Advertisement

ಸಿಡಿಲಿನ ಆಘಾತದಿಂದ ಅಡಿಕೆ ತೋಟಗಳಿಗೆ ಹಾನಿ : ಕರಟಿದ 150ಕ್ಕೂ ಮಿಕ್ಕಿ ಅಡಿಕೆ ಮರಗಳು

02:09 AM May 24, 2021 | Team Udayavani |

ಬೆಳ್ತಂಗಡಿ: ನಿರಂತರ ಸಿಡಿಲು ಗುಡುಗು ಸಹಿತ ಅಕಾಲಿಕ ಮಳೆಯ ಪ್ರಭಾವದಿಂದ ಬೆಳ್ತಗಡಿ ತಾಲೂಕಿನ ಮುಂಡಾಜೆ ಪರಮುಖ ನಿವಾಸಿ ಕೃಷಿಕ ಮಚ್ಚಿಮಲೆ ಅನಂತ ಭಟ್‌ ಅವರ ಅಡಿಕೆ ತೋಟಕ್ಕೆ ಸಿಡಿಲು ಬಡಿದು 150ಕ್ಕಿಂತ ಮಿಕ್ಕಿ ಮರಗಳು ಕರಟಿಹೋಗಿವೆ.
ಕಳೆದ ಕೆಲವು ದಿನಗಳ ಹಿಂದೆ ಸಿಡಿಲು ಬಡಿದ ಪರಿಣಾಮ ದಿನದಿಂದ ದಿನಕ್ಕೆ ಸುತ್ತಮುತ್ತಲ ವ್ಯಾಪ್ತಿಯ ಅಡಿಕೆ ಮರಗಳು ಸಂಪೂರ್ಣ ಹಾನಿಗೊಳಗಾಗುತ್ತಿವೆ. ಕೆಲವೊಂದು ಅಡಿಕೆ ಮರಗಳಿಗೆ ಭಾಗಶಃ ಹಾನಿ ಸಂಭವಿಸಿದ್ದು ಅವುಗಳ ಬೆಳವಣಿಗೆಯು ಕುಂಠಿತಗೊಂಡಿದೆ. ಇದರಿಂದ ಲಕ್ಷಾಂತರ ರೂ. ಮೌಲ್ಯದ ಹಾನಿ ಸಂಭವಿಸಿದೆ.

Advertisement

ಇವರ ತೋಟಕ್ಕೆ ಕಳೆದ ಎರಡು ವರ್ಷಗಳಿಂದ ಏಳು ಬಾರಿ ಸಿಡಿಲಿನ ಆಘಾತವಾಗಿದ್ದು, 20 ವರ್ಷಗಳಷ್ಟು ಹಳೆಯ 300ರಿಂದ 400ಕ್ಕೂ ಅಧಿಕ ಅಡಿಕೆ ಗಿಡಗಳು ಈವರೆಗೆ ಕರಟಿವೆ. ಕೆಲವೊಮ್ಮೆ ಸೀಮಿತ ಅಡಿಕೆ ಗಿಡಗಳಿಗೆ ಹಾನಿಯಾದರೆ, ಈ ಬಾರಿ ಒಂದೇ ಸಿಡಿಲಾಘಾತಕ್ಕೆ 150ಕ್ಕೂ ಅಧಿಕ ಗಿಡಗಳಿಗೆ ಹಾನಿಯಾಗಿವೆ. ಸಿಡಿಲು ಬಡಿದು ಕನಿಷ್ಠ 6ರಿಂದ 1ವರ್ಷ ವರೆಗೆ ಅದರ ಪರಿಣಾಮ ಇರುವುದರಿಂದ ಬಳಿಕವಷ್ಟೇ ಮರಗಳು ಸಾಯುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಅನಂತ ಭಟ್‌ ಅವರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಇದೇ ಮುಂಡಾಜೆ ಗ್ರಾಮದ ಕಡಂಬಳ್ಳಿ ಪರಿಸರದ ಅಡಿಕೆ ತೋಟಕ್ಕೆ ಸಿಡಿಲು ಬಡಿದಿದ್ದು ಸ್ಥಳೀಯ ಗೋಪಾಲ್‌ ಪಟವರ್ಧನ್‌ ಅವರ ತೋಟದಲ್ಲಿ 50ರಷ್ಟು ಅಡಿಕೆ ಮರಗಳಿಗೆ ಹಾನಿಯಾಗಿದೆ. ಸಮೀಪದ ವಿ.ಜಿ.ಪಟವರ್ಧನ್‌ ಅವರ ತೋಟದ 10ಕ್ಕಿಂತ ಹೆಚ್ಚು ಅಡಿಕೆ ಮರಗಳು,

ಹಲಸಿನ ಮರ ಹಾಗೂ ಬಾಳೆಗಿಡಗಳು ನಾಶವಾಗಿದೆ. ಕಾಯರ್ತೋಡಿ ವಿಶ್ವನಾಥ ಬೆಂಡೆಯವರಲ್ಲಿ 15 ಬಾಳೆಗಿಡಗಳಿಗೆ ಹಾನಿ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next