Advertisement

ತುಂಬೆ ಒಳಹರಿವು ಸ್ಥಗಿತ: ಮಂಗಳೂರಿಗೆ ನೀರು ಪೂರೈಕೆ ಆತಂಕಿತ

12:52 PM Mar 17, 2017 | |

ಮಂಗಳೂರು: ನಗರಕ್ಕೆನೀರಿನ ಮೂಲವಾಗಿರುವ ನೇತ್ರಾವತಿಯಲ್ಲಿ ನೀರಿನ ಒಳಹರಿವು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಹಾಗೂ ಮೇ ಅಂತ್ಯದವರೆಗೆ ನೀರಿನ ಸರಬರಾಜು ಸುಲಭವಾಗುವ ನಿಟ್ಟಿನಲ್ಲಿ ಮಂಗಳೂರು ಪಾಲಿಕೆಯ ವ್ಯಾಪ್ತಿಯ ಜನರಿಗೆ ಮಾ. 20ರ ಅನಂತರ ನೀರು ಸರಬರಾಜಿನಲ್ಲಿ ಕಡಿತ ಮಾಡಲು ಪಾಲಿಕೆ ನಿರ್ಧರಿಸಿದೆ.

Advertisement

ಇದರಂತೆ ಪ್ರತೀ 48 ಗಂಟೆ ನಿರಂತರ ನೀರು ಪೂರೈಕೆ ಮಾಡಿದರೆ, ಬಳಿಕದ 36 ಗಂಟೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

ಮಂಗಳೂರು ಮೇಯರ್‌ ಕವಿತಾ ಸನಿಲ್‌ ಅವರು, ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಳೆ ಬರುವ ತನಕ ಮಂಗಳೂರು ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ನೀರು ವಿತರಣೆಯಲ್ಲಿ ಕಡಿತ ಮಾಡಲಾಗುತ್ತಿದೆ. ಕಳೆದ ವರ್ಷ ಎಪ್ರಿಲ್‌/ಮೇ ಸಮಯದಲ್ಲಿ ಕುಡಿಯುವ ನೀರಿಗಾಗಿ ಮಂಗಳೂರಿನಲ್ಲಿ ಬಹಳಷ್ಟು ಸಮಸ್ಯೆ ಎದುರಾಗಿತ್ತು. ಇದನ್ನು ಮನಗಂಡು ಈ ಬಾರಿ ಮೊದಲೇ ನೀರಿನ ಸರಬರಾಜಿನಲ್ಲಿ ಕಡಿತ ಮಾಡಲು ನಿರ್ಧರಿಸಲಾಗಿದೆ. ಒಂದು ವೇಳೆ ಮಳೆ ಬೇಗನೆ ಬಂದರೆ ತತ್‌ಕ್ಷಣವೇ ಈ ಆದೇಶವನ್ನು ವಾಪಸ್‌ ಪಡೆಯಲಾಗುವುದು ಎಂದರು.

ಮುಂದಿನ ವರ್ಷ 
6 ಮೀಟರ್‌ ನೀರು ನಿಲುಗಡೆ

ತುಂಬೆಯಲ್ಲಿ ಪ್ರಸ್ತುತ 5 ಮೀಟರ್‌ ನೀರು ನಿಲ್ಲಿಸಿರುವ ಹಿನ್ನೆಲೆಯಲ್ಲಿ ಹತ್ತಿರದಲ್ಲಿ ಭೂಮಿ ಮುಳುಗಡೆಯಾದ 21 ರೈತರಿಗೆ ಪರಿಹಾರಧನವಾಗಿ 7 ಕೋ.ರೂ. ಮಾರ್ಚ್‌ ಅಂತ್ಯದ ವೇಳೆಗೆ ಬಿಡುಗಡೆಯಾಗಿ ಹಸ್ತಾಂತರ ಮಾಡಲಾಗುವುದು. 2017-18ರ ಸಾಲಿನಲ್ಲಿ  6 ಮೀಟರ್‌ ನೀರು ನಿಲುಗಡೆಗೆ ಅವಕಾಶ ಕಲ್ಪಿಸಲು ಸರಕಾರ ನಿರ್ಧರಿಸಿದೆ. 

ಹೀಗಾಗಿ ಸುಮಾರು 50 ಎಕ್ರೆಯಷ್ಟು ಸ್ಥಳ ಮುಳುಗಡೆಯಾಗಬಹುದು. ಅವಧಿರಿಗೆ ಮುಂದೆ ಪರಿಹಾರ ನೀಡಲಾಗುವುದು ಮತ್ತು 7 ಮೀಟರ್‌ ನೀರು ನಿಲ್ಲಿಸಬೇಕಾದರೆ ಸಂಬಂಧಿತ ಎಲ್ಲ ಭೂಮಿಯವರಿಗೆ ಪರಿಹಾರ ನೀಡಿದ ಬಳಿಕವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಎಪ್ರಿಲ್‌ 1ರಿಂದ ಅನುಮತಿ
ಇಲ್ಲದ ಬ್ಯಾನರ್‌ ತೆರವು

ಮೇಯರ್‌ ಕವಿತಾ ಮಾತನಾಡಿ, ಎಲ್ಲ ರೀತಿಯ ಫ್ಲೆಕ್ಸ್‌ ಹಾಕುವುದಕ್ಕೆ ರಾಜ್ಯಾದ್ಯಂತ ನಿಷೇಧವಿದೆ. ಆದರೂ ಮಂಗಳೂರಿನಲ್ಲಿ ಈ ನಿಯಮವನ್ನು ಉಲ್ಲಂಘಿಸುವುದು ಕಂಡುಬರುತ್ತಿದೆ. ಹೀಗಾಗಿ ಎಪ್ರಿಲ್‌ 1ರಿಂದ ಅನುಮತಿ ಇಲ್ಲದ ಎಲ್ಲ ರೀತಿಯ ಬ್ಯಾನರ್‌ಗಳನ್ನು ತೆರವುಗೊಳಿಸಲಾಗುವುದು ಹಾಗೂ ಅದರ ವೆಚ್ಚವನ್ನು ಸಂಬಂಧಪಟ್ಟವರಿಂದಲೇ ವಸೂಲಾತಿ ಮಾಡಲಾಗುವುದು ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉಪ ಮೇಯರ್‌ ರಜನೀಶ್‌, ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ, ಮಾಜಿ ಮೇಯರ್‌ಧಿಗಳಾದ ಹರಿನಾಥ್‌, ಮಹಾಬಲ ಮಾರ್ಲ, ಸದಸ್ಯೆ ಅಪ್ಪಿ ಉಪಸ್ಥಿತರಿದ್ದರು.

ನೀರು ಕಡಿತವಾಗುವ ದಿನಗಳು
ಮಾ. 20ರ ಸೋಮವಾರದಿಂದ ಬೆಳಗ್ಗೆ 6ರಿಂದ ಮಂಗಳವಾರ ಸಂಜೆ 6ರ ವರೆಗೆ ಮಂಗಳೂರಿಗೆ ನೀರು ಸರಬರಾಜು ಸ್ಥಗಿತಗೊಳಿಸಲಾಗುವುದು. ಮಂಗಳವಾರ ಸಂಜೆ 6ರಿಂದ ಗುರುವಾರ ಸಂಜೆ 6ರ ವರೆಗೆ ಎಲ್ಲ ಬಳಕೆದಾರರಿಗೆ ನೀರು ಪೂರೈಸಲಾಗುವುದು. ಗುರುವಾರ ಸಂಜೆ 6ರಿಂದ ಶನಿವಾರ ಬೆಳಗ್ಗೆ 6ರ ವರೆಗೆ ನೀರು ಸರಬರಾಜು ಸ್ಥಗಿತ ಮಾಡಲಾಗುವುದು ಹಾಗೂ ಶನಿವಾರ ಬೆಳಗ್ಗೆ 6ರಿಂದ ಸೋಮವಾರ ಬೆಳಗ್ಗೆ 6ರ ವರೆಗೆ ಎಲ್ಲ ಬಳಕೆದಾರರಿಗೆ ನೀರು ಪೂರೈಸಲಾಗುವುದು ಎಂದು ಮೇಯರ್‌ ತಿಳಿಸಿದರು.

ಕೈಗಾರಿಕೆಗಳಿಗೆ ನೀರು ನಿರ್ಬಂಧ
ಆಯುಕ್ತ ಮಹಮ್ಮದ್‌ ನಝೀರ್‌ ಮಾತನಾಡಿ, ಎಎಂಆರ್‌ ಡ್ಯಾಂನಿಂದ ಎಸ್‌ಇಝಡ್‌ ಹಾಗೂ ಎಂಆರ್‌ಪಿಎಲ್‌ಗೆ ಪ್ರತಿ ದಿನ 15 ಎಂಜಿಡಿ ನೀರು ತೆಗೆಯಲು ಅನುಮತಿ ಇದ್ದು, ಪ್ರಸ್ತುತ ನೀರಿನ ಕೊರತೆ ಹಿನ್ನೆಲೆಯಲ್ಲಿ ಅದನ್ನು 10 ಎಂಜಿಡಿಗೆ ಕಡಿತಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಹೊಸ ನಿರ್ಮಾಣ ಕಟ್ಟಡಗಳಿಗೂ ನೀರಿನ ಸರಬರಾಜು ಸ್ಥಗಿತಗೊಳಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next