ಕೆಲವು ಸಿನಿಮಾಗಳು ಬಿಡುಗಡೆಯಾದ ದಿನ ಭರ್ಜರಿ ಓಪನಿಂಗ್ ಪಡೆದು ಆ ನಂತರ ಪ್ರೇಕ್ಷಕರ ಕೊರತೆ ಎದುರಿಸುತ್ತವೆ. ಇನ್ನೊಂದಿಷ್ಟು ಸಿನಿಮಾಗಳು ಆರಂಭದಲ್ಲಿ ನಿಧಾನಗತಿಯಲ್ಲಿ ಟೇಕಾಫ್ ಆಗಿ ಆ ನಂತರ ಪ್ರೇಕ್ಷಕರನ್ನು ಸೆಳೆದು ಚಿತ್ರತಂಡದ ಮೊಗದಲ್ಲಿ ನಗುತರಿಸುತ್ತವೆ. ಇದರಲ್ಲಿ ‘ನನ್ನ ಪ್ರಕಾರ’ ಚಿತ್ರ ಎರಡನೇ ವರ್ಗಕ್ಕೆ ಸೇರುತ್ತದೆ. ಆರಂಭದಲ್ಲಿ ದೊಡ್ಡ ಅಬ್ಬರ ಮಾಡದೇ ಬಿಡುಗಡೆಯಾಗಿ ಮೆಚ್ಚುಗೆ ಪಡೆದ ಚಿತ್ರ, ಈಗ ಪ್ರೇಕ್ಷಕರನ್ನು ಸೆಳೆಯುತ್ತಾ 25ನೇ ದಿನದತ್ತ ದಾಪುಗಾಲು ಹಾಕುತ್ತಿದೆ. ಆರಂಭದಲ್ಲಿ ಹೆಚ್ಚು ಶೋ ಕೊಡಲು ಹಿಂದೇಟು ಹಾಕಿದ್ದ ಮಲ್ಟಿಪ್ಲೆಕ್ಸ್‌ಗಳು ಈಗ ‘ನನ್ನ ಪ್ರಕಾರ’ ಚಿತ್ರದ ಶೋ ಹೆಚ್ಚಿಸಿವೆ. ಜೊತೆಗೆ ಚಿತ್ರದ ತೆಲುಗು, ತಮಿಳು ಡಬ್ಬಿಂಗ್ ರೈಟ್ಸ್ ಮಾರಾಟವಾಗಿದ್ದರೆ, ಹಿಂದಿ ರೀಮೇಕ್ ರೈಟ್ಸ್ ಕುರಿತಾದ ಮಾತುಕತೆ ನಡೆಯುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಚಿತ್ರತಂಡ ಖುಷಿಯಾಗಿದೆ.
ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡುವ ನಿರ್ಮಾಪಕ ಗುರುರಾಜ್, ‘ಈಗಾಗಲೇ ತಮಿಳು, ತೆಲುಗು ಡಬ್ಬಿಂಗ್ ರೈಟ್ಸ್ ಮಾರಾಟವಾಗಿದೆ. ಹಿಂದಿ ರೀಮೇಕ್ ಮಾತುಕತೆ ನಡೆಯುತ್ತಿದೆ. ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಸೆಂಟರ್‌ಗಳಲ್ಲಿ ಸಿನಿಮಾವಿದೆ. ಈ ವಾರದಿಂದ ಬಿ.ಸಿ.ಸೆಂಟರ್‌ಗಳಲ್ಲೂ ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರಕ್ಕೆ ಹಾಕಿದ ಬಂಡವಾಳ ವಾಪಾಸ್ ಆಗಿದ್ದು, ಮುಂದೆ ಚಿತ್ರಮಂದಿರದಿಂದ ಬರುವ ಕಲೆಕ್ಷನ್ ಲಾಭ ಎನ್ನಬಹುದು’ ಎಂದು ಹೇಳಿಕೊಂಡರು.
ತಮ್ಮ ಚೊಚ್ಚಲ ಚಿತ್ರ ಹಿಟ್ಲಿಸ್ಟ್ ಸೇರಿದ್ದರಿಂದ ನಿರ್ದೇಶಕ ವಿನಯ್ ಬಾಲಾಜಿ ಖುಷಿಯಾಗಿದ್ದರು. ಸಿನಿಮಾ ನೋಡಿದವರೆಲ್ಲಾ, ಇದು ವಿನಯ್ ಅವರ ಮೊದಲ ಸಿನಿಮಾನಾ ಎಂದು ಕೇಳುತ್ತಿರುವುದರಿಂದ ಅವರ ಖುಷಿ ಮತ್ತಷ್ಟು ಹೆಚ್ಚಿದೆ. ಚಿತ್ರ 25 ದಿನ ಪೂರ್ಣಗೊಳಿಸುತ್ತಿದ್ದಂತೆ ವಿದೇಶಗಳಲ್ಲೂ ಬಿಡುಗಡೆಯಾಗಲಿದೆಯಂತೆ. ಇನ್ನು, ಪ್ರವಾಹದಿಂದ ಉತ್ತರ ಕರ್ನಾಟಕದಲ್ಲಿ ಚಿತ್ರ ಬಿಡುಗಡೆಯಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಅಲ್ಲೂ ಚಿತ್ರ ಬಿಡುಗಡೆಯಾಗಲಿದೆ. ಬೇರೆ ಭಾಷೆಯ ದೊಡ್ಡ ಸಿನಿಮಾಗಳ ಮಧ್ಯೆಯೂ ಚಿತ್ರದ ಕಲೆಕ್ಷನ್ ಚೆನ್ನಾಗಿರುವುದು ಖುಷಿ ತಂದಿದೆ ಎಂದು ವಿವರ ನೀಡಿದರು ನಿರ್ದೇಶಕ ವಿನಯ್.
ಚಿತ್ರದಲ್ಲಿ ನಟಿಸಿರುವ ಕಿಶೋರ್, ಮಯೂರಿ, ತಮ್ಮ ಸಿನಿಮಾಗಳ ಸಕ್ಸಸ್‌ಮೀಟ್ ನೋಡದೇ ತುಂಬಾ ದಿನಗಳೇ ಆಗಿತ್ತು. ಈ ಸಿನಿಮಾ ಸಕ್ಸಸ್ ಆಗಿರುವುದು ಖುಷಿ ಕೊಟ್ಟಿದೆ ಎಂದರು. ಉಳಿದಂತೆ ಚಿತ್ರದಲ್ಲಿ ನಟಿಸಿದ ಕಲಾವಿದರು ಹಾಗೂ ತಾಂತ್ರಿಕ ವರ್ಗ ಗೆಲುವನ್ನು ಸಂಭ್ರಮಿಸಿತು.