ಗಂಗಾವತಿ: ತುಂಗಭದ್ರ ಎಡದಂಡೆ ಕಾಲುವೆ ಮೈಲ್ 10 ಹರ್ಲಾಪೂರ ಬಳಿ ಎಸ್ಕೇಪ್ ಕ್ರಸ್ಟ್ ಗೇಟ್ ಇತ್ತೀಚೆಗೆ ದುರಸ್ತಿ ಮಾಡಿದ್ದ ಜಾಗದಲ್ಲಿ ಆ.7ರ ಸೋಮವಾರ ಬೆಳಗಿನ ಜಾವದಿಂದ ನೀರಿನ ಸೋರಿಕೆಯಾಗುತ್ತಿದೆ.
ಇತ್ತೀಚಿಗೆ ಇದೇ ಎಸ್ಕೇಪ್ ಕ್ರಸ್ಟ್ ಗೇಟ್ ದುರಸ್ತಿಗೊಳಿಸಿ ಹೊಸ ಕ್ರಸ್ಟ್ ಗೇಟ್ ಗಳನ್ನು ಕೂರಿಸಲಾಗಿದ್ದು, ಗೇಟ್ ಗಳ ಅಕ್ಕಪಕ್ಕದಲ್ಲಿ ನೀರಿನ ಸೋರಿಕೆಯಾಗುತ್ತಿದ್ದು, ಬಲಬದಿಯ ಗೋಡೆಯಿಂದಲೂ ಸಣ್ಣ ಪ್ರಮಾಣದ ಸೋರಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ.
ಕಳೆದ ವರ್ಷ ಇಲ್ಲಿನ ಎಸ್ಕೇಪ್ ಕ್ರಸ್ಟ್ ಗೇಟ್ ನೀರಿನ ಒತ್ತಡದ ಹಿನ್ನೆಲೆ ಬೆಂಡ್ ಆಗಿತ್ತು. ಅಧಿಕಾರಿಗಳು ಕಾಲುವೆಯಲ್ಲಿ ನೀರು ಕಡಿಮೆ ಮಾಡದೇ ಮರಳಿನ ಚೀಲಗಳನ್ನು ಗೇಟ್ ಹಿಂಭಾಗದಲ್ಲಿ ಜೋಡಿಸಿ ಮುಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆಗೆ ನೀರು ಹರಿಸಿ ರೈತರಿಗೆ ಅನುಕೂಲ ಮಾಡಿದ್ದರು.
ಈ ಭಾರಿ ಮುಂಗಾರು ಮಳೆ ತಡವಾಗಿದ್ದರಿಂದ ಕಾಲುವೆ ದುರಸ್ತಿ ಕಾರ್ಯಗಳು ತಡವಾಗಿ ಆರಂಭಿಸಿ ಎಸ್ಕೇಪ್ ಕ್ರಸ್ಟ್ ಗೇಟ್ ದುರಸ್ತಿಗೆ ಜಾಗತಿಕ ಟೆಂಡರ್ ತಾಂತ್ರಿಕ ತೊಂದರೆಯ ಪರಿಣಾಮ ಕಳೆದ ವಾರ ದಾವಣಗೆರೆ ಮೂಲದ ಕಂಪನಿಗೆ ಎಸ್ಕೇಪ್ ಕ್ರಸ್ಟ್ ಗೇಟ್ ದುರಸ್ತಿ ಮಾಡಲು ಟೆಂಡರ್ ವಹಿಸಿ ಒಂದು ವಾರದಲ್ಲಿ ಕಾಮಗಾರಿ ಮುಕ್ತಾಯ ಮಾಡಲಾಗಿತ್ತು.
ಸೋಮವಾರ ಬೆಳಿಗ್ಗೆ ಎಸ್ಕೇಪ್ ಕ್ರಸ್ಟ್ ಗೇಟ್ ಬಳಿ ನೀರು ಸೋರಿಕೆಯಾಗುತ್ತಿದ್ದು, ಸ್ಥಳದಲ್ಲಿದ್ದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸದ್ಯ ಕಾಲುವೆಗೆ 4 ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದ್ದು, ರಾಯಚೂರು ಜಿಲ್ಲೆಯ ಕುಡಿಯುವ ನೀರಿಗಾಗಿ ಎಲ್ಲಾ ಉಪಕಾಲುವೆಗಳ ಗೇಟ್ ಬಂದ್ ಮಾಡಲಾಗಿದ್ದು, ಸೋರಿಕೆಯ ಪರಿಣಾಮ ಕಾಲುವೆಯಲ್ಲಿ ನೀರಿನ ಹರಿಯುವಿಕೆ ಕಡಿಮೆ ಮಾಡುವ ಸಾಧ್ಯತೆ ಇದೆ.
ರೈತರಿಗೆ ಆತಂಕ ಬೇಡ:
ಹರ್ಲಾಪುರ್ ಎಸ್ಕೇಪ್ ಟ್ರಸ್ಟ್ ಗೇಟ್ ಬಳಿ ಸಣ್ಣ ಪ್ರಮಾಣದ ನೀರಿನ ಸೋರಿಕೆಯಾಗುತ್ತಿದ್ದು, ಹೊಸದಾಗಿ ಹಾಕಿದ್ದ ಕ್ರಸ್ಟ್ ಗೇಟ್ ರಬ್ಬರ್ ಪುನಃ ಜೋಡಣೆ ಮಾಡಲಾಗುತ್ತಿದ್ದು, ಅದರೊಂದಿಗೆ ಮರಳಿನ ಚೀಲಗಳನ್ನು ಗೇಟ್ ಹಿಂಭಾಗದಲ್ಲಿ ಹಾಕುವಂತೆ ಸೂಚನೆ ನೀಡಲಾಗಿದೆ.
ಸದ್ಯ ಕಾಲುವೆಯಲ್ಲಿ 4000 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ಇದೀಗ 90 ಮೈಲ್ ನಷ್ಟು ನೀರು ತಲುಪಿದ್ದು, ರಾಯಚೂರಿಗೆ ಶೀಘ್ರವೇ ನೀರು ತಲುಪಲಿದೆ. ರೈತರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ, ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಸಮರೋಪಾದಿಯಲ್ಲಿ ಸೋರಿಕೆಯನ್ನು ತಡೆಯಲಿದ್ದಾರೆ. ಕಾಲುವೆಯಲ್ಲಿ ಯಾವುದೇ ಕಾರಣಕ್ಕೂ ನೀರಿನ ಪ್ರಮಾಣ ಕಡಿಮೆ ಮಾಡುವ ಅವಶ್ಯಕತೆ ಇಲ್ಲ. ರೈತರು ಆತಂಕ ಪಡದಂತೆ ತುಂಗಭದ್ರಾ ಡ್ಯಾಂ ಜಲಾನಯನ ಯೋಜನೆಯ ಮುಖ್ಯ ಅಭಿಯಂತರ ಬಸವರಾಜ ಉದಯವಾಣಿ ಜೊತೆ ಮಾತನಾಡಿ ತಿಳಿಸಿದ್ದಾರೆ.