Advertisement

ಮೂರು ವರ್ಷಗಳ ಬಳಿಕ ನೀರು ತುಂಬಿಸುವಾಗ ಒಡೆಯಿತು ಟ್ಯಾಂಕ್‌

10:51 PM Mar 13, 2020 | mahesh |

ಆಲಂಕಾರು: ಕಡಬ ತಾಲೂಕು ಆಲಂಕಾರು ಪೇಟೆಯಲ್ಲಿ ಜಿಲ್ಲಾ ಪಂಚಾಯತ್‌ ಅನುದಾನದಲ್ಲಿ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕದ ನೀರಿನ ಟ್ಯಾಂಕ್‌ಗೆ ಮೂರು ವರ್ಷದ ಬಳಿಕ ನೀರು ತುಂಬಿಸಿದ ವೇಳೆ ಒಡೆದು ಹೋಗಿದ್ದು, ಕಾಮಗಾರಿ ಹಾಗೂ ಪರಿಕರಗಳು ಸಂಪೂರ್ಣವಾಗಿ ಕಳಪೆಯಾಗಿವೆಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Advertisement

ಈ ನೀರಿನ ಘಟಕದ ನಿರ್ಮಾಣ ಕಾಮಗಾರಿಯು ಆರಂಭದಿಂದಲೇ ಆಮೆಗತಿಯಲ್ಲಿ ನಡೆಯುತ್ತಿತ್ತು. ಬಳಿಕ ಕಾಮಗಾರಿಯು ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಜಿಲ್ಲಾ ಪಂಚಾಯತ್‌ನ 15 ಲಕ್ಷ ರೂ. ಅನುದಾನದೊಂದಿಗೆ 2016ರಲ್ಲಿ ಘಟಕ ನಿರ್ಮಾಣಕ್ಕೆ ಆಲಂಕಾರಿನಲ್ಲಿ ಚಾಲನೆ ನೀಡಲಾಗಿತ್ತು. ಆಲಂಕಾರಿನಲ್ಲಿ ಘಟಕ ನಿರ್ಮಾಣಕ್ಕೆ ಸೂಚಿಸಿರುವ ಸ್ಥಳ ಸೂಕ್ತವಲ್ಲ ಎಂದು ಜಿಲ್ಲಾ ಪಂಚಾಯತ್‌ ಕಾಮಗಾರಿ ಪ್ರಾರಂಭಿಸದಂತೆ ಟೆಂಡರ್‌ದಾರ ಕೆಆರ್‌ಡಿಎಲ್‌ಗೆ ಸೂಚನೆಯನ್ನು ನೀಡಿತ್ತು. ಆದರೆ ಸೂಚನೆಯನ್ನು ಧಿಕ್ಕರಿಸಿ ಆಮೆಗತಿಯಲ್ಲಿ ಸಾಗಿದ ಕಾಮಗಾರಿಯು ಒಂದು ವರ್ಷದ ಬಳಿಕ ಪೂರ್ಣಗೊಂಡಿತು. ಇದೀಗ ಕಾಮಗಾರಿ ಪೂರ್ಣಗೊಂಡು ಮೂರು ವರ್ಷದ ಬಳಿಕ ಸಿಂಟೆಕ್ಸ್‌ ಟ್ಯಾಂಕ್‌ಗೆ ನೀರು ತುಂಬಿಸಲಾಗಿತ್ತು. ನೀರಿಲ್ಲದೆ ಖಾಲಿ ಟ್ಯಾಂಕ್‌ ಮೂರು ವರ್ಷ ಬಿಸಿಲಿನಲ್ಲಿದ್ದ ಪರಿಣಾಮ ನೀರು ತುಂಬುತ್ತಿದ್ದಂತೆ ಬುಧವಾರ ರಾತ್ರಿ ಒಡೆದು ಹೋಗಿದೆ.

ಹನಿ ನೀರೂ ಸಿಕ್ಕಿಲ್ಲ!
ಪುತ್ತೂರು ತಾಲೂಕಿನ 13 ಕಡೆಗಳಲ್ಲಿ ಇದೇ ಮಾದರಿಯ ಶುದ್ಧ ನೀರಿನ ಘಟಕ ನಿರ್ಮಿಸಲಾಗಿತ್ತು. ಕೆಲವೊಂದು ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಮತ್ತೆ ಹಲವು ಕಡೆಗಳಲ್ಲಿ ಇನ್ನೂ ಕಾಮಗಾರಿ ಪ್ರಗತಿಯಲ್ಲಿದೆ. ಕೆಲವು ಘಟಕಗಳ ಕಾಮಗಾರಿ ಪೂರ್ಣಗೊಂಡಿದ್ದರೂ ಇದೀಗ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಅಂತಹ ಘಟಕಗಳನ್ನು ದುರಸ್ತಿಗೊಳಿಸಿ ಘಟಕಗಳ ಮಾಹಿತಿ ಬಂದ ತತ್‌ಕ್ಷಣ ಸ್ಥಳೀಯಾಡಳಿತದ ಅಧೀನಕ್ಕೊಳಪಡಿಸಿ 5 ವರ್ಷದ ಅವಧಿಯ ನಿರ್ವಹಣೆಗಾಗಿ ಟೆಂಡರ್‌ ಕರೆಯಲಾಗುವುದು ಎಂದು ಕೆಆರ್‌ಡಿಎಲ್‌ನ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಮಹಾದೇವ ಪ್ರಸಾದ್‌ ಪತ್ರಿಕೆಯಲ್ಲಿ ಘಟಕದ ಕಾರ್ಯಯೋಜನೆಯ ಬಗ್ಗೆ 2017ರ ಜೂನ್‌ ತಿಂಗಳಲ್ಲಿ ಮಾಹಿತಿ ನೀಡಿದ್ದರು. ತಾಲೂಕಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದ ಈ ಯೋಜನೆಗಳು ಕಳೆದ 3 ವರ್ಷದಿಂದ ಬಿಸಿಲು, ಮಳೆ, ಗಾಳಿಗೆ ಮೈಯೊಡ್ಡಿ ನಿಂತಿದ್ದು, ಇದುವರೆಗೆ ಒಂದೇ ಒಂದು ಹನಿ ಶುದ್ಧ ನೀರು ಹೊರಗೆ ಬಂದಿಲ್ಲವಾಗಿದೆ. ಇದರ ಬಗ್ಗೆ ಸ್ಪಷ್ಟ ಮಾಹಿತಿಗಳು ಇಲ್ಲವಾದರೂ 1 ರೂ. ನಾಣ್ಯ ಹಾಕಿದರೆ ಒಂದು ಲೀಟರ್‌ ನೀರು ಬರುತ್ತದೆ ಎಂಬ ಪಂಚತಂತ್ರ ಕಥೆ ಮಾತ್ರ ಹೇಳುತ್ತಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಜಿ.ಪಂ.ಗೆ ಬರೆಯಲಾಗುವುದು
ನೀರಿನ ಘಟಕವನ್ನು ಗ್ರಾಮ ಪಂಚಾಯತ್‌ಗೆ ಹಸ್ತಾಂತರ ಮಾಡುವ ಬಗ್ಗೆ ಯಾವುದೇ ಮಾಹಿತಿಯನ್ನು ಗುತ್ತಿಗೆದಾರರು ನೀಡಿಲ್ಲ ಮತ್ತು ಘಟಕದ ಸ್ಥಿತಿಗತಿಯ ಬಗ್ಗೆ ಗ್ರಾ.ಪಂ.ಗೆ ಯಾವುದೇ ಮಾಹಿತಿಗಳಿಲ್ಲ. ಘಟಕದಲ್ಲಿ ಬಾಕಿಯಿರುವ ಎಲ್ಲ ಕಾಮಗಾರಿಯನ್ನು ಸಮರ್ಪಕವಾಗಿ ಮುಗಿಸಿ ಗ್ರಾಮ ಪಂಚಾಯತ್‌ಗೆ ಹಸ್ತಾಂತರ ಮಾಡಿಕೊಟ್ಟಲ್ಲಿ ಘಟಕಕ್ಕೆ ನೀರು ಮಾತ್ರ ಸರಬರಾಜು ಮಾಡಲು ಗ್ರಾಮ ಪಂಚಾಯತ್‌ ಉತ್ಸುಕವಾಗಿತ್ತು. ಬಾಕಿಯಿರುವ ಕಾಮಗಾರಿಯನ್ನು ಮುಗಿಸಿ ಘಟಕದ ಕಾರ್ಯದಕ್ಷತೆಯನ್ನು ಪರೀಕ್ಷಿಸುವ ಉದ್ದೇಶದಿಂದ ಟ್ಯಾಂಕ್‌ಗೆ ನೀರು ತುಂಬಿಸಿದ್ದಾರೆ ಎಂಬ ಮಾಹಿತಿಗಳಿವೆ. ಆದರೆ ನೀರು ತುಂಬಿದ ಟ್ಯಾಂಕ್‌ ಒಡೆದು ಹೋಗಿದ್ದು ಈ ಬಗ್ಗೆ ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಬರೆಯಲಾಗುವುದು ಎಂದು ಆಲಂಕಾರು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಜಗನ್ನಾಥ ಶೆಟ್ಟಿ ಪ್ರತಿಕ್ರಿಯಿಸಿದರು.

ಕಾಮಗಾರಿ ಪ್ರಾರಂಭಿಸದಂತೆ ಜಿ. ಪಂ. ಸೂಚಿಸಿತ್ತು
ದಕ್ಷಿಣ ಕನ್ನಡ ಜಿಲ್ಲೆಗೆ ಇದು ಸೂಕ್ತವಾದ ಯೋಜನೆಯಲ್ಲ. ಈವರೆಗೆ ಪಂಚಾಯತ್‌ರಾಜ್‌ಎಂಜಿನಿಯರಿಂಗ್‌ ಇಲಾಖೆ ಮಾತ್ರ ಈ ಕಾಮಗಾರಿಯನ್ನು ಸುಸೂತ್ರವಾಗಿ ನಿರ್ಮಿಸಿಕೊಟ್ಟಿದೆ. ಜಿಲ್ಲೆಯ 13 ಸ್ಥಳಗಳಲ್ಲಿ ಕೆಆರ್‌ಡಿಎಲ್‌ ಯೋಜನೆಯ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಎಲ್ಲಿಯೂ ಸಮರ್ಪಕವಾಗಿ ನಿರ್ಮಿಸಿಲ್ಲ. ಆಲಂಕಾರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಪ್ರಾರಂಭದಲ್ಲೇ ಸ್ಥಳೀಯರ ಆಕ್ಷೇಪವಿದ್ದ ಕಾರಣ ಕಾಮಗಾರಿಯನ್ನು ಪ್ರಾರಂಭಿಸದಂತೆ ಜಿ.ಪಂ. ಕೆಆರ್‌ಡಿಎಲ್‌ಗೆ ಸೂಚಿಸಿತ್ತು.

Advertisement

 ಸಾಮಾನ್ಯ ಸಭೆಯಲ್ಲಿ ಚರ್ಚಿಸುವೆ
ಕಾಮಗಾರಿಯನ್ನು ಜಿ.ಪಂ.ನ ಗಮನಕ್ಕೆ ತಾರದೆ ನಿರ್ಮಿಸಲಾಗಿದೆ. ಮುಂದಿನ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಸಮಗ್ರವಾಗಿ ಚರ್ಚಿಸಿ ಈ ಘಟಕದ ಕಾಮಗಾರಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
 -ಪ್ರಮೀಳಾ ಜನಾರ್ದನ್‌, ಜಿ.ಪಂ. ಸದಸ್ಯೆ

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next