Advertisement
ಅದು, ಇಸವಿ 2007ರ ಅಕ್ಟೋಬರ್ ತಿಂಗಳಿನ ಒಂದು ದಿನ. ಪೂನಾ ದಲ್ಲಿ ವಾಸ ವಿದ್ದ ನಾನು, ಮುಂಬಯಿಗೆ ಬಂದಿದ್ದೆ. ಅಲ್ಲಿ, ಇಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕರಿಗೆ ಒಂದು ವಾರದ ತರಬೇತಿ ಶಿಬಿರ ನಡೆಸಬೇಕಿತ್ತು. ತರಗತಿ ಮುಗಿಸಿ ಹೋಟೆಲಿಗೆ ಬಂದವಳು, ನಿಲುವುಗನ್ನಡಿಯಲ್ಲಿ ನೋಡಿಕೊಂಡು- “ವಾಹ್, ನಾನು ತುಂಬಾ ಮುದ್ದಾಗಿ ಕಾಣಿ¤ದೀನಿ. ನನಗೆ 58 ವರ್ಷ ಆಗಿದೆ ಅಂತ ಸಾಕ್ಷಾತ್ ಬ್ರಹ್ಮನೂ ಹೇಳಲಾರ. ಈಗಷ್ಟೇ 40 ತುಂಬಿದೆ ಅನ್ನಬೇಕು. ಅಷ್ಟು ಯಂಗ್ ಆಗಿ ಕಾಣಿಸ್ತಿದೀನಿ’ ಅಂದುಕೊಂಡೆ. ಆಗಲೇ- ನನ್ನ ಸೌಂದರ್ಯದ ಬಗ್ಗೆ ಪರಿಚಿತರು, ಬಂಧುಗಳು, ಸಹೋದ್ಯೋಗಿಗಳು ಮತ್ತು ನನ್ನ ವಿದ್ಯಾರ್ಥಿಗಳು – ತಮ್ಮತಮ್ಮೊಳಗೇ ಪಿಸುಗುಟ್ಟಿ ಕೊಳ್ಳುತ್ತಿದ್ದುದು ನೆನಪಾಯಿತು. ಹತ್ತು ಮಂದಿ ಆಸೆಯಿಂದ ನೋಡುವಷ್ಟರಮಟ್ಟಿಗೆ ಸೌಂದರ್ಯ ಕಾಪಾಡಿಕೊಂಡಿದೀನಲ್ಲ – ನಾನು ಗ್ರೇಟ್, ಅಂದುಕೊಳ್ಳುತ್ತಾ ಬಟ್ಟೆ ಬದಲಿಸಲು ಮುಂದಾದೆ. ಶಾಕ್ ಹೊಡೆದಂತೆ ನಾನು ತತ್ತ ರಿ ಸಿದ್ದು ಆಗಲೇ. ಕಾರಣ ನನ್ನ ಎದೆಯ ಮೇಲೊಂದು ಕೆಂಪಗಿನ ಗಂಟು ಕಾಣಿಸಿತ್ತು! ಹಿಂದಿನ ದಿನ ಬಟ್ಟೆ ಬದಲಿಸುವಾಗ ಅದು ಕಂಡಿರಲಿಲ್ಲ. ಒಂದೇ ದಿನದಲ್ಲಿ, ಯಾಕಿಂಥ ಬದಲಾವಣೆ ಆಯ್ತು ಎಂಬ ಗೊಂದಲದಲ್ಲೇ ತರಬೇತಿ ಶಿಬಿರ ಮುಗಿಸಿದೆ. ಆ ಗಂಟು ಇದ್ದ ಜಾಗದಲ್ಲಿ ನೋವಾಗಲಿ, ಕೆರೆತವಾಗಲಿ, ಉರಿಯಾಗಲಿ ಇರಲಿಲ್ಲ. ಆದರೂ ಯಾಕೋ ಭಯ, ಏನೋ ಸಂಶಯ. ಶಿಬಿರದಿಂದ ಪುಣೆಗೆ ಬಂದವಳೇ, ಸರ್ಜನ್ ಒಬ್ಬರ ಬಳಿ ನನ್ನ ದುಗುಡ ಹೇಳಿಕೊಂಡೆ. ಅವರು- “ಯಾವುದಕ್ಕೂ ಒಮ್ಮೆ ಬ್ಲಿಡ್ ಟೆಸ್ಟ್ ಮಾಡೋಣ. ಏನೇ ತೊಂದರೆ ಇದ್ರೂ ಗೊತ್ತಾಗುತ್ತೆ’ ಅಂದರು. ಮರು ದಿನವೇ ಆಸ್ಪತ್ರೆಯಿಂದ ಕೆಟ್ಟ ಸುದ್ದಿ ಬಂತು: ನಿಮಗೆ ಸ್ತನ ಕ್ಯಾನ್ಸರ್ ಇದೆ!
Related Articles
Advertisement
ಕೀಮೋಥೆರಪಿಯನ್ನು ಯಶಸ್ವಿಯಾಗಿ ಮುಗಿಸಿದರೆ, ಅರ್ಧಯುದ್ಧ ಗೆದ್ದಂತೆ. ಆದರೆ ಯಾವ ಕಾರಣಕ್ಕೂ ಮೈಮರೆಯುವ ಹಾಗಿಲ್ಲ. ಈ ಸಂಗತಿ ಅರ್ಥವಾದ ಮೇಲೆ, ಪಥ್ಯಗಳನ್ನು ಪಾಲಿಸಲು ಮುಂದಾದೆ. ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡೆ.
ಅಂದಹಾಗೆ, ನನ್ನಲ್ಲಿ ಕ್ಯಾನ್ಸರ್ ಪತ್ತೆಯಾದದ್ದು 2007ರಲ್ಲಿ. ಎರಡು ವರ್ಷ ಕಾಲ ಸತತವಾಗಿ ಚಿಕಿತ್ಸೆ ಪಡೆದ ನಂತರ, ಅಂದರೆ 2009ರ ಕೊನೆಗೆ- ಕ್ಯಾನ್ಸರ್ ಕಣಗಳೆಲ್ಲ ನಾಶವಾಗಿವೆ. ನೀವೀಗ ಕ್ಯಾನ್ಸರ್‌ನ, ಆ ಮೂಲಕ ಸಾವನ್ನು ಗೆದ್ದಿದ್ದೀರಿ ಎಂದರು ಡಾಕ್ಟರ್. ಈ ಸುದ್ದಿ ಕೇಳಿ, ಖುಷಿ ಯಿಂದ ಕುಣಿಯಬೇಕು ಅನಿಸ್ತಾ ಇತ್ತು. ಆದರೆ ದೇಹ ಸಹಕರಿಸ್ತಾ ಇರಲಿಲ್ಲ. ಹತ್ತು ಹೆಜ್ಜೆ ನಡೆದರೆ ಸಾಕು; ಸುಸ್ತಾಗುತ್ತಿತ್ತು. 2ು ಮಹಡಿ ಹತ್ತುವಷ್ಟರಲ್ಲಿ ಉಬ್ಬಸ . ಜೊತೆಗೆ, ಎದೆಯ ಭಾಗದಲ್ಲಿ ಸಣ್ಣಗೆ ನೋವು.
ಮುಂದಿನ ಭೇಟಿಯಲ್ಲಿ, ಡಾಕ್ಟರಿಗೆ ಇದನ್ನೇ ಹೇಳಿದೆ.ಎರಡು ವರ್ಷ ನಿರಂತರವಾಗಿ ಔಷಧಿ ತಗೊಂಡಿದೀರ ಅಲ್ವ? ಅದಕ್ಕೇ ಹೀಗಾಗಿರಬೇಕು. ಯಾವುದಕ್ಕೂ ಒಮ್ಮೆ “ಇಕೋ’ ಟೆಸ್ಟ್ ಮಾಡಿಬಿಡೋಣ. ಎಲ್ಲಾ ಕ್ಲಿಯರ್ ಆಗಿ ಗೊತ್ತಾಗುತ್ತೆ’ ಅಂದರು ಡಾಕ್ಟರ್. ಮರುದಿನ ಲ್ಯಾಬ್ ರಿಪೋರ್ಟ್ ಪಡೆಯಲು ಹೋದಾಗ, ವೈದ್ಯರ ಮುಖ ಕಳೆಗುಂದಿತ್ತು. ಅವರು ಹೇಳಿದರು: ಹೃದಯದಲ್ಲಿ ಎಡ ಹೃತುRಕ್ಷಿ ಮತ್ತು ಬಲ ಹೃತುಕ್ಷಿ ಎಂಬ ಭಾಗಗಳಿವೆ. ಎಡ ಹೃತುRಕ್ಷಿಯಲ್ಲಿ 100 ಎಂ.ಎಲ್.ನಷ್ಟು ರಕ್ತ ಶೇಖರಣೆಯಾದರೆ, ಅದರಲ್ಲಿ 70 ಎಂ.ಎಲ್.ನಷ್ಟು ರಕ್ತ ಬಲ ಹೃತುRಕ್ಷಿಯ ಮೂಲಕ ಪಂಪ್ ಆಗಿ ಹೊರಗೆ ಬರುತ್ತೆ. ಇದು ಆರೋಗ್ಯವಂತ ಹೃದಯದ ಲಕ್ಷಣ. ಆದರೆ ನಿಮ್ಮ ಹೃದಯದಲ್ಲಿ ಶೇಖರ ವಾಗುವ ಮತ್ತು ಆಚೆ ಬರುವ ರಕ್ತದ ಪ್ರಮಾಣದಲ್ಲಿ ವ್ಯತ್ಯಾಸ ಇದೆ. ಪಂಪ್ ಆಗಿ ಹೊರಗೆ ಬರುವ ರಕ್ತದ ಪ್ರಮಾಣ ಕಡಿಮೆ ಇರುವುದರಿಂದ ಹೃದಯದ ಎಲ್ಲಾ ಮಾಂಸಖಂಡಗಳಿಗೂ ಸರಿಯಾಗಿ ರಕ್ತ ಸರಬರಾಜು ಆಗ್ತಾ ಇಲ್ಲ. ಅಂದ ರೆ- ಹೃದಯ ಹಾಳಾಗಿದೆ ಎಂದು ಅರ್ಥ…
ಆನಂತರದಲ್ಲಿ ಪೂರ್ತಿ ಎರಡು ತಿಂಗಳು ಆಸ್ಪತ್ರೆ ವಾಸ. ಅದೇನೇನು ಚಿಕಿತ್ಸೆ ಮಾಡಿದರೋ; ವೈದ್ಯರಿಗಷ್ಟೇ ಗೊತ್ತು. ಅವರಿಗೆ ದೇಹವನ್ನೂ, ಜೀವವನ್ನೂ ಒಪ್ಪಿಸಿ- ಏನಾಗುತ್ತೋ ಆಗಲಿ ಎಂದುಕೊಂಡು ಮಲಗಿಬಿಟ್ಟಿದ್ದೆ. “ಮೇಡಂ, ಕೀಮೋಥೆರಪಿಗೆ ಟ್ರೀಟ್‌ಮೆಂಟ್ ತಗೊಳ್ತಾ ಇದ್ರಿ ಅಲ್ವ? ಆಗ ಯಾವುದೋ ಒಂದು ಔಷಧಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟುಬಿಟ್ಟಿದ್ದಾರೆ. ಅದರ ಸೈಡ್‌ಎಫೆಕ್ಟ್‌ನ ರೂಪದಲ್ಲಿ ನಿಮ್ಮ ಹೃದಯಕ್ಕೆ ವಿಪರೀತ ಡ್ಯಾಮೇಜ್ ಆಗಿಹೋಗಿತ್ತು. ಅಗತ್ಯವಿದ್ದ ಎಲ್ಲ ಚಿಕಿತ್ಸೆಯನ್ನೂ ನೀಡಿದ್ದೀವಿ. ಇನ್ಮುಂದೆ ನೀವು ಹೆಚ್ಚು ದೂರ ನಡೆಯಬಾರದು. ಮೆಟ್ಟಿಲು ಹತ್ತಬಾರದು. ಹೆಚ್ಚು ಹೊತ್ತು ನಿಂತಿರಬಾರದು. ಜಾಸ್ತಿ ದುಃಖೀಸಬಾರದು’ ಎಂದೆಲ್ಲ ಎಚ್ಚರಿಕೆ ನೀಡಿ ಡಿಸ್‌ಚಾರ್ಜ್ ಮಾಡಿದರು. ಅವತ್ತಿನವರೆಗೂ ದಿನಕ್ಕೆ 16 ಗಂಟೆಗಳ ಕಾಲ ಅದೂ ಇದೂ ಕೆಲಸ ಮಾಡುತ್ತಾ ಬ್ಯುಸಿಯಾಗಿದ್ದವಳು, ದಿಢೀರ್ ಬದಲಾದ ಸಂದರ್ಭಕ್ಕೆ ಅದು ಹೇಗೋ ಒಗ್ಗಿಕೊಂಡೆ.
ದಿನಗಳು, ತಿಂಗಳುಗಳು, ವರ್ಷಗಳು ಉರುಳಿದವು. 2018ರಲ್ಲಿ ಮತ್ತೆ ಎದೆನೋವು ಕಾಣಿಸಿಕೊಂಡಿತು. ಈ ವೇಳೆಗಾಗಲೇ ಎರಡು ಬಾರಿ ಜೀವದಾನವಾಗಿತ್ತಲ್ಲ; ಹಾಗಾಗಿ, ಮೂರನೇ ಬಾರಿಯೂ ಆಸ್ಪತ್ರೆಯಿಂದ ಮನೆಗೆ ಮರಳುವ ವಿಶ್ವಾಸ ನನಗೇ ಇರಲಿಲ್ಲ. ಹಾಗೆಯೇ, ಸತ್ತು ಹೋಗ್ತಿà ನಲ್ಲ ಎಂಬ ಸಂಕ ಟವೂ ಇರ ಲಿಲ್ಲ. ಜೀವ ಬಿಡುವ ಮುನ್ನ ಕುಟುಂಬದವರನ್ನೆಲ್ಲ ಕಣ್ತುಂಬ ನೋಡಿಬಿಡಬೇಕು ಅನ್ನಿಸಿತು. ಬಂಧುಗಳು, ಗೆಳೆಯರನ್ನು ಆಸ್ಪತ್ರೆಗೇ ಕರೆಸಿಕೊಂಡೆ. ಇದು ಕಡೆಯ ಭೇಟಿ-ಅನ್ನುತ್ತಲೇ ಎಲ್ಲರೊಂದಿಗೆ ಮಾತಾಡಿದೆ. ಬಂಧುಗಳೆಲ್ಲ- “ಅಯ್ಯೋ ಯಾಕೆ ಕೆಟ್ಟ ಮಾತಾಡ್ತೀರಿ? ನಿಮ್ಗೆàನೂ ಆಗಲ್ಲ’ ಎನ್ನುತ್ತಿದ್ದರು. ಆದರೆ ಆ ಮಾತುಗಳ ಮೇಲೆ, ಅವರಿಗೇ ನಂಬಿಕೆ ಇರಲಿಲ್ಲ.
ಈ ಮಧ್ಯೆ, ಹಾಳಾಗಿರುವ ಹೃದಯವನ್ನು ತೆಗೆದುಹಾಕಿ, ಬದಲಿ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಬಿಡಿ ಎಂಬ ಸಲಹೆಯೂ ಬಂತು. ಆದರೆ, 69ನೇ ವಯಸ್ಸಿನಲ್ಲಿ, ಬದಲಿ ಹೃದಯದ ಶಸ್ತ್ರಚಿಕಿತ್ಸೆ ಯಶಸ್ವಿ ಯಾಗುವ ಬಗ್ಗೆ ವೈದ್ಯರಿಗೂ ಗ್ಯಾರಂಟಿ ಇರಲಿಲ್ಲ. “ಛಾನ್ಸಸ್ ಫಿಫ್ಟಿ-ಫಿಫ್ಟಿ. ಒಂದು ರಿಸ್ಕ್ ತಗೊಳ್ಳುವಾ’ ಎಂಬ ಮಾತುಗಳಷ್ಟೇ ನನ್ನ ಕಿವಿಗೆ ಬಿದ್ದವು. ಈ ನಡುವೆ- “ದಾನಿಯ ಹೃದಯವೊಂದು ಸಿಕ್ಕಿದೆ. ಬದಲಿ ಹೃದಯ ಜೋಡಣೆ ಶಸ್ತ್ರಚಿಕಿತ್ಸೆಯಲ್ಲಿ ಹೆಸರು ಮಾಡಿರುವ ಡಾ. ಕೆ.ಆರ್. ಬಾಲಕೃಷ್ಣನ್, ಡಾ. ಸುಂದರ್ ರಾವ್‌ರ ತಂಡ ಸಜ್ಜಾಗಿದೆ. ತಕ್ಷಣ ಚೆನ್ನೆçನ ಮಲಾರ್ ಆಸ್ಪತ್ರೆಗೆ ಬನ್ನಿ’ ಎಂಬ ಸಂದೇಶ ಬಂತು. ಕೆಲವೇ ಗಂಟೆಗಳಲ್ಲಿ ನಾನೂ, ಬಂಧುಗಳೂ ವಿಮಾನದ ಮೂಲಕ ಚೆನ್ನೆ ç ತಲುಪಿದೆವು.
ಹೌದು, ನನ್ನ ಬದುಕಿನಲ್ಲಿ ಮತ್ತೂಮ್ಮೆ ಪವಾಡ ನಡೆಯಿತು. ಎಲ್ಲ ಲೆಕ್ಕಾಚಾರಗಳನ್ನೂ ಮೀರಿ, ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು. 69ನೇ ವಯಸ್ಸಿನ, ಅದೂ ಕ್ಯಾನ್ಸರ್‌ನಿಂದ ಜರ್ಝರಿತಗೊಂಡ ಹೆಣ್ಣಿನ ದೇಹ, ಬದಲಿ ಹೃದಯ ಜೋಡಣೆಯಂಥ ಶಸ್ತ್ರಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ತೀರಾ ವಿರಳ. ಅಂಥ ಕೇಸ್‌ಗಳಲ್ಲಿ ನನ್ನದೂ ಒಂದು ಅಂದುಕೊಂಡಾಗ, ನಾನು ಅದೃಷ್ಟವಂತೆ ಎಂಬ ಹೆಮ್ಮೆ ಜೊತೆ ಯಾಗುತ್ತದೆ. ಆಸ್ಪತ್ರೆಗೆ ಬರುವ ಎಲ್ಲ ಜೀವಿಗಳ ಬದುಕಲ್ಲೂ ಇಂಥ ಪವಾಡಗಳು ನಡೆಯುವಂತೆ ಮಾಡಪ್ಪಾ ದೇವರೇ ಎಂದು ಸದಾ ಪ್ರಾರ್ಥಿಸುತ್ತದೆ. ನಡೆದುದನ್ನೆಲ್ಲಾ ನೆನಪಿಸಿಕೊಂಡು ನಗುತ್ತಾ, ನಡುಗುತ್ತಾ, ಬೆರಗಾಗುತ್ತಾ, ಬೆಚ್ಚಿಬೀಳುತ್ತಾ, ಯಮರಾಜನ ತೆಕ್ಕೆಯಿಂದ ಎರಡಲ್ಲ, ಮೂರನೇ ಬಾರಿಯೂ ತಪ್ಪಿಸಿಕೊಂಡೆ ಎಂದುಕೊಳ್ಳುವಾಗಲೇ, ಅಪ್ಪ ಹೇಳಿದ್ದ ಮಾತು ನೆನಪಾಗುತ್ತದೆ: “ನಿನಗೆ ದೀರ್ಘಾಯುಷ್ಯವಿದೆ. 90 ವರ್ಷ ಬದುಕಿರಿಯ…’
ಮಾಹಿತಿ ಸೌಜನ್ಯ: ರೀಡರ್ಸ್ ಡೈಜೆಸ್ಟ್
ಎ.ಆರ್.ಮಣಿಕಾಂತ್