ಬೆಂಗಳೂರು: ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಅಥವಾ ಲಕ್ಷ್ಮೀಹೆಬ್ಬಾಳ್ಕರ್ ಸ್ಪರ್ಧಿಸುವುದು ಸೂಕ್ತ ಅಥವಾ ಅವರ ಕುಟುಂಬದವರನ್ನು ಕಣಕ್ಕಿಳಿಸಿ ಎಂದು ಸ್ಥಳೀಯ ಮುಖಂಡರು ಆಗ್ರಹಿಸುತ್ತಿದ್ದಾರೆ.
ಸತೀಶ್ ಜಾರಕಿಹೊಳಿ ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗಿದೆ. ಲಕ್ಷ್ಮೀ ಹೆಹೆಬ್ಬಾಳ್ಕರ್‌ನ ಸಹೋದರ ಚನ್ನರಾಜು ಅಥವಾ ಪುತ್ರನನ್ನು ಕಣಕ್ಕಿಳಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಈ ಸಂಬಂಧ ನಡೆದ ಮುಖಂಡರ ಸಭೆಯಲ್ಲಿ ಸತೀಶ್ ಜಾರಕಿಹೊಳಿ, ಪ್ರಕಾಶ್ ಹುಕ್ಕೇರಿ, ಚನ್ನರಾಜು ಅವರ ಹೆಸರುಗಳು ಪ್ರಸ್ತಾವಗೊಂಡಿದೆ. ಇದೇ ಹೆಸರುಗಳನ್ನು ಶಿಫಾರಸು ಮಾಡಲು ತೀರ್ಮಾನಿಸಲಾಯಿತು ಎಂದು ತಿಳಿದು ಬಂದಿದೆ.
ಬಸವಕಲ್ಯಾಣ :
ಬಸವಕಲ್ಯಾಣಕ್ಕೆ ಮಾಜಿ ಶಾಸಕ ದಿ| ನಾರಾಯಣ ರಾವ್ ಅವರ ಪತ್ನಿ ಮಲ್ಲಮ್ಮ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ವಿಜಯ್ ಸಿಂಗ್, ಬುಳ್ಳಾ ಬಸವರಾಜು ಅವರ ಹೆಸರನ್ನು ಶಿಫಾರಸು ಮಾಡಲು ನಿರ್ಧರಿಸಲಾಗಿದೆ.
ಮಸ್ಕಿ :
ಮಸ್ಕಿ ಕ್ಷೇತ್ರಕ್ಕೆ ಬಿಜೆಪಿಯಿಂದ ಕಾಂಗ್ರೆಸ್ ಸೇರಿರುವ ಬಸನಗೌಡ ತುರವಿಹಾಳ್ ಅವರ ಹೆಸರನ್ನು ಮಾತ್ರ ಶಿಫಾರಸು ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.