ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಈ ಮೊದಲು ಸಾಮಾನ್ಯ ಬಸ್‌ಗಳಲ್ಲಿ 51 ರೂ. ಟಿಕೆಟ್ ಇರುತ್ತಿತ್ತು. ಈಗ ಅಷ್ಟೇ ಸಂಖ್ಯೆಯ ನಿಲುಗಡೆಗಳನ್ನು ನೀಡಿ, 106 ರೂ. ಸ್ವೀಕರಿಸಲಾಗುತ್ತಿದೆ. ಉಪ್ಪಿನಂಗಡಿಯಿಂದ ಕಡಬಕ್ಕೆ 33 ರೂ. ಇದ್ದ ಟಿಕೆಟ್ ದರ ವೇಗದೂತ ಎಂಬ ಕಾರಣಕ್ಕೆ 6 ರೂ. ಹೆಚ್ಚಳವಾಗಿದೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
Advertisement
ಕಡಬದಿಂದ ಶುಕ್ರವಾರ ಸುಬ್ರಹ್ಮಣ್ಯ- ಮಂಗಳೂರು ವೇಗದೂತ ಬಸ್ ನಲ್ಲಿ ಬಂದ ಕೆಲ ಪ್ರಯಾಣಿಕರು ಏಕಾಏಕಿ ಟಿಕೆಟ್ ದರ ಹೆಚ್ಚಿಸಿದ ಕುರಿತು ಸಂಚಾರ ನಿಯಂತ್ರಕರನ್ನು ತರಾಟೆಗೆ ತೆಗೆದುಕೊಂಡರು. ಸಾಮಾನ್ಯ ಬಸ್ ಗಳಂತೆ ಸಿಕ್ಕಸಿಕ್ಕಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು, ಇಳಿಸುವುದು ಮಾಡುತ್ತಿವೆ. ಅವಧಿಯೇನೂ ಕಡಿಮೆಯಾಗಿಲ್ಲ. ದರ ಮಾತ್ರ ಏಕೆ ಹೆಚ್ಚು ಎಂದು ಪ್ರಶ್ನಿಸಿದರು.
ಹೆಸರಿಗೆ ಮಾತ್ರ ವೇಗದೂತ!
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಪುತ್ತೂರು ತಾಲೂಕು ದಲಿತ್ ಸೇವಾ ಸಮಿತಿಯ ಅಧ್ಯಕ್ಷ ರಾಜು ಹೊಸ್ಮಠ, ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಬರುವ ಬಸ್‌ಗಳು ಹೆಸರಿಗೆ ಮಾತ್ರ ವೇಗದೂತ ಬಸ್‌ಗಳಾಗಿ ಬದಲಾಗಿವೆ. ಕಡಬದಿಂದ ಉಪ್ಪಿನಂಗಡಿಗೆ ಸಂಚರಿಸಲು ಸಾಮಾನ್ಯ ಬಸ್‌ಗಳು ಒಂದು ಗಂಟೆ ತೆಗೆದುಕೊಳ್ಳುತ್ತವೆ. ಈಗಲೂ ಅಷ್ಟೇ ಅವಧಿ, ನಿಲುಗಡೆಗಳಿವೆ. ದರ ಹೆಚ್ಚಳ ಮಾಡಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು. ಪ್ರಯಾಣದರ ಇಳಿಸಲು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ದಲಿತ್ ಸೇವಾ ಸಮಿತಿಯಿಂದ ಮನವಿ ಸಲ್ಲಿಸಲಾಗುವುದು ಎಂದರು.