ವಿಜಯಪುರ: ಮರವೊಂದಕ್ಕೆ ಸಿಡಿಲು ಬಡಿದ ಪರಿಣಾಮ ಆ ಮರದ ಅಡಿಯಲ್ಲಿ ನಿಂತಿದ್ದ ಕುರಿಮಂದೆಯೊಂರ 15 ಕುರಿಗಳು ಸಾವಿಗೀಡಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಭಾರೀ ಮಳೆಯಿಂದ ರಕ್ಷಣೆ ಪಡೆಯಲು ಕುರಿಗಾಹಿಗಳು ತಮ್ಮ ಕುರಿ ಮಂದೆಯೊಂದಿಗೆ ಮರದ ಕೆಳಗೆ ನಿಂತಿದ್ದ ಸಂದರ್ಭದಲ್ಲಿ ಆ ಮರಕ್ಕೆ ಸಿಡಿಲು ಬಡಿದ ಪರಿಣಾಮ 15 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ಹಂದಿಗನೂರ ಗ್ರಾಮದ ಮಡಿವಾಳಪ್ಪ ಈರಪ್ಪ ಹಿರೇಕುರುಬರ ಎಂದಿನಂತೆ ಮಂಗಳವಾರವೂ ಕುರಿ ಮೇಯಿಸಲು ತನ್ನ ಹೊಲಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಗುಡುಗು ಮಿಂಚು ಸಹಿತ ಮಳೆ ಸುರಿಯಲು ಆರಂಭವಾಯಿತು.
ಈ ಸಂದರ್ಭದಲ್ಲಿ ಕುರಿಗಳನ್ನು ಗಿಡದ ಕೆಳಗೆ ನಿಲ್ಲಿಸಿ, ಮಗನೊಂದಿಗೆ ಮತ್ತೊಂದು ಕಡೆ ಈರಪ್ಪ ನಿಂತಿದ್ದರು. ಈ ಸಂದರ್ಭದಲ್ಲಿ ಕುರಿಗಳು ನಿಂತಿದ್ದ ಮರಕ್ಕೆ ಇದ್ದಕ್ಕಿದ್ದಂತೆಯೇ ಸಿಡಿಲು ಬಡಿಯಿತು.
ಪರಿಣಾಮ, 15 ಕುರಿಗಳು ಸ್ಥಳದಲ್ಲಿಯೇ ಸಾವಿಗೀಡಾಗಿವೆ ಮತ್ತು ಇದರಿಂದ ಕುರಿಗಳ ಮಾಲೀಕ ಮಡಿವಾಳಪ್ಪನಿಗೆ 2 ಲಕ್ಷ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ. ಈ ನಷ್ಟವನ್ನು ಸರಕಾರ ಪರಿಹಾರ ರೂಪದಲ್ಲಿ ಭರಿಸಬೇಕು ಎಂದು ಕರ್ನಾಟಕ ಜನಸ್ಪಂದನ ಟ್ರಸ್ಟ್ ಜಿಲ್ಲಾಧ್ಯಕ್ಷ ಮಂಜುನಾಥ ಹಂದಿಗನೂರ ಈ ಮೂಲಕ ಸರಕಾರವನ್ನು ಆಗ್ರಹಿಸಿದ್ದಾರೆ.