ಮೈಸೂರು: ರಾಜ್ಯದಲ್ಲಿನ ಉಳಿದ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಸೋಮವಾರ ಅಥವಾ ಮಂಗಳವಾರ ಟಿಕೆಟ್ ಘೋಷಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಯಾವುದೇ ಲೋಕಸಭಾ ಕ್ಷೇತ್ರ ನಮಗೆ ಕಗ್ಗಂಟಾಗಿಲ್ಲ. ಒಂದೇ ಬಾರಿಗೆ ಅಭ್ಯರ್ಥಿಗಳನ್ನು ತೀರ್ಮಾನ ಮಾಡಬಾರದು ಎನ್ನುವ ಕಾರಣದಿಂದ ಹಂತ ಹಂತವಾಗಿ ಟಿಕೆಟ್ ಘೋಷಣೆ ಮಾಡಲಾಗುತ್ತದೆ ಎಂದರು.
ಮೈಸೂರು-ಕೊಡಗು ಮತ್ತು ಚಾಮರಾಜನಗರ ಕ್ಷೇತ್ರಗಳನ್ನು ಮಾತ್ರವಲ್ಲ, ರಾಜ್ಯದ 28 ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದೇವೆ. ಜತೆಗೆ ಈ 2 ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಸ್ಪೀಕರಿಸಿದ್ದೇವೆ. ಎಲ್ಲ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸುತ್ತೇವೆ. ಈ ಬಾರಿ ನಾವು 20 ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ. ಆದರೆ, 28 ಕ್ಷೇತ್ರ ಗೆಲ್ಲುತ್ತೇವೆ ಎಂದು ಬಿಜೆಪಿಯವರ ರೀತಿ ಸುಳ್ಳು ಹೇಳುವುದಿಲ್ಲ ಎಂದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದ ನಮಗೆ ಅನುಕೂಲವಾಗಿದೆ. ಕಳೆದ ಬಾರಿ ನಾವು ಜೆಡಿಎಸ್ ಜತೆ ಹೋಗಿದ್ದು ನಮಗೆ ಅನುಕೂಲ ಆಗಲಿಲ್ಲ. ಈ ಬಾರಿ ಜೆಡಿಎಸ್‌ನಿಂದ ಬಿಜೆಪಿಗೆ ನಷ್ಟವಾಗಲಿದೆ ಎಂದರು.
ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿಲ್ಲ. ಆಯಾಯ ಕ್ಷೇತ್ರದ ಜನ ಹೇಳಿದ್ದವರಿಗೆ ಟಿಕೆಟ್ ನೀಡಿದ್ದೇವೆ. ಇದರಲ್ಲಿ ಕುಟುಂಬ ರಾಜಕಾರಣದ ಪ್ರಶ್ನೆಯೇ ಬರಲ್ಲ. ಜನರ ಅಭಿಪ್ರಾಯಕ್ಕೆ ಮಾತ್ರ ಮನ್ನಣೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.