ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಕಾವು ರಂಗೇರಿದ್ದು, ಸುಮಲತಾ ಪರ ಗುರುವಾರವೂ ಯಶ್ ಹಾಗೂ ದರ್ಶನ್ ಪ್ರಚಾರ ನಡೆಸಿದರು. ಇನ್ನೊಂದೆಡೆ, ನಿಖೀಲ್ ಸಹ ಮತದಾರರ ಮನಗೆಲ್ಲುವ ಯತ್ನ ಮುಂದುವರಿಸಿದರು. ದೇವೇಗೌಡರು ಪ್ರಚಾರ ನಡೆಸಿದರು.
ಭಾರತಿನಗರ ಹಾಗೂ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ನಿಖೀಲ್ ಗುರುವಾರ ಬಿರುಸಿನ ಪ್ರಚಾರ ನಡೆಸಿ, “ರಾಜಕೀಯವಾಗಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಶಕ್ತಿ ತುಂಬಿರುವ ಮಂಡ್ಯ ಜಿಲ್ಲೆಯಲ್ಲೇ ನನ್ನ ರಾಜಕೀಯ ಜೀವನಕ್ಕೂ ಮುನ್ನುಡಿ ಬರೆಯಲು ಒಂದು ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದರು. ಸಚಿವ ಪುಟ್ಟರಾಜು ಅವರಿಗೆ ಸಾಥ್ ನೀಡಿದರು.
ದರ್ಶನ್ ವಾಹನದ ಮೇಲೆ ಕಲ್ಲು ತೂರಾಟ: ಇನ್ನೊಂದೆಡೆ, ದರ್ಶನ್ ಹಾಗೂ ಯಶ್ ಅವರು ಸುಮಲತಾ ಪರ ಮತಯಾಚನೆ ಮುಂದುವರಿಸಿದರು.
ಕೆಆರ್ ಪೇಟೆ ತಾಲೂಕಿನ ವಿವಿಧೆಡೆ ರೋಡ್ ಶೋ ನಡೆಸಿದ ದರ್ಶನ್, ಮಂಡ್ಯದ ಮಣ್ಣಿನ ಸೊಸೆ, ಅಂಬರೀಶ್ ಪತ್ನಿ ಸುಮಲತಾರನ್ನು ಗೆಲ್ಲಿಸುವ ಮೂಲಕ ತಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು ಎಂದು ಮನವಿ ಮಾಡಿದರು. ದರ್ಶನ್‌ರನ್ನು ನೋಡಲು ಮಹಿಳೆಯರು ತಮ್ಮ ಮಕ್ಕಳೊಂದಿಗೆ ಸುಡು ಬಿಸಿಲಿನಲ್ಲಿ ಸುಮಾರು 7 ಗಂಟೆ ಕಾಲ ಕಾದು ಕುಳಿತಿದ್ದರು. ಈ ಮಧ್ಯೆ, ಬೆಳ್ಳೂರಿನಲ್ಲಿ ಪ್ರಚಾರ ಮುಗಿಸಿ ನಾಗಮಂಗಲಕ್ಕೆ ಬರುವ ಮಾರ್ಗ ಮಧ್ಯೆ ಅಂಚೆಚಿಟ್ಟನಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿ ನಿಂತಿದ್ದ ಕೆಲವರು ದರ್ಶನ್ ಪ್ರಚಾರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ, ಕುಮಾರಸ್ವಾಮಿ ಪರ ಜಯಕಾರ ಕೂಗಿ ಪರಾರಿಯಾದರು. ಈ ವೇಳೆ, ಪೊಲೀಸ್ ವಾಹನಗಳ ಮೇಲೂ ಕಲ್ಲು ಬಿದ್ದಿದೆ. ಇನ್ನೊಂದೆಡೆ,ನಾಗಮಂಗಲದಲ್ಲಿ ದರ್ಶನ್‌ಗೆ ಭಾರಿ ಗಾತ್ರದ ಸೇಬಿನ ಹಾರ ಹಾಕಲು ಮುಂದಾದ ಅಭಿಮಾನಿಗಳು ಆಯತಪ್ಪಿ ಬಿದ್ದು, ದರ್ಶನ್‌ರ ವಾಹನದ ಗಾಜು ಪುಡಿಪುಡಿಯಾಯಿತು.
ಯಶ್ ಪ್ರಚಾರಕ್ಕೆ
ರೈತಸಂಘ ಸಾಥ್
ಇದೇ ವೇಳೆ, ಪಾಂಡವಪುರ ತಾಲೂಕಿನ ವಿವಿಧೆಡೆ ಸುಮಲತಾ ಪರ ರಾಕಿಂಗ್ ಸ್ಟಾರ್ ಯಶ್ ಗುರುವಾರವೂ ರೋಡ್ ಶೋ ಮೂಲಕ ಮತಯಾಚಿಸಿದರು. ರೈತಸಂಘ,
ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಅವರಿಗೆ ಅದ್ದೂರಿ ಸ್ವಾಗತ ಕೋರಿದರು.
ಸುಮಲತಾಗೆ ಈ ಬಾರಿ ಅವಕಾಶ ನೀಡಿ, ಮಂಡ್ಯ ಸ್ವಾಭಿಮಾನ ಕಾಪಾಡಿ ಎಂದು ಮನವಿ ಮಾಡಿದರು. ಜಿಲ್ಲೆಯ ಸೊಸೆ ಸುಮಲತಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರೋದೆ ತಪ್ಪಾ ಎಂದು ಪ್ರಶ್ನಿಸಿದರು. ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ಸಾಥ್ ನೀಡಿದರು.