ಮುಂಡಗೋಡ: ಟಿಬೇಟಿಯನ್ನರ ಹೊಸ ವರ್ಷದ ಹಬ್ಬವಾದ ಲೋಸಾರ ಹಬ್ಬದ ಕೊನೆಯ ದಿನವಾದ ಶನಿವಾರ ಧಾರ್ಮಿಕ ವಿಧಿವಿಧಾನಗಳಂತೆ ಭೂತ ದಹನ ಮಾಡುವ ಕಾರ್ಯಕ್ರಮ ನಡೆಯಿತು.
ಲೋಸಾರ್ ಹಬ್ಬವನ್ನು ಟಿಬೇಟಿಯನ್ನರು ಅದ್ಧೂರಿಯಿಂದ ನಡೆಸಿಕೊಂಡು ಬರುವ ಪದ್ಧತಿ ಇತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಹಬ್ಬವನ್ನು ಸರಳವಾಗಿ ಮನೆಯಲ್ಲಿ, ಬೌದ್ಧಮಂದಿರದಲ್ಲಿ ಆಚರಿಸಿ ಭೂತ ದಹನ ಮಾಡುತ್ತಿರಲಿಲ್ಲ. ಈ ವರ್ಷ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂ.1ರ ಬೌದ್ಧ ಮಂದಿರದಲ್ಲಿ ಶನಿವಾರ ಟಿಬೇಟಿಯನ್ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳಂತೆ ಪೂಜೆ ಜರುಗಿತು. ನಂತರ ಬೌದ್ಧ ಮಂದಿರದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹಿರಿಯ ಬೌದ್ಧ ಸನ್ಯಾಸಿಗಳ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೌದ್ಧ ಮಂದಿರದ ಆವರಣದಿಂದ ವಿಶೇಷ ಮೂರ್ತಿಯನ್ನು ತಯಾರು ಮಾಡಿ ಬೌದ್ಧ ಸನ್ಯಾಸಿಗಳು ಸಂಪ್ರದಾಯದ ಉಡುಗೆ ತೊಟ್ಟು ವಿವಿಧ ವಾದ್ಯಗಳನ್ನು ನುಡಿಸಿ ಮೆರವಣಿಗೆ ಮೂಲಕ ಭೂತ ದಹನ ಮಡುವ ಸ್ಥಳಕ್ಕೆ ತರಲಾಯಿತು. ಗುಡಿಸಲಿನ ಆಕಾರದ ಸ್ಥಳದಲ್ಲಿ ಮೂರ್ತಿ ಇಟ್ಟು ಸುಡುವ ಪೂರ್ವದಲ್ಲಿ ಟಿಬೇಟಿಯನ್ನರು ಹಬ್ಬಕ್ಕೆ ಮಾಡಿರುವ ವಿವಿಧ ಧವಸ ಧಾನ್ಯಗಳಿಂದ ತಯಾರಿಸಿದ ಪದಾರ್ಥವನ್ನು ಹಾಗೂ ಬಿಳಿ ವಸ್ತ್ರವನ್ನು ಹಾಕಿದರು. ತದ ನಂತರ ಮೂರ್ತಿಯನ್ನು ಇಟ್ಟು ಬೌದ್ಧ ಸನ್ಯಾಸಿ ಅಗ್ನಿ ಸ್ಪರ್ಶ ಮಾಡಿದರು. ಈ ಕಾರ್ಯಕ್ರಮದಲ್ಲಿ ಅಕ್ಕ ಪಕ್ಕದ ಸಹಸ್ರಾರು ಟಿಬೇಟಿಯನ್ನರು ಮತ್ತು ಬೌದ್ಧ ಸನ್ಯಾಸಿಗಳಿದ್ದರು. ಇದಲ್ಲದೆ ಕ್ಯಾಂಪ್ ನಂ2 ರಲ್ಲಿ ಭೂತ ದಹನ ಮಾಡುವ ಕಾರ್ಯಕ್ರಮವನ್ನು ಧಾರ್ಮಿಕ ವಿಧಿವಿಧಾನಗಳಂತೆ ನಡೆಸಲಾಯಿತು. ಪೊಲೀಸರು ಬಂದೋಬಸ್ತ್ ಮಾಡಿದ್ದರು.