಗುಟ್ಟಿ ನೋಡುತ್ತಿದ್ದಾರೆ ಅಂತ ಮೊದಲು ಗೊತ್ತಾಗಲಿಲ್ಲ. ಮರುಕ್ಷಣವೇ- ನಾನು ಅವರ ಕೈಗಿತ್ತ ಹಾಲ್‌ಟಿಕೆಟನ್ನು ಮುಂದೆ ಹಿಡಿದರು. ನೋಡಿದರೆ, ಅದು ಕಾಪಿ ಚೀಟಿಯಾಗಿತ್ತು. ಏನಾಗಿತ್ತು ಅಂದರೆ ಪರೀಕ್ಷೆಯ ಗಡಿಬಿಡಿಯಲ್ಲಿ ಕಾಪಿ ಚೀಟಿ ಹಾಗೂ ಹಾಲ್ ಟಿಕೆಟನ್ನು ನಾನು ಇಡಬೇಕಿದ್ದ ಜಾಗ ಅದಲುಬದಲಾಗಿತ್ತು. ಪರಿಣಾಮ, ನಾನು ನನ್ನ ಕಿಸೆಯಿಂದ ಹಾಲ್ ಟಿಕೆಟ್ ಅಂದುಕೊಂಡು ಕಾಪಿ ಚೀಟಿಯನ್ನು ಅವರ ಕೈಯಲ್ಲಿಟ್ಟಿದ್ದೆ. ಅಂದರೆ, ಈ ಮೊದಲು ಚೂರು ಚೂರು ಮಾಡಿ ಹೊರಗೆ ಎಸೆದಿದ್ದು ಹಾಲ್ ಟಿಕೆಟ್ ಅಂತ ಕನ್‌ಫರ್ಮ್ ಆಯಿತು. ಎಕ್ಸಾಮ್‌ಗೆ ಅವಸರದಿಂದ ಬರುವಾಗ ಈ ರೀತಿಯಾದ ಗೊಂದಲವಾಗಿತ್ತು. ನಂತರ ಸೂಪರ್‌ವೈಸರ್ ಬಳಿ ಕ್ಷಮೆ ಕೇಳಿದೆ. ಆವತ್ತು ಹೇಗೋ ಮಾಫಿ ಸಿಕ್ಕಿತು.
– ಮಹಾಂತೇಶ ದೊಡವಾಡ, ಬೆಳಗಾವಿ