ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಘೋಷಣೆಗೆ ಎಲ್ಲ ಪಕ್ಷಗಳೂ ಸಿದ್ಧತೆ ನಡೆಸುತ್ತಿರುವಂತೆಯೇ ಆಕಾಂಕ್ಷಿಗಳ ಎದೆಯಲ್ಲಿ ಢವ ಢವ ಆರಂಭವಾಗಿದೆ. ಕೆಲವು ಕಡೆಯಂತೂ ಟಿಕೆಟ್ ಆಕಾಂಕ್ಷಿಗಳು ಬಹಿರಂಗವಾಗಿಯೇ ತಮ್ಮ ಇಚ್ಛೆಯನ್ನು ಹೊರಹಾಕಿದ್ದಾರೆ.
ಕಾಂಗ್ರೆಸ್ನ ಮೊದಲ ಪಟ್ಟಿ ಗುರುವಾರ ಬಿಡುಗಡೆಯಾಗುತ್ತಿದ್ದರೆ, ಬಿಜೆಪಿಯಲ್ಲಿ ಟಿಕೆಟ್ಗಾಗಿ ಗುದ್ದಾಟ ಆರಂಭವಾಗುವ ಸುಳಿವು ಸಿಕ್ಕಿದೆ. ಇನ್ನು ಜೆಡಿಎಸ್ನಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ “ಹಾಸನ ಟಿಕೆಟ್ ತಿಕ್ಕಾಟ’ಕ್ಕೆ ಇನ್ನೂ ತೆರೆಬಿದ್ದಿಲ್ಲ.
ಶಿವಮೊಗ್ಗದಲ್ಲಿ ನಗರ ಕ್ಷೇತ್ರದ ಟಿಕೆಟ್ಗಾಗಿ ಕಾಯುತ್ತಿರುವುದಾಗಿ ಮಂಗಳವಾರ ಎಂಎಲ್ಸಿ ಆಯನೂರು ಮಂಜುನಾಥ್ ಅವರು ಬಹಿರಂಗವಾಗಿಯೇ ಘೋಷಿಸಿದ್ದಾರೆ. ಅಲ್ಲದೆ ಈಶ್ವರಪ್ಪ ಅವರಿಗೆ 35 ವರ್ಷದಿಂದ ಒಂದೇ ಕ್ಷೇತ್ರದಲ್ಲಿ ಅವಕಾಶ ನೀಡಲಾಗಿದೆ. ಈ ಬಾರಿ ನನಗೆ ಅವಕಾಶ ಸಿಗುತ್ತದೆ ಎಂಬ ವಿಶ್ವಾಸವಿದೆ. ಈಶ್ವರಪ್ಪ ಈಗ ಅವರ ಮಗನಿಗೆ ಟಿಕೆಟ್ ಕೇಳುತ್ತಿದ್ದಾರೆ. ಆದರೆ ಆತ ಇನ್ನೂ ಚಿಕ್ಕವನು. ಮಧ್ಯದಲ್ಲಿ ನಾನೊಬ್ಬ ಇದ್ದೇನೆ ಎಂದು ಹೇಳಿದ್ದೇನೆ ಎಂದಿದ್ದಾರೆ. ಈ ಬಾರಿ ಶಿವಮೊಗ್ಗ ನಗರ ಕ್ಷೇತ್ರಕ್ಕೆ ನನಗೆ ಟಿಕೆಟ್ ಕೊಡಿ ಎಂದು ಕೇಳಿದ್ದೇನೆ. ನಾನು ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಟಿಕೆಟ್ ನೀಡಿ ಎಂದು ಕೇಳಿಲ್ಲ. ಈಶ್ವರಪ್ಪ ಮತ್ತು ಬಿಜೆಪಿ ನಡುವೆ ನಾನು ಉರಿಗೌಡನೂ ಅಲ್ಲ, ನಂಜೇಗೌಡನೂ ಅಲ್ಲ. ನಾನು ಆಯನೂರು ಮಂಜುನಾಥ್. ಈ ಬಾರಿ ಜನಪ್ರತಿನಿಧಿ ಯಾಗಬೇಕು ಎಂಬ ಉತ್ಕಟ ಆಸೆಯಿದೆ ಎಂದೂ ಹೇಳಿದ್ದಾರೆ.
ಮತ್ತೊಂದೆಡೆ ಅಥಣಿ ಕ್ಷೇತ್ರದಿಂದ ಕಣಕ್ಕಿಳಿಯಲು ಮಾಜಿ ಡಿಸಿಎಂ, ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮುಂದಾಗಿದ್ದಾರೆ. ಕಳೆದ ಬಾರಿ ವರಿಷ್ಠರ ಸೂಚನೆಯಂತೆ ಇನ್ನೊಬ್ಬರಿಗೆ ಟಿಕೆಟ್ ಬಿಟ್ಟು ಕೊಟ್ಟಿದ್ದೆ. ಈ ಬಾರಿ ಕ್ಷೇತ್ರದ ಜನರು ಸ್ಪರ್ಧೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ 27ರೊಳಗೆ ಸಭೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸುತ್ತೇನೆ. ಇನ್ನೊಬ್ಬರ ಸ್ಪರ್ಧೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
Related Articles
ಸೋಮಣ್ಣಗೆ
ಗೋ ಬ್ಯಾಕ್ ಎಚ್ಚರಿಕೆ
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಚುನಾವಣ ಉಸ್ತುವಾರಿ ನೀಡಬಾರದು ಹಾಗೂ ಚಾಮರಾಜನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು. ನೀಡಿದರೆ ಸೋಮಣ್ಣ ಗೋ ಬ್ಯಾಕ್ ಚಳವಳಿ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್ ಎಚ್ಚರಿಸಿದ್ದಾರೆ. ಇದರ ನಡು ವೆಯೇ, ತಾವು ಸಿದ್ದರಾಮಯ್ಯ ವಿರುದ್ಧ ವರು ಣಾದಲ್ಲಿ ಸ್ಪರ್ಧೆ ಮಾಡುವುದಿಲ್ಲ, ಚಾಮರಾಜ ನಗರಕ್ಕೆ ಹೋಗಿ ಕೆಲಸ ಮಾಡುವೆ ಎಂದು ಸಚಿವ ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.
ದೊಡ್ಡಗೌಡರ ಜತೆ ಮಾತುಕತೆ
ಹಾಸನ ಅಖಾಡದಲ್ಲಿ ಆರಂಭವಾಗಿರುವ ಜೆಡಿಎಸ್ ಹಗ್ಗಜಗ್ಗಾಟಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕ್ಷೇತ್ರದ ಟಿಕೆಟ್ ಭವಾನಿ ರೇವಣ್ಣ ಅವರಿಗೋ ಕಾರ್ಯಕರ್ತ ಸ್ವರೂಪ್ ಅವರಿಗೋ ಎಂಬ ಪ್ರಶ್ನೆಗೆ ಉತ್ತರ ಸಿಗದೇ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ. ಇದರ ಮಧ್ಯೆ ಮಂಗಳವಾರ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, “ಹಾಸನ ಟಿಕೆಟ್ ಗೊಂದಲಕ್ಕೆ ನಾನೇ ತೆರೆ ಎಳೆಯುತ್ತೇನೆ’ ಎಂದಿದ್ದು, ದೇವೇಗೌಡರ ನಿವಾಸಕ್ಕೆ ಆಗಮಿಸಿ ಚರ್ಚೆಯನ್ನೂ ನಡೆಸಿದ್ದಾರೆ. ಮುಂದಿನ ವಾರವೇ ಹಾಸನ ಅಭ್ಯರ್ಥಿಯ ಹೆಸರು ಘೋಷಣೆಯಾಗಲಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ.