Advertisement

ವಾರ್ಷಿಕ ಕ್ರಿಯಾಯೋಜನೆಗೆ ಅನುಮೋದನೆ

05:22 PM Aug 22, 2019 | Team Udayavani |

ತುಮಕೂರು: ಜಿಪಂ ಸಾಮಾನ್ಯ ಸಭೆಯಲ್ಲಿ 2019-20ನೇ ಸಾಲಿನ ಜಿಪಂ ಲಿಂಕ್‌ ಡಾಕ್ಯುಮೆಂಟ್ ವಾರ್ಷಿಕ ಕ್ರಿಯಾಯೋಜನೆಗೆ ಸದಸ್ಯರೆಲ್ಲ ಸರ್ವಾ ನುಮತದಿಂದ ಅನುಮೋದನೆ ನೀಡಿದರು.

Advertisement

ಬುಧವಾರ ನಡೆದ ವಿಶೇಷ ಸಭೆಯಲ್ಲಿ ಅಧ್ಷಕ್ಷೆ ಎಂ. ಲತಾ ರವಿಕುಮಾರ್‌ ಮಾತನಾಡಿ, ಲಿಂಕ್‌ ಡಾಕ್ಯುಮೆಂಟ್ ಪ್ರಕಾರ ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಅನುದಾನ ನಿಗದಿಪಡಿಸಲಾಗಿದೆ. ಈ ಪೈಕಿ ಜಿಪಂ ಕಾರ್ಯಕ್ರಮಗಳಿಗೆ 51,972.94 ಲಕ್ಷ ರೂ., ತಾಲೂಕು ಪಂಚಾಯಿತಿ ಕಾರ್ಯಕ್ರಮ ಗಳಿಗೆ 1,04,279.62 ಲಕ್ಷ ರೂ., ಗ್ರಾಮ ಪಂಚಾಯಿತಿ ಕಾರ್ಯಕ್ರಮಗಳಿಗೆ 110 ಲಕ್ಷ ರೂ. ಅನುದಾನ ನಿಗದಿ ಪಡಿಸಲಾಗಿದೆ. ಜಿಎಸ್‌ಟಿಯಲ್ಲಿರುವ ತೊಡಕುಗಳ ಬಗ್ಗೆ ಸದಸ್ಯರು ಗಮನಕ್ಕೆ ತಂದರು. ಇದಕ್ಕೆ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ವಿವಿಧ ಸರಕುಗಳಿಗೆ ಜಿಎಸ್‌ಟಿ ನಿಗದಿ ಪಡಿಸಿ ಆದೇಶ ಹೊರಡಿಸುವುದಾಗಿ ತಿಳಿಸಿದರು.

ಮಕ್ಕಳಿಂದ ಶೌಚಗೃಹ ಸ್ವಚ್ಛತೆ!:ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ನಡಾವಳಿ ಅನು ಮೋದನೆ ಮಾಡುವ ವಿಷಯವಾಗಿ ನಡೆದ ಚರ್ಚೆಯಲ್ಲಿ ವಿವಿಧ ಶಾಲೆಗಳಲ್ಲಿ ಮಕ್ಕಳಿಂದ ಶೌಚಗೃಹ ಸ್ವಚ್ಛತೆ ಮಾಡಿಸುತ್ತಿರುವುದು ಕಂಡು ಬಂದಿದೆ ಎಂದು ಸದಸ್ಯರು ತಿಳಿಸಿದರು. ಈ ಕುರಿತು ಮಾತನಾಡಿದ ಉಪ ಕಾರ್ಯದರ್ಶಿ ರಮೇಶ್‌, ಗ್ರಾಪಂ ವ್ಯಾಪ್ತಿಯ ಪ್ರತಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಸ್ಚಚ್ಛತೆಗೆ ಕ್ರಮ ವಹಿಸಲು ಸಿಇಒ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.

ಆ್ಯಂಬುಲೆನ್ಸ್‌ ಸೌಲಭ್ಯವಿಲ್ಲ: ಆರೋಗ್ಯ ಇಲಾಖೆ ಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರಿಗೆ ಕಳೆದ 3 ತಿಂಗಳಿಂದ ವೇತನ ಪಾವತಿಯಾಗಿರುವುದಿಲ್ಲ. ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆ್ಯಂಬುಲೆನ್ಸ್‌ ಸೌಲಭ್ಯವಿಲ್ಲ. ಆಶಾ ಕಾರ್ಯಕರ್ತೆಯರು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿರುವ ಹೆರಿಗೆ ಸೌಲಭ್ಯ ಬಡವರಿಗೆ ತಲುಪುತ್ತಿಲ್ಲ. ಕಳೆದ 3 ಆರ್ಥಿಕ ವರ್ಷಗಳಲ್ಲಿ ಇಲಾಖೆಗೆ ಮಂಜೂರಾಗಿರುವ ಹಣದ ಮಾಹಿತಿ ನೀಡಲು ಸದಸ್ಯರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಕುಂದುಕೊರತೆ ಬಗೆ ಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ ಇಲಾಖೆಯಲ್ಲಿ ಉಳಿದಿರುವ 24ಲಕ್ಷ ರೂ. ಪ್ರತಿ ತಾಲೂಕಿಗೆ 2 ಲಕ್ಷ ರೂ. ನೀಡುವ ಬಗ್ಗೆ ಚರ್ಚೆಯಾಗಿತ್ತು. ಆ ಹಣ ಇನ್ನೂ ತಲುಪಿಲ್ಲ. ಸೋಲಾರ್‌ ಪಾರ್ಕ್‌ ಮಂಜೂರಾಗಿರುವ ಜಾಗದಲ್ಲಿ 60 ಕೃಷಿ ಹೊಂಡಕ್ಕೆ ಅನುಮತಿ ನೀಡಲಾಗಿದೆ ಇದನ್ನು ಪರಿಶೀಲಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

Advertisement

ಜಿಲ್ಲೆಯಲ್ಲಿ ಶೇ.45 ಮಳೆಯಾಗಿದೆ. ಕಡಿಮೆ ಮಳೆಯಾಗಿರುವ ಕಡೆಗಳಲ್ಲಿ ಪರ್ಯಾಯವಾಗಿ ರಾಗಿ, ಸಿರಿಧಾನ್ಯ ಹಾಗೂ ಹುರುಳಿ ಬೆಳೆಗಳ ಬಿತ್ತನೆಗೆ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು. ಪ್ರಧಾನ ಮಂತ್ರಿಗಳ ಕಿಸಾನ್‌ ಸಮ್ಮಾನ್‌ ಯೋಜನೆ ಕುರಿತು ಜನರಲ್ಲಿ ಅರಿವಿನ ಕೊರತೆ ಇದೆ. ಈ ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒಗಳಿಗೆ ಸೂಚಿಸಲಾಯಿತು. ಉಪಾಧ್ಯಕ್ಷೆ ಶಾರದಾ ನರಸಿಂಹ ಮೂರ್ತಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಕಲ್ಯಾಣ್‌, ತಾಪಂ ಅಧ್ಯಕ್ಷರು, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next