Advertisement

ಎನ್‌ಎಂಸಿ ಮಸೂದೆ ಜಾರಿಗೆ ವೈದ್ಯರ ವಿರೋಧ

04:30 PM Aug 01, 2019 | Naveen |

ತುಮಕೂರು: ನೀತಿ ಆಯೋಗದ ಶಿಫಾರಸಿನಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಜಾರಿಗೊಳಿಸ ಬಾರದು ಎಂದು ಒತ್ತಾಯಿಸಿ ನಗರದಲ್ಲಿ ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ನೂರಾರು ಖಾಸಗಿ ವೈದ್ಯರು ಬುಧವಾರ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

Advertisement

ಭಾರತೀಯ ವೈದ್ಯಕೀಯ ಸಂಘದಿಂದ ದೇಶಾದ್ಯಂತ ಖಾಸಗಿ ಆಸ್ಪತ್ರೆ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ನಗರದಲ್ಲಿಯೂ ನೂರಾರು ವೈದ್ಯರು ಟೌನ್‌ಹಾಲ್ನ ಬಿಜಿಎಸ್‌ ವೃತ್ತದಲ್ಲಿರುವ ಭಾರತೀಯ ವೈದ್ಯಕೀಯ ಸಂಘದ ಕಚೇರಿ ಮುಂದೆ ಸಂಘದ ಜಿಲ್ಲಾಧ್ಯಕ್ಷ ಡಾ. ಪರಮೇಶ್ವರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಎನ್‌ಎಂಸಿ ಮಸೂದೆ ವಾಪಸ್‌ ಪಡೆಯುವಂತೆ ಆಗ್ರಹಿಸಿದರು.

ಜಿಲ್ಲೆಯಾದ್ಯಂತ ಮುಷ್ಕರ ಬೆಂಬಲಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗದಲ್ಲಿ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸ ಲಾಗುತ್ತಿದೆ. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಇರುತ್ತದೆ ಎಂದು ಎಚ್ಚರಿಸಿ, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್‌ಗೆ ಮನವಿ ಸಲ್ಲಿಸಿದರು.

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷ ಡಾ. ಪರಮೇಶ್ವರಪ್ಪ ಮಾತನಾಡಿ, ಹಿಂದೆ ಇದ್ದ ಎಂಸಿಎ ರದ್ದುಗೊಳಿಸಿ ಬಡವರ ವಿರೋಧಿಯಾಗಿರುವ

ಎನ್‌ಎಂಸಿ ಮಸೂದೆ ಜಾರಿಯಾದರೆ ಬಡವರು, ದಲಿತರು, ಹಿಂದುಳಿದವರು ವೈದ್ಯಕೀಯ ಶಿಕ್ಷಣ ಪಡೆಯುವುದು ಕಷ್ಟವಾಗಲಿದೆ. ಕೇಂದ್ರ ಸರ್ಕಾರ ಮಸೂದೆ ಜಾರಿಗೆ ತರಬಾರದು ಎಂದು ಒತ್ತಾಯಿಸಿದರು. ಎಂಸಿಎಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿ ಪ್ರತಿನಿಧಿಗಳನ್ನು ಚುನಾಯಿಸಲಾಗುತಿತ್ತು. ಇದರಲ್ಲಿ ವೈದ್ಯರೇ ಇರುತ್ತಿದ್ದರಿಂದ ವೈದ್ಯಕೀಯ ಕ್ಷೇತ್ರದ ಸಾಧಕ- ಬಾಧಕಗಳ ಬಗ್ಗೆ ಅರಿವು ಇರುತ್ತಿತ್ತು. ಆದರೆ ಈಗ ಇದನ್ನು ರದ್ದುಗಳಿಸಿ ಎನ್‌ಎಂಸಿ ಮಸೂದೆ ಜಾರಿಗೊಳಿಸಲು ಮುಂದಾಗಿದ್ದು, ಇದರಲ್ಲಿ ಸರ್ಕಾರದ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ಆರೋಪಿಸಿದರು.

Advertisement

ಖಾಸಗಿ ವೈದ್ಯಕೀಯ ಕಾಲೇಜುಗಳ ಶೇ. 40 ಸೀಟುಗಳಿಗೆ ಶುಲ್ಕ ನಿಗದಿ ಮಾಡುವ ಅಧಿಕಾರ ಸರ್ಕಾರದ ಬಳಿ ಇರಲಿದೆ. ಹೀಗಾಗಿ ಖಾಸಗಿ ವೈದ್ಯಕೀಯ ಕಾಲೇಜುಗಳು ಸರ್ಕಾರಿ ಕೋಟಾದಡಿ ಸೀಟು ಬಿಟ್ಟು ಉಳಿದ ಸೀಟುಗಳಿಗೆ ಮನಬಂದಂತೆ ಶುಲ್ಕ ವಿಧಿಸಲಿವೆ. ಇದರಿಂದ ಬಡವರು, ದಲಿತರಿಗೆ ವೈದ್ಯಕೀಯ ಶಿಕ್ಷಣ ಎಂಬುದು ಗಗನಕುಸುವಾಗಲಿದೆ. ಈ ಕ್ರಮದಿಂದ ವೈದ್ಯಕೀಯ ಲೋಕಕ್ಕೆ ತೊಂದರೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಲವು ಲೋಪ ಹೊಂದಿರುವ ಅವೈಜ್ಞಾನಿಕ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಬಾರದು. ಈ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು ಎಂದು ಆಗ್ರಹಿಸಿ ವೈದ್ಯರು ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಡಾ. ಪ್ರಭಾಕರ್‌, ಡಾ. ರಾಜೇಂದ್ರಪ್ರಸಾದ್‌,ಡಾ. ಭೂಷಣ್‌, ಡಾ. ರಂಗೇಗೌಡ, ಡಾ. ಸಂಜಯ್‌, ಡಾ. ಸುರೇಶ್‌ಬಾಬು, ಡಾ. ಲೋಕೇಶ್‌ ಬಾಬು, ಡಾ. ಹರೀಶ್‌, ಡಾ. ತ್ಯಾಗರಾಜು, ಡಾ. ಮಹೇಶ್‌, ಡಾ. ಲಕ್ಷ್ಮೀಕಾಂತ್‌, ಡಾ. ಅರುಂಧತಿ, ಡಾ. ಕವಿತಾ, ಡಾ. ಸತೀಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next