Advertisement

ಸ್ಯಾಟ್‌ಲೈಟ್ ನಿಲ್ದಾಣದಲ್ಲಿ ಚೋರರ ಹಾವಳಿ

10:42 AM Jan 17, 2019 | |

ಬೆಂಗಳೂರು: ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್‌ ನಿಲ್ದಾಣದಲ್ಲಿ ಚೋರರ ಹಾವಳಿ ಹೆಚ್ಚಾಗಿದೆ. ಸ್ಯಾಟ್‌ಲೈಟ್ ಬಸ್‌ನಿಲ್ದಾಣದಲ್ಲಿ ಸಕ್ರಿಯವಾಗಿರುವ ಚೋರರ ಗುಂಪು, ದೂರದ ಊರುಗಳಿಗೆ ತೆರಳುವ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿಕೊಂಡು ಚಿನ್ನಾಭರಣ, ಹಣ ದೋಚುತ್ತಿರುವ ಬಗ್ಗೆ ದೂರು ಹೊತ್ತು ನಿತ್ಯ ಹತ್ತಾರು ಮಂದಿ ಪೊಲೀಸ್‌ ಠಾಣೆ ಮೆಟ್ಟಿಲೇರುತ್ತಿದ್ದಾರೆ.

Advertisement

ಮೂರು ದಿನಗಳ ಹಿಂದೆ ಮಂಡ್ಯ ನಗರಕ್ಕೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ಹತ್ತಿದ ಉಪನ್ಯಾಸಕಿ ಒಬ್ಬರನ್ನು ಹಿಂಬಾಲಿಸಿದ ದುಷ್ಕರ್ಮಿಗಳು, ಉಪನ್ಯಾಸಕಿಯ ಗಮನ ಬೇರೆಡೆ ಸೆಳೆದು ಪರ್ಸ್‌ ಕಳವು ಮಾಡಿ 12 ಸಾವಿರ ರೂ. ನಗದು ದೋಚಿದ್ದಾರೆ. ಜತೆಗೆ ಉಪನ್ಯಾಸಕಿಯ ಪರ್ಸ್‌ನಲ್ಲಿದ್ದ ಡೆಬಿಟ್ ಕಾರ್ಡ್‌ ಬಳಸಿ, ಬ್ಯಾಂಕ್‌ ಖಾತೆಯಲ್ಲಿದ್ದ 23 ಸಾವಿರ ರೂ. ಡ್ರಾ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಜ.13ರಂದು ಘಟನೆ ನಡೆದಿದ್ದು, ಹಣ ಕಳೆದುಕೊಂಡ ಉಪನ್ಯಾಸಕಿ ಉಷಾ (ಹೆಸರು ಬದಲಿಸಲಾಗಿದೆ), ಬ್ಯಾಟರಾಯನಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಉಷಾ, ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸ್ವಂತ ಊರಾದ ಮಂಡ್ಯಗೆ ಹೋಗಲು ಸಂಜೆ 4 ಗಂಟೆಗೆ, ಸ್ಯಾಟ್‌ಲೈಟ್ ಬಸ್‌ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ್ದಾರೆ. ಇನ್ನೇನು ಬಸ್‌ ಹೊರಡಬೇಕು ಎನ್ನುವಷ್ಟರಲ್ಲಿ ಒಬ್ಬ ವೃದ್ಧ ಹಾಗೂ ಇಬ್ಬರು ಯುವತಿಯರು ಬಸ್‌ ಹತ್ತಿದ್ದಾರೆ. ಈ ಪೈಕಿ ಒಬ್ಬ ಯುವತಿ ಉಪನ್ಯಾಸಕಿ ಪಕ್ಕದಲ್ಲೇ ಕುಳಿತುಕೊಂಡಿದ್ದಾಳೆ. ಉಳಿದ ಇಬ್ಬರು ಅಕ್ಕಪಕ್ಕ ನಿಂತುಕೊಂಡಿದ್ದಾರೆ. ಬಸ್‌ ಸ್ವಲ್ಪ ದೂರ ಚಲಿಸುತ್ತಲೇ ಪಕ್ಕದಲ್ಲಿ ಕುಳಿತುಕೊಂಡಿದ್ದ ಯುವತಿ ಚಿಲ್ಲರೆ ಕಾಸನ್ನು ಕೆಳಗೆ ಬೀಳಿಸಿ, ತೆಗೆದುಕೊಡುವಂತೆ ಉಷಾ ಅವರಿಗೆ ಕೇಳಿದ್ದಾಳೆ. ಉಷಾ ಚಿಲ್ಲರೆ ಕಾಸು ತೆಗೆದುಕೊಳ್ಳುವಾಗ ಅವರ ವ್ಯಾನಿಟಿ ಬ್ಯಾಗ್‌ ಎತ್ತಿಕೊಂಡ ಯುವತಿ, ಪಕ್ಕ ನಿಂತಿದ್ದ ಸಹಚರರಿಗೆ ನೀಡಿದ್ದಾಳೆ. ಕೆಲವೇ ನಿಮಿಷಗಳ ಬಳಿಕ, ಮಾರ್ಗ ಮಧ್ಯೆ ಬಸ್‌ ನಿಲ್ಲಿಸಿ ಮೂವರೂ ಇಳಿದುಕೊಂಡಿದ್ದಾರೆ.

ಯುವತಿ ಇದ್ದಕ್ಕಿದ್ದಂತೆ ಇಳಿದಿದ್ದರಿಂದ ಅನುಮಾನಗೊಂಡ ಉಷಾ, ವ್ಯಾನಿಟಿ ಬ್ಯಾಗ್‌ ನೋಡಿಕೊಂಡಾಗ ಬ್ಯಾಗ್‌ ಕಳವುವಾಗಿರುವುದು ಗೊತ್ತಾಗಿದೆ. ಬ್ಯಾಗ್‌ನಲ್ಲಿದ್ದ 12 ಸಾವಿರ ನಗದು, ಟೈಟಾನ್‌ ವಾಚ್ ಕಳೆದುಕೊಂಡು ಕಂಗಾಲಾಗಿದ್ದ ಉಷಾ ಅವರಿಗೆ ಅರ್ಧಗಂಟೆಯಲ್ಲಿ ಮತ್ತೂಂದು ಶಾಕ್‌ ಎದುರಾಗಿದೆ. ಅವರ ಡೆಬಿಟ್ ಕಾರ್ಡ್‌ ಬಳಸಿ 23 ಸಾವಿರ ರೂ. ಡ್ರಾ ಮಾಡಿಕೊಂಡ ಬಗ್ಗೆ ಮೊಬೈಲ್‌ಗೆ ಮೆಸೇಜ್‌ ಬಂದಿದೆ. ಊರಿಗೆ ತೆರಳಿದ ಉಷಾ, ಜ.14ರಂದು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಅರ್ಧ ದಾರಿಯಲ್ಲಿ ಕಂಡಕ್ಟರ್‌ ಬಸ್‌ ನಿಲ್ಲಿಸಿದ್ದೇಕೆ?

‘ಕೆಎಸ್‌ಆರ್‌ಟಿಸಿಯ ಕೆಎ 09. ಎಫ್ 5091 ಬಸ್‌ ಹತ್ತಿ ಮಂಡ್ಯಕ್ಕೆ ಪ್ರಯಾಣಿಸುತ್ತಿದ್ದೆ. ಅದು ನಾನ್‌ಸ್ಟಾಪ್‌ ಬಸ್ಸು. ಮಾರ್ಗ ಮಧ್ಯೆ ಎಲ್ಲೂ ನಿಲ್ಲಿಸುವಂತಿಲ್ಲ. ಆದರೂ, ಆ ಮೂವರನ್ನು ಬಸ್‌ ಕಂಡೆಕ್ಟರ್‌ ಮಾರ್ಗ ಮಧ್ಯೆ ಇಳಿಸಿದ್ದೇಕೆ ಎಂದು ಅರ್ಥವಾಗುತ್ತಿಲ್ಲ. ಪರ್ಸ್‌ ಹಾಗೂ ಹಣ ಕಳೆದುಕೊಂಡ ಬಗ್ಗೆ ಪ್ರಯಾಣಿಕರನ್ನೆಲ್ಲಾ ವಿಚಾರಿಸುವಾಗ, ಕಂಡಕ್ಟರ್‌ ಮಾತ್ರ ಏನೂ ನಡೆದೇ ಇಲ್ಲ ಎಂಬಂತೆ ವರ್ತಿಸಿದ್ದು ಅನುಮಾನ ಮೂಡುವಂತೆ ಮಾಡಿದೆ. ಈ ಕುರಿತು ಪೊಲೀಸರು ತನಿಖೆ ನಡೆಸಬೇಕು. ಕಳ್ಳರಿಂದ ಮತ್ತೂಬ್ಬರು ವಂಚನೆಗೆ ಒಳಗಾಗಬಾರದು’ ಎಂದು ಉಷಾ ಅವರು ‘ಉದಯವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸ್ಯಾಟ್‌ಲೈಟ್ ಬಸ್‌ ನಿಲ್ದಾಣದ ಸುತ್ತ ಸುಲಿಗೆ, ಕಳ್ಳತನ ಕೃತ್ಯಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಸ್ಯಾಟ್‌ಲೈಟ್ ನಿಲ್ದಾಣದ ಸಮೀಪ ಪೊಲೀಸ್‌ ಚೌಕಿ ಇದೆ. ಚಾಳಿಬಿದ್ದ ಆರೋಪಿಗಳ ಮೇಲೆ ನಿಗಾ ವಹಿಸಲಾಗಿದೆ.
 ರವಿ ಡಿ. ಚೆನ್ನಣ್ಣನವರ್‌, ಪಶ್ಚಿಮ ವಿಭಾಗದ ಡಿಸಿಪಿ

ಕಳ್ಳರಿಗೆ ಎಟಿಎಂ ಪಿನ್‌ ಸಿಕ್ಕಿದ್ದು ಹೇಗೆ?

ಪುಂಡರ ಹಾವಳಿ
ಉಷಾ ಅವರ ಎಟಿಎಂ ಕಾರ್ಡ್‌ ಅವಧಿ ಮುಕ್ತಾಯಗೊಂಡಿದ್ದ ಕಾರಣ ಇತ್ತೀಚೆಗಷ್ಟೇ ಹೊಸ ಡೆಬಿಟ್ ಕಾರ್ಡ್‌ ತರಿಸಿಕೊಂಡಿದ್ದರು. ಹೀಗಾಗಿ ಕಾರ್ಡ್‌ಜತೆಗೆ ಪಿನ್‌ನಂಬರ್‌ವುಳ್ಳ ಪತ್ರ ಕೂಡ ಬ್ಯಾಗ್‌ನಲ್ಲೇ ಇತ್ತು. ಈ ಪಿನ್‌ ನಂಬರ್‌ ಬಳಸಿ ಕಳ್ಳರು ಹಣ ಡ್ರಾ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು. ಸ್ಯಾಟ್‌ಲೈಟ್, ನಾಯಂಡಹಳ್ಳಿ ಬಸ್‌ ನಿಲ್ದಾಣ, ಅಂಡರ್‌ಪಾಸ್‌, ಮೆಟ್ರೋ ನಿಲ್ದಾಣದ ಸುತ್ತಮುತ್ತ ಸಂಜೆ ಹಾಗೂ ರಾತ್ರಿ ವೇಳೆ ಪುಂಡರು ಹಾಗೂ ಚೋರರ ಕೃತ್ಯಗಳಿಗೆ ಕಡಿವಾಣ ಬಿದ್ದಿಲ್ಲ. ಸಂಜೆಯಾಗುತ್ತಲೇ ಮೊಬೈಲ್‌ ಕಳವು, ಪ್ರಯಾಣಿಕರ ಗಮನ ಬೇರಡೆ ಸೆಳೆದು ಹಣ ದೋಚುವುದು ನಡೆಯುತ್ತಿದೆ. ಕಳ್ಳರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೂರು ದಿನಗಳ ಹಿಂದೆ ನಾಯಂಡಹಳ್ಳಿ ಬಸ್‌ ನಿಲ್ದಾಣದ ಸಮೀಪ ರಾತ್ರಿ 10 ಗಂಟೆ ಸುಮಾರಿಗೆ ಯುವತಿಯನ್ನು ಚುಡಾಯಿಸುತ್ತಿದ್ದನ್ನು ಪ್ರಶ್ನಿಸಿದ್ದ ಯುವಕನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next