ಮುಂಬೈ: ರೂಪಾಯಿ ಮೌಲ್ಯ ಕುಸಿತ ಹಾಗೂ ಕಚ್ಚಾ ತೈಲ ಬೆಲೆ ಏರಿಕೆ ಹೂಡಿಕೆದಾರರಲ್ಲಿ ಭೀತಿ ಮೂಡಿಸಿದ್ದರಿಂದ ಗುರುವಾರ ಮುಂಬೈ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ ನಡೆದಿದೆ. ಸೆನ್ಸೆಕ್ಸ್ 806 ಅಂಕ ಕುಸಿದು 35,200 ಕ್ಕೂ ಕೆಳಕ್ಕಿಳಿಯಿತು. ಎನ್‌ಎಸ್‌ಇ ನಿಫ್ಟಿ ಕೂಡ 259 ಅಂಕ ಕುಸಿದು, 10,600 ಕ್ಕಿಂತ ಕೆಳಗೆ ಇಳಿದಿದೆ. ಇನ್ನೊಂದೆಡೆ, ರೂಪಾಯಿ ದಿನದ ಮಧ್ಯದಲ್ಲಿ ಡಾಲರ್ ಎದುರು 73.81ಕ್ಕೆ ಕುಸಿದಿತ್ತು. ನಂತರ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡು, ದಿನದಂತ್ಯಕ್ಕೆ 73.77 ಆಯಿತು.
ಕಚ್ಚಾತೈಲವಂತೂ ಬ್ಯಾರೆಲ್‌ಗೆ 86 ಡಾಲರ್‌ಗೆ ತಲುಪಿದೆ. ಇತರ ಏಷ್ಯಾ ಮಾರುಕಟ್ಟೆಯ ಕಥೆಯೂ ಇದೇ ಆಗಿದ್ದು, ದೇಶದ ಹೂಡಿಕೆದಾರರಲ್ಲಿ ಭೀತಿ ಮೂಡಿಸಿದೆ. ಇವೆಲ್ಲವುಗಳ ಮಧ್ಯೆಯೇ ಈಗಾಗಲೇ ಆರಂಭವಾಗಿರುವ ಆರ್‌ಬಿಐ ದ್ವೈಮಾಸಿಕ ವಿತ್ತ ನೀತಿ ಸಭೆಯ ಫಲಿತಾಂಶದ ನಿರೀಕ್ಷೆಯೂ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಬುಧವಾರ ಆರಂಭವಾಗಿರುವ ಸಭೆ ಶುಕ್ರವಾರ ಮುಕ್ತಾಯವಾಗಲಿದ್ದು, ರೆಪೋ ದರ ಏರಿಕೆ ನಿರೀಕ್ಷೆ ಮಾಡಲಾಗಿದೆ.
ಆರೋಗ್ಯ ಸೇವೆ, ಐಟಿ, ತೈಲ ಮತ್ತು ನೈಸರ್ಗಿಕ ಅನಿಲ, ಬ್ಯಾಂಕಿಂಗ್ ಹಾಗೂ ವಾಹನೋದ್ಯಮದ ಷೇರುಗಳು ಭಾರಿ ಕುಸಿತ ಕಂಡಿವೆ. ಕಳೆದ ಜುಲೈನಲ್ಲಿದ್ದ ಮಟ್ಟಕ್ಕೆ ಸೆನ್ಸೆಕ್ಸ್ ಈಗ ತಲುಪಿದಂತಾಗಿದೆ. ಕಳೆದ ಎರಡು ಸೆಷನ್‌ಗಳಲ್ಲಿ ಹೂಡಿಕೆದಾರರು ಒಟ್ಟು 5 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ.
ಅಮೆರಿಕ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದ್ದು, ಆರ್ಥಿಕ ದತ್ತಾಂಶಗಳು ಉತ್ತಮ ಪ್ರಗತಿ ತೋರಿಸಿವೆ. ಇದರಿಂದಾಗಿ ಏಷ್ಯಾ ಮಾರುಕಟ್ಟೆಯಿಂದ ಹೂಡಿಕೆದಾರರು ಅಮೆರಿಕದತ್ತ ಮುಖ ಮಾಡುವ ಭೀತಿ ಮೂಡಿದೆ. ಹೀಗಾಗಿ ಹೂಡಿಕೆದಾರರು ಭಾರತ ಸೇರಿದಂತೆ ಏಷ್ಯಾ ಮಾರುಕಟ್ಟೆಯಲ್ಲಿನ ಹೂಡಿಕೆ ಹಿಂಪಡೆಯುತ್ತಿದ್ದಾರೆ. ಇವೆಲ್ಲವುಗಳಿಂದಾಗಿ ಕಳೆದ ಆಗಸ್ಟ್‌ಗೆ ಹೋಲಿಸಿದರೆ ಶೇ.10ರಷ್ಟು ಮಾರುಕಟ್ಟೆ ಕುಸಿತ ಕಂಡಿದೆ.
ರೂಪಾಯಿ 73.77 ಕ್ಕೆ ಕುಸಿದಿದೆ. ಇದು ಕುಸಿತವಲ್ಲ, ಒಡೆತ. ಇಂಧನ, ನೈಸರ್ಗಿಕ ಅನಿಲದ ಬೆಲೆ ಏರುತ್ತಿದೆ. ಮಾರುಕಟ್ಟೆ ಕುಸಿಯುತ್ತಿದೆ. 56 ಇಂಚಿನ ಎದೆ ಎಲ್ಲಿಯವರೆಗೆ ಸೈಲೆಂಟ್ ಮೋಡ್‌ನಲ್ಲಿರುತ್ತದೆಯೋ ಗೊತ್ತಿಲ್ಲ!
— ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ