Advertisement

ತುಮಕೂರು ಕ್ಷೇತ್ರಕ್ಕೆ ಜೆಡಿಎಸ್‌ ಪಟ್ಟು

12:57 AM Feb 28, 2019 | |

ತುಮಕೂರು: ಲೋಕಸಭಾ ಚುನಾವಣೆ  ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಚುನಾವಣಾ ಕಾವು ಏರತೊಡಗಿದೆ. ಇದರ ನಡುವೆಯೇ, ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ತಿಕ್ಕಾಟ ಶುರುವಾಗಿದೆ.

Advertisement

ಜಿಲ್ಲೆ 11 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದರೂ, ತುಮಕೂರು ಲೋಕಸಭಾ ಕ್ಷೇತ್ರಕ್ಕೆ ತುಮಕೂರು, ತುಮಕೂರು ಗ್ರಾಮಾಂತರ, , ತಿಪಟೂರು, ತುರುವೇಕೆರೆ, ಕೊರಟಗೆರೆ, ಮಧುಗಿರಿ, ಚಿಕ್ಕನಾಯಕನಹಳ್ಳಿ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಉಳಿದ ಪಾವಗಡ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳು ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೂ, ಕುಣಿಗಲ್‌ ವಿಧಾನಸಭಾ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೂ ಸೇರಿವೆ.

ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದ ತುಮಕೂರನ್ನು 1991ರಿಂದ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಆದರೆ, 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಸಿ.ಎನ್‌.ಭಾಸ್ಕರಪ್ಪ ಮೂಲಕ ಜೆಡಿಎಸ್‌ಗೆ ನೆಲೆ ಕಲ್ಪಿಸಿಕೊಟ್ಟರು. ನಂತರ, ಜೆಡಿಎಸ್‌ ಹಂತ, ಹಂತವಾಗಿ ಜಿಲ್ಲೆಯಲ್ಲಿ ಬೇರೂರುತ್ತಾ, 11 ವಿಧಾನಸಭಾ ಕ್ಷೇತ್ರಗಳ ಪೈಕಿ 9 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿತ್ತು.

2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಸ್‌.ಬಸವರಾಜ್‌ 3,31,064 ಮತ ಪಡೆದು ಗೆಲುವು ಸಾಧಿಸಿದ್ದರು. ಜೆಡಿಎಸ್‌ನ ಎಸ್‌.ಪಿ.ಮುದ್ದಹನುಮೇಗೌಡ 3,09,619 ಮತ ಪಡೆದು ಸೋಲು ಕಂಡರು. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್‌.ಪಿ. ಮುದ್ದಹನುಮೇಗೌಡ 4,29,568 ಮತ ಪಡೆದು ಗೆಲುವು ಸಾಧಿಸಿದರು.

ಬಿಜೆಪಿಯ ಜಿ.ಎಸ್‌.ಬಸವರಾಜ್‌ 3,55,827 ಮತ ಪಡೆದು ಪರಾಭವ ಹೊಂದಿದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎ.ಕೃಷ್ಣಪ್ಪ 2,58,683 ಮತ ಪಡೆದು ಸೋಲು ಕಂಡಿದ್ದರು. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರ ವ್ಯಾಪ್ತಿಯ ತುಮಕೂರು ಗ್ರಾಮಾಂತರ, ಗುಬ್ಬಿ, ಮಧುಗಿರಿ, ಶಿರಾ ಕ್ಷೇತ್ರದಲ್ಲಿ ಜೆಡಿಎಸ್‌ ಗೆದ್ದರೆ, ಕೊರಟಗೆರೆ, ಪಾವಗಡ, ಕುಣಿಗಲ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿತು. ತುಮಕೂರು ನಗರ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ತಿಪಟೂರು ವಿಧಾನಸಭಾ ಕ್ಷೇತ್ರದಲ್ಲೀಗ ಬಿಜೆಪಿ ಶಾಸಕರಿದ್ದಾರೆ.

Advertisement

ಜೆಡಿಎಸ್‌ ಹೆಚ್ಚು ಬಲಿಷ್ಠ:ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಟಿಕೆಟ್‌ ನೀಡಿದರೆ ಗೆಲುವು ಸುಲಭ. ಜಿಲ್ಲೆಯಲ್ಲಿ ಕಾಂಗ್ರೆಸ್‌ಗಿಂತ ಜೆಡಿಎಸ್‌ ಹೆಚ್ಚು ಬಲಿಷ್ಠ. ಎರಡೂ ಪಕ್ಷಗಳು ಒಂದಾದರೆ ಜೆಡಿಎಸ್‌ ನಿರಾಯಾಸವಾಗಿ ಗೆಲುವು ಸಾಧಿಸಬಹುದು. ಮೇಲಾಗಿ, ಜಿಲ್ಲೆಯಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ ಎನ್ನುವ ವಾದ ಜೆಡಿಎಸ್‌ ನದು. ಜೊತೆಗೆ, ಟಿಕೆಟ್‌ಗಾಗಿ ಜೆಡಿಎಸ್‌ ಬಿಗಿ ಪಟ್ಟು ಹಿಡಿದಿದೆ. ಹಲವು ಮುಖಂಡರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಆದರೆ, ಕಾಂಗ್ರೆಸ್‌ ಕಳೆದ ಚುನಾವಣೆಯಲ್ಲಿ ಅಧಿಕ ಮತ ಪಡೆದಿದ್ದು, ಎಸ್‌ .ಪಿ.ಮುದ್ದಹನುಮೇಗೌಡರು ಗೆಲುವು ಸಾಧಿಸಿ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷವೇ ಸ್ಪರ್ಧಿಸಿದರೆ. ಸುಲಭವಾಗಿ ಗೆಲುವು ಸಾಧಿಸಬಹುದು ಎಂಬುದು ಕಾಂಗ್ರೆಸ್‌ ಮುಖಂಡರ ಅಭಿಪ್ರಾಯ. ಜೊತೆಗೆ, ಕಾಂಗ್ರೆಸ್‌ ಸಂಸದ ಮುದ್ದಹನುಮೇಗೌಡರು, “ನನಗೆ ಪಕ್ಷದ ಟಿಕೆಟ್‌ ದೊರೆಯುತ್ತದೆ’ ಎನ್ನುವ ಆತ್ಮವಿಶ್ವಾಸದಿಂದ ಕ್ಷೇತ್ರಾದ್ಯಂತ ಪ್ರವಾಸ ಕೈಗೊಂಡು ವಿವಿಧ ಅಭಿವೃದ್ಧಿ  ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ. ಒಂದು ವೇಳೆ, ಜೆಡಿಎಸ್‌ಗೆ ಟಿಕೆಟ್‌ ನೀಡಿದರೆ, “ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ’ ಎಂದು ಮಾಜಿ ಶಾಸಕ, ರಾಜ್ಯ ಅಪೆಕ್ಸ್‌ ಬ್ಯಾಂಕ್‌ನ ಅಧ್ಯಕ್ಷ ಕೆ.ಎನ್‌.ರಾಜಣ್ಣ ಈಗಾಗಲೇ ಘೋಷಣೆ ಮಾಡಿದ್ದಾರೆ.

ಕ್ಷೇತ್ರದಲ್ಲಿ ಈಗ ನಮ್ಮ ಪಕ್ಷದ ಸಂಸದರಾದ ಎಸ್‌.ಪಿ.ಮುದ್ದಹನುಮೇಗೌಡರು ಇದ್ದಾರೆ. ಉತ್ತಮ ಕೆಲಸ ಮಾಡಿದ್ದು, ಜನರ ಮೆಚ್ಚುಗೆ ಇದೆ. ಆದ್ದರಿಂದ ತುಮಕೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ಗೆ ನೀಡಬೇಕು.
● ಆರ್‌.ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ. ಕಳೆದ ವಿಧಾನಭಾ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ನಾಲ್ಕು ಶಾಸಕರು ಆಯ್ಕೆಯಾಗಿದ್ದಾರೆ. ಈ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಮೂವರು ಶಾಸಕರಿದ್ದಾರೆ. ಈ ಹಿಂದೆ ಸಿ. ಎನ್‌.ಭಾಸ್ಕರಪ್ಪ ಅವರು ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದರು. ಈಗ ನಮ್ಮ ಪಕ್ಷಕ್ಕೆ ಟಿಕೆಟ್‌ ನೀಡಿ ಎಂದು ವರಿಷ್ಠರಲ್ಲಿ ಮನವಿ ಮಾಡಿದ್ದೇವೆ.
● ಎಚ್‌.ನಿಂಗಪ್ಪ, ಮಾಜಿ ಶಾಸಕ ಹಾಗೂ ಜೆಡಿಎಸ್‌ ಉಸ್ತುವಾರಿ

Advertisement

Udayavani is now on Telegram. Click here to join our channel and stay updated with the latest news.

Next