ದಾವಣಗೆರೆ: ಸೋಮವಾರ ಸಂಜೆ ಬೀಸಿದ ಗಾಳಿಗೆ ನಿಟುವಳ್ಳಿ ರಸ್ತೆ, ಎಸ್ಸೆಸ್ ಬಡಾವಣೆ ಒಳಗೊಂಡಂತೆ ಅನೇಕ ಕಡೆ ಮರಗಳು ಧರೆಗುರುಳಿವೆ. ನಿಟುವಳ್ಳಿ ರಸ್ತೆಯಲ್ಲಿ ಏಕಾಏಕಿ ಬೀಸಿದ ಗಾಳಿಗೆ ಮರದ ಕೊಂಬೆಯೊಂದು ಬಿದ್ದ ಪರಿಣಾಮ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಕೆ.ಜಿ. ಯಲ್ಲಪ್ಪ ಎಂಬುವರ ಕಾರು ಸ್ವಲ್ಪ ಜಖಂಗೊಂಡಿದೆ. ಈ ವೇಳೆ ಪಾದಾಚಾರಿಯೊಬ್ಬರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದರು. ರಸ್ತೆಗೆ ಮರದ ಕೊಂಬೆ ಅಡ್ಡಲಾಗಿ ಬಿದ್ದ ಪರಿಣಾಮ ಕೆಲ ಕಾಲ ಸಂಚಾರದಲ್ಲಿ ವ್ಯತ್ಯಯ
ಉಂಟಾಯಿತು.
ಎಸ್.ಎಸ್. ಬಡಾವಣೆ ಎ ಬ್ಲಾಕ್ ನಲ್ಲಿ ಮರ ಮನೆಯ ಬಾಗಿಲಿಗೆ ಅಡ್ಡ ಬಿದ್ದ ಪರಿಣಾಮ ಮನೆಯ ಒಳಗಡೆ ಇದ್ದವರು ಹೊರ ಬರಲು ತೊಂದರೆ ಅನುಭವಿಸುವಂತಾಯಿತು. ನಗರದ ವಿವಿಧ ಭಾಗದಲ್ಲಿ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಜನರು ತೊಂದರೆ ಅನುಭವಿಸಿದರು. ಭಾರೀ ಗಾಳಿಯ ಜೊತೆಗೆ ಗುಡುಗು-ಮಿಂಚು, ಸಿಡಿಲಿನೊಂದಿಗೆ ಕೆಲ ಕಾಲ ಮಳೆ ಸುರಿಯಿತು. ಸಿಡಿಲಿನ ಹೊಡೆತಕ್ಕೆ
ಜನರು ಬೆಚ್ಚಿಬಿದ್ದರು.
ವಿನೋಬಾ ನಗರದ ಒಂದು ಮತ್ತು ಎರಡನೇ ಮುಖ್ಯ ರಸ್ತೆಯಲ್ಲಿ ಮರದ ಕೊಂಬೆ ರಸ್ತೆಗೆ ಅಡ್ಡಲಾಗಿ ಬಿದ್ದ ಕಾರಣ ಜನ ತೊಂದರೆ ಅನುಭವಿಸ ಬೇಕಾಯಿತು. ಮಳೆ-ಗಾಳಿಗೆ ಕೆಲವೆಡೆ ಮನೆ ಚಾವಣಿ ತಗಡಿನ ಶೀಟ್‌ಗಳು ಹಾರಿ ಹೋಗಿವೆ.
ಅರುಣಾ ಚಿತ್ರಮಂದಿರ ವೃತ್ತದ ಬಳಿಯ ಹೊಳೆಹೊನ್ನೂರು ತೋಟದಲ್ಲಿ ನಡೆಯುತ್ತಿರುವ ವೈಟ್‌ಹೌಸ್ ವಸ್ತುಪ್ರದರ್ಶನದಲ್ಲಿ ಕೆಲವೊಂದು ವಸ್ತುಗಳು ಗಾಳಿಗೆ ಹಾರಿ ಹೋಗಿವೆ. ವಸ್ತು ಪ್ರದರ್ಶನ ವೀಕ್ಷಣೆಗೆ ಬಂದವರು ತೊಂದರೆ ಅನುಭವಿಸಿದರು.
ಭಾನುವಾರ ಮತ್ತು ಸೋಮವಾರ ಬಿರು ಬಿಸಿಲಿನಿಂದ ತತ್ತರಿಸಿದ್ದ ಜನರು ಮಳೆಯಿಂದ ಕೊಂಚ ನಿಟ್ಟುಸಿರು ಬಿಡುವಂತಾಯಿತು. ಆದರೆ, ಭಾರೀ ಗಾಳಿ, ಗುಡುಗು, ಸಿಡಿಲು, ಮಿಂಚಿನ ಮಳೆ, ಮರ ಬಿದ್ದ ಪರಿಣಾಮ ರಸ್ತೆ, ವಿದ್ಯುತ್ ಸಂಪರ್ಕವೂ ಕಡಿತಗೊಂಡಿದ್ದರಿಂದ ಸಮಸ್ಯೆ ಅನುಭವಿಸಿದರು.