Advertisement

ಟಿಬೆಟ್ ಮಹಿಳೆಯರ ಆಕ್ರೋಶ

10:27 AM May 03, 2019 | pallavi |

ಬೆಂಗಳೂರು: ‘ಟಿಬೆಟ್‌ನ ಗೆಧೆಮ್‌ ಚೊಯ್ಕಿ ನ್ಯಾಮಾ ಅವರನ್ನು ಚೀನಾ ಸರ್ಕಾರ ಬಂಧಿಸಿ 24 ವರ್ಷಗಳೇ ಕಳೆದಿವೆ. ಆದರೆ, ಇಂದಿಗೂ ಚೀನಾ ಅವರ ಬಗ್ಗೆ ಯಾವುದೇ ದಾಖಲೆ ಬಿಡುಗಡೆ ಮಾಡಿಲ್ಲ, ಇದು ಮಾನವಹಕ್ಕುಗಳ ಸ್ಪಷ್ಟ ಉಲ್ಲಂಘನೆ’ ಎಂದು ಸೆಂಟ್ರಲ್ ಟಿಬೆಟ್ ಅಡ್ಮಿನಿಸ್ಟ್ರೇಶನ್‌ ಸಂಸ್ಥೆಯ ದಕ್ಷಿಣ ಭಾರತದ ಅಧ್ಯಕ್ಷ ಚಂಬ್ರೆಲ್ಗುಪ್ತೇನ್‌ ಹೇಳಿದರು.

Advertisement

ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಸೆಂಟ್ರಲ್ ಎಕ್ಸಿಕ್ಯೂಟಿವ್‌ ಆಫ್ ಟಿಬೆಟ್ ವುಮೆನ್ಸ್‌ ಅಸೋಸಿಯೇಷನ್‌ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಟಿಬೆಟಿನ ಧರ್ಮಗುರು ದಲೈ ಲಾಮಾ ಅವರು ಟಿಬೆಟ್‌ನ ಧಾರ್ಮಿಕ ಗುರುವಾದ 11ನೇ ಪಂಚೆನ್‌ ಲಾಮಾ ಸ್ಥಾನಕ್ಕೆ ಗೆಧೆಮ್‌ ಚೊಯ್ಕಿ ಅವರನ್ನು ಆಯ್ಕೆ ಮಾಡಿದ್ದರು. ಈ ಆಯ್ಕೆ ಪ್ರಕ್ರಿಯೆ ನಂತರ ಚೀನಾ ಸರ್ಕಾರ ಗೆಧೆಮ್‌ ಮತ್ತು ಅವರ ಕುಟುಂಬದವರನ್ನು ಬಂಧಿಸಿದೆ ಎಂದು ತಿಳಿಸಿದರು.

1995ರಲ್ಲಿ 6 ವರ್ಷದ ಗೆಧಮ್‌ ಅವರನ್ನು ಬಂಧಿಸಲಾಗಿದ್ದು, ಅವರು ಹೇಗಿದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಭಾರತ ಸೇರಿದಂತೆ ಉಳಿದ ದೇಶಗಳು ನಮ್ಮ ಬೆಂಬಲಕ್ಕೆ ನಿಲ್ಲಬೇಕು ಎಂದು ಒತ್ತಾಯಿಸಿದರು.

ಮಾನವ ಹಕ್ಕುಗಳ ಹೋರಾಟಗಾರ ಪಿ.ಜಿ ಕಾಮತ್‌, ಟಿಬೆಟಿಯನ್‌ರ ಹೋರಾಟ ನಿರಂತರವಾಗಿರಲಿ, ಚೀನಾದ ಸಾಮಾಜಿಕ ಜಾಲತಾಣಗಳಲ್ಲೂ ನಿಮ್ಮ ಬೇಡಿಕೆಯ ಬಗ್ಗೆ ಚರ್ಚೆ ಮಾಡಿ ಮತ್ತು ಅಲ್ಲಿನ ಟಿಬೆಟಿಯನ್‌ರೊಂದಿಗೆ ನಿರಂತರ ಸಂಪರ್ಕದಲ್ಲಿ ಸಾಧಿಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸೆಂಟ್ರಲ್ ಎಕ್ಸಿಕ್ಯೂಟಿವ್‌ ಆಫ್ ಟಿಬೆಟ್ ವುಮೆನ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷೆ ಟೆನ್‌ಜಿನ್‌ ದೊಲಾಮ ಮತ್ತಿತರರು ಉಪಸ್ಥಿತರಿದ್ದರು. ಸಮಾವೇಶದಲ್ಲಿ ಗೆಧೆಮ್‌ ಚೊಯ್ಕಿ ನ್ಯಾಮ್‌ ಅವರನ್ನು ಬಿಡುಗಡೆ ಮಾಡುವಾಂತೆ ಒತ್ತಾಯಿಸಿ ನೂರಾರು ಟಿಬೆಟಿಯನ್‌ನರು ಸಾಂಕೇತಿಕ ಪ್ರತಿಭಟನೆ ಮತ್ತು ಜಾಥಾ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next