Advertisement

ಅಯೋಡಿನ್ ಕೊರತೆಯೂ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದೇ ? ಇಲ್ಲಿವೆ ಪರಿಹಾರ…

05:29 PM Aug 23, 2022 | ಶ್ವೇತಾ.ಎಂ |

ಆಧುನಿಕ ಜೀವನ ಶೈಲಿಯ ಸಾಮಾನ್ಯ ಸಮಸ್ಯೆಗಳಲ್ಲಿ ದೇಹದಲ್ಲಿ ಅಯೋಡಿನ್ ಕೊರತೆ ಕೂಡ ಒಂದು. ಅಯೋಡಿನ್ ಕೊರತೆಯು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

Advertisement

ಅಯೋಡಿನ್  ಥೈರಾಯಿಡ್ ಗ್ರಂಥಿಯಲ್ಲಿ ಸಂಗ್ರಹವಾಗುತ್ತದೆ. ಥೈರಾಯಿಡ್ ಹಾರ್ಮೋನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ . ದೇಹದ ಎಲ್ಲ ಜೀವಕೋಶಗಳ, ನರಗಳ ಮತ್ತು ಬೌದ್ಧಿಕ ಬೆಳವಣಿಗೆಗೆ ಇದು ಅತ್ಯಗತ್ಯ . ಇದರ ಕೊರತೆಯಾದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಖಚಿತ.

ಭಾರತದಲ್ಲಿ ಅದರಲ್ಲೂ ಉತ್ತರ ಮತ್ತು ಈಶಾನ್ಯ ಭಾರತದ ಮಣ್ಣಿನಲ್ಲಿ ಅಯೋಡಿನ್ ಕಡಿಮೆ. ಪರಿಣಾಮ ಅಲ್ಲಿನ ತರಕಾರಿ- ಹಣ್ಣುಗಳಲ್ಲೂ ಅಯೋಡಿನ್ ಕಡಿಮೆ. ಹೀಗಾಗಿ ಭಾರತದಲ್ಲಿ 167 ದಶಲಕ್ಷ ಜನ ಅಯೋಡಿನ್ ಕೊರತೆಯಿಂದ ಬಳಲುತ್ತಿದ್ದಾರೆ. 54 ದಶಲಕ್ಷ ಜನರಿಗೆ ಗಾಯಿಟರ್ ತೊಂದರೆ ಮತ್ತು 20 ಲಕ್ಷ ಜನರಿಗೆ ಕ್ರಿಟಿನಿಸಮ್ ಎಂಬ ಕಾಯಿಲೆ ಇದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪ್ರಪಂಚದಾದ್ಯಂತ 54 ದೇಶಗಳಲ್ಲಿ ಅಯೋಡಿನ್ ಸಮಸ್ಯೆ ಇದೆ.

ಲಕ್ಷಣಗಳೇನು ?:

ಅಯೋಡಿನ್ ಕೊರತೆಯಿಂದಾಗುವ ಪರಿಣಾಮಗಳು ಎಲ್ಲಾ ಸಮಯದಲ್ಲಿ ಕಣ್ಣಿಗೆ ಕಾಣುವಂತಿರುವುದಿಲ್ಲ. ಆ ತೊಂದರೆಗಳನ್ನು ಸರಿಪಡಿಸುವುದು ಸಹ ಕಷ್ಟ. ಮುಖ್ಯವಾಗಿ ಗರ್ಭಾವಸ್ಥೆಯಲ್ಲಿರುವ ಮತ್ತು ಬೆಳೆಯುವ ಮಕ್ಕಳಿಗೆ ಅಯೋಡಿನ್ ಕೊರತೆಯಿಂದ ಹೆಚ್ಚು ಹಾನಿ ಆಗುತ್ತದೆ.

Advertisement

ತೀವ್ರವಾದ ಅಯೋಡಿನ್ ಕೊರತೆಯಿದ್ದರೆ ಗರ್ಭಪಾತವಾಗುವ ಅಥವಾ ಮಗು ಹೊಟ್ಟೆಯಲ್ಲೇ ಮರಣ ಹೊಂದುವ ಸಾಧ್ಯತೆ ಇರುತ್ತದೆ. ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ , ಐಕ್ಯೂ ಕಡಿಮೆಯಾಗುತ್ತದೆ. ದೃಷ್ಟಿ, ಶ್ರವಣ ಮತ್ತು ವಾಕ್ ದೋಷಗಳಾಗುವ ಸಾಧ್ಯತೆ ಇರುತ್ತದೆ. ಗಾಯಿಟರ್ ಅಂದರೆ ಥೈರಾಯಿಡ್ ಗ್ರಂಥಿಯ ಗಾತ್ರ ಹೆಚ್ಚಾಗುತ್ತದೆ. ಈ ತೊಂದರೆಗಳನ್ನು ಆಹಾರದಲ್ಲಿ ಸರಿ ಪ್ರಮಾಣದಲ್ಲಿ ಅಯೋಡಿನ್ ಸೇವಿಸುವುದರಿಂದ ತಡೆಗಟ್ಟಬಹುದು.

ಅಯೋಡಿನ್ ಮೂಲಗಳು : ಫೋರ್ಟಿಫೈಡ್ ಉಪ್ಪು , ಸೀಗೆ, ಕಡಲಮೀನು , ಕೆಲವು ಸಸ್ಯಗಳು , ಹಾಲಿನ ಉತ್ಪನ್ನಗಳು, ಮೊಟ್ಟೆ , ಗೆಣಸು , ಬಾಳೆಹಣ್ಣು , ಈರುಳ್ಳಿ ಮುಂತಾದವು.

ಯಾವ ಆಹಾರವನ್ನು ಕಡಿಮೆ ಮಾಡಬೇಕು?:

ಸೋಯ, ಎಲೆಕೋಸು, ಹೂಕೋಸು, ಬ್ರಕೋಲಿ, ನವಿಲುಕೋಸು, ಈ ತರಕಾರಿಗಳಲ್ಲಿ ತಯೋಸೈನೇಟ್ ಎಂಬ ಅಂಶ ಇರುತ್ತದೆ. ಅದು ಥೈರಾಯಿಡ್ ಗ್ರಂಥಿ ಅಯೋಡಿನನ್ನು ಗ್ರಹಿಸುವ ಶಕ್ತಿಯನ್ನು ಕಡಿಮೆ ಮಾಡುತ್ತದೆ . ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ಉಪ್ಪನ್ನು ಕಡಿಮೆ ಸೇವಿಸುವುದರಿಂದ ಅಯೋಡಿನ್ ಕೊರತೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಯೋಡಿನ್ ಸಮೃದ್ಧ ಆಹಾರ ಸೇವಿಸಬೇಕು.

ಗರ್ಭಿಣಿಯರಿಗೆ ಅಯೋಡಿನ್ ಅವಶ್ಯಕತೆ ಹೆಚ್ಚಿರುತ್ತದೆ. ಅದಕ್ಕೆ 3 ಕಾರಣಗಳಿವೆ .

1 . ಥೈರಾಯಿಡ್ ಹಾರ್ಮೋನ್ ಉತ್ಪಾದನೆ ಹೆಚ್ಚಳ.

  1. ಮೂತ್ರದ ಮುಖಾಂತರ ಅಯೋಡಿನ್ ಹೊರಗೆ ಹೋಗುವ ಸಾಧ್ಯತೆ

3 . ಗರ್ಭಿಣಿಯರಲ್ಲಿ ಕಬ್ಬಿಣಾಂಶ ಕೊರತೆ , ಗರ್ಭ ಧರಿಸಲು ಇಚ್ಚೆಪಡುವವರಲ್ಲಿ ಮತ್ತು ಗರ್ಭಿಣಿಯರಲ್ಲಿ ಅಯೋಡಿನ್ ಕೊರತೆ ನೀಗಿಸುವುದರಿಂದ ಆರೋಗ್ಯವಂತ ಮಗುವನ್ನು ಪಡೆಯಲು ಯಶಸ್ವಿಯಾಗಬಹುದು

ಅಯೋಡಿನ್ ಉಪ್ಪು ಭಾರತದಲ್ಲಿ ಶೇಕಡ 82.1 ಜನರು ಮಾತ್ರ ಉಪಯೋಗಿಸುತ್ತಿದ್ದಾರೆ. ಇದರ ಅರಿವು ಗ್ರಾಮೀಣ ಪ್ರದೇಶದಲ್ಲಿ ಕಡಿಮೆಯಿದೆ.

ಹೆಚ್ಚು ಸೇವನೆಯೂ ಅಪಾಯಕಾರಿ!

ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ . ಹಾಗೆಯೇ ಅತಿಯಾದ ಅಯೋಡಿನ್ ಸೇವನೆ ಸಹ ದೇಹದ ಮೇಲೆ ಹಲವು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ . ಆದ್ದರಿಂದ ವಯಸ್ಕರು 600 ರಿಂದ 1100 ಎಂಸಿಜಿ ಮೇಲೆ ಮತ್ತು ಮಕ್ಕಳು 200 ರಿಂದ 450 ಎಂಸಿಜಿ ಮೇಲೆ ಅಯೋಡಿನ್ ಸೇವಿಸುವುದು ಉತ್ತಮವಲ್ಲ.

  • ಶ್ವೇತಾ.ಎಂ
Advertisement

Udayavani is now on Telegram. Click here to join our channel and stay updated with the latest news.

Next