Advertisement

ಮೂರು ಬಾರಿ ವಧುಪರೀಕ್ಷೆ ಒಬ್ಬನೇ ವರನೊಂದಿಗೆ!

09:47 AM Mar 19, 2020 | mahesh |

ಆಗ ನಾವಿಬ್ಬರೂ ಉದ್ಯೋಗದಲ್ಲಿದ್ದ ಕಾರಣ, ನಮ್ಮಿಬ್ಬರ ಮನೆಯವರು ಯುಗಾದಿ ಹಬ್ಬದ ರಜೆಯನ್ನು ವಧು ಪರೀಕ್ಷೆಗೆ ಗೊತ್ತು ಮಾಡಿದ್ದರು. ಇಬ್ಬರಿಗೂ ಸಮೀಪವಾಗಲೆಂದು ನನ್ನಜ್ಜನ ಊರಾದ ಜಂಗಮನಕೊಪ್ಪದಲ್ಲಿ ಹುಡುಗಿ ತೋರಿಸುವ ಶಾಸ್ತ್ರ ನಿಶ್ಚಯವಾಯ್ತು. ಅವತ್ತು ಅಜ್ಜನ ಮನೆಯು ಸೋದರ ಮಾವ, ಅತ್ತೆ, ಚಿಕ್ಕಮ್ಮ, ದೊಡ್ಡಮ್ಮ, ಅಣ್ಣ, ಅತ್ತಿಗೆ…. ಹೀಗೆ ಎಲ್ಲ ಬಂಧುಗಳಿಂದ ತುಂಬಿ ಹೋಯ್ತು. ಮೊದಲೇ ಇಂಥ ಶಾಸ್ತ್ರಗಳನ್ನು ಇಷ್ಟಪಡದಿದ್ದ ನಾನು, ಎಲ್ಲರ ಮುಂದೆ ಬೇಸರ, ಕೋಪ ತೋರಿಸಿಕೊಳ್ಳಲಾಗದೆ ವಧು ಪರೀಕ್ಷೆಗೆ ತಯಾರಾದೆ.

Advertisement

ಯುಗಾದಿಯ ದಿನ ಬೆಳಗ್ಗೆ ಮನೆಯಲ್ಲಿ ಸಡಗರ. 12ಗಂಟೆಗೆ ಹುಡುಗನ ಕಡೆಯವರು ಬರುತ್ತೇವೆ ಎಂದು ಹೇಳಿದ್ದರಿಂದ ನನ್ನನ್ನು ಅತ್ತೆ, ಅತ್ತಿಗೆ ಮತ್ತು ಚಿಕ್ಕಮ್ಮ 11 ಗಂಟೆಗೇ ತಯಾರು ಮಾಡಿದ್ದರು. ಗಂಟೆ ಹನ್ನೆರಡಾಯ್ತು, 2 ಆಯ್ತು….3 ಗಂಟೆ ಆಯ್ತು….ಹುಡುಗನ ಕಡೆಯವರ ಸುಳಿವೇ ಇಲ್ಲ. ಅಷ್ಟು ಬೇಗ ತಯಾರಾಗಿ ಕುಳಿತಿದ್ದ ನನಗೆ, ಬಳಲಿಕೆ, ಕೋಪ ಒಟ್ಟಿಗೆ ಉಂಟಾದವು. “ಈಗ್ಲೆ ಟೈಂ ಸೆನ್ಸ್ ಇಲ್ಲದಿದ್ರೆ ಮುಂದೆ ಹೇಗಪ್ಪಾ?’ ಎಂದು ಅಪ್ಪನಲ್ಲಿ ದೂರಿದ್ದೆ. ಎಲ್ಲರೂ ನನ್ನನ್ನು ಸಮಾಧಾನ ಪಡಿಸುತ್ತಿದ್ದರು.

ಕೊನೆಗೂ 4 ಗಂಟೆಗೆ ಹುಡುಗನ ಮನೆಯವರ ಆಗಮನವಾಯ್ತು. ಹುಡುಗನಿಗೆ ಇದು ಮೊದಲ ವಧು ಪರೀಕ್ಷೆ. ಹುಡುಗನ ಕಡೆಯೂ ದೊಡ್ಡ ಪಡೆಯೇ ಬಂದಿತ್ತು. ಬಂದವರನ್ನು ನನ್ನ ಅಜ್ಜನ ಕೋಣೆಯಲ್ಲಿ ಕುಳ್ಳಿರಿಸಲಾಯ್ತು. ಅತ್ತಿಗೆ, ಅತ್ತೆ ನನ್ನ ಕರೆದೊಯ್ದು ಹುಡುಗನ ಕಡೆಯವರ ಮುಂದೆ ಕೂರಿಸಿದರು. ಸಂಕೋಚ, ಅಂಜಿಕೆಯಲ್ಲಿ ಹುಡುಗನನ್ನು ನೋಡಲಾಗಲಿಲ್ಲ. ಬರೀ ಹುಡುಗನ ತಂದೆಯೇ ಪ್ರಶ್ನೆ ಕೇಳುತ್ತಿದ್ದರು. ಅಳುಕುತ್ತಲೇ ಅವರ ಪ್ರಶ್ನೆಗಳಿಗೆ ಉತ್ತರಿಸಿ ಎದ್ದು ಬಂದೆ. ಬಳಿಕ ಅತ್ತಿಗೆ, “ಹುಡುಗನನ್ನು ನೋಡಿದ್ಯೋ ಇಲ್ವೋ? ಆಮೇಲೆ ನೋಡಿಲ್ಲ ಅಂತ ನೆಪ ಹೇಳಬೇಡ’ ಅಂತ ಛೇಡಿಸಿದರು. ನಾನು “ಇಲ್ಲ, ನೋಡಲಿಲ್ಲ’ ಅಂತ ತಲೆ ಆಡಿಸಿದೆ. ತಕ್ಷಣ “ನೀನೆಂಥ ಇಂಜಿನಿಯರ್ರೆà? ಇಷ್ಟು ನಾಚಿಕೊಂಡ್ರೆ ಹೇಗೆ?’ ಎಂದು ಬೈದು ಪಕ್ಕದ ಕೋಣೆಯ ಕಿಟಕಿಯ ಪರದೆ ಸರಿಸಿ, “ಇಲ್ಲಿಂದ ನೋಡು ಬಾ’ ಎಂದು ಕರೆದರು. ಅಂಜುತ್ತಲೇ ಬಗ್ಗಿದಾಗ ಹುಡುಗನ ಕಣ್ಣುಗಳು ಸಂಧಿಸಬೇಕೇ? ಇದು ಬೇಕಿತ್ತಾ? ಎಂದು ಬೈದುಕೊಂಡು ಹಿಂದೆ ಸರಿದೆ. ಉಪ್ಪಿಟ್ಟು ಚಹಾ ಆದ ಬಳಿಕ ಹುಡುಗನ ಕಡೆಯವರೆಲ್ಲ ಹೊರಟು ನಿಂತರು. ಹುಡುಗನ ತಂದೆ “ಊರಿಗೆ ಹೋಗಿ ತಿಳಿಸುತ್ತೇವೆ’ ಎಂದು ಹೇಳಿದರು.

ರಜೆ ಇರದಿದ್ದ ಕಾರಣ, ನಾನು ಅಪ್ಪ, ಅಮ್ಮ ತಮ್ಮನೊಂದಿಗೆ ಮಂಡ್ಯಕ್ಕೆ ಹೊರಡಲು ತಯಾರಾಗುತ್ತಿದ್ದೆ. ರಾತ್ರಿ ಅಜ್ಜನಿಗೆ ಹುಡುಗನ ಕಡೆಯಿಂದ ಫೋನು ಬಂತು. ಹುಡುಗನ ತಂದೆ, “ನಮ್ಮ ಹುಡುಗ ಇನ್ನೊಮ್ಮೆ ಹುಡುಗಿಯನ್ನು ನೋಡಿ ಮಾತಾಡಿಸಬೇಕಂತೆ’ ಎಂದು ವಿನಂತಿಸಿದಾಗ ಅಜ್ಜ ಒಪ್ಪಿಗೆ ಕೊಟ್ಟರು. ನಾನು ಮನಸಿನಲ್ಲೇ ಬೈದುಕೊಂಡೇ ಒಂದೇ ಸಲ ನೋಡಿ ಹೋಗಲಿಕ್ಕೆ ಆಗ್ಲಿಲ್ವಾ ಹುಡುಗನಿಗೆ ಅಂತ. ನನ್ನ ಮಂಡ್ಯ ಪ್ರಯಾಣ ರದ್ದಾಯಿತು.

ಮರುದಿನ ಹುಡುಗ, ಹುಡುಗನ ತಮ್ಮ, ಮತ್ತವನ ಸ್ನೇಹಿತರು ಬಂದರು. ಹುಡುಗನ ಸ್ನೇಹಿತರು ಮಾತನಾಡಿಸಿ- “ಸರಿ ಹುಡುಗಿಯನ್ನು ಕರೆದುಕೊಂಡು ಹೋಗಿ’ ಅಂದರು. ನಾವು ಅಜ್ಜನ ರೂಮಿನಿಂದ ಹೊರಗೆ ಬಂದಾಗ ಅತ್ತೆ, ಅತ್ತಿಗೆ ಮುಸಿಮುಸಿ ನಗುತ್ತಿದ್ದರು. ನಾನು ಯಾಕೆ ಅಂತ ಕೇಳಲು, ನಮ್ಮಿಬ್ಬರಿಗೂ ಮಾತನಾಡಲು ಬೇವಿನ ಮರದ ಕೆಳಗೆ ಹಾಕಿದ ಖುರ್ಚಿಯಲ್ಲಿ ನನ್ನಜ್ಜ, ಅಜ್ಜಿ ಆಸೀನರಾಗಿ ಉಭಯ ಕುಶಲೋಪರಿ ವಿಚಾರಿಸುತ್ತಾ ಮಾತಾಡುತ್ತಿದ್ದರು. ನನಗೆ ಒಳಗೊಳಗೇ ಖುಷಿಯಾಯಿತು. ಸದ್ಯ, ಹುಡುಗನೊಡನೆ ಮಾತಾಡುವುದು ತಪ್ಪಿತು ಎಂದು. ನಮ್ಮಿಬ್ಬರಿಗೆ ಮಾತಾಡಲು ಬೇರೆ ಸ್ಥಳ ವ್ಯವಸ್ಥೆ ಮಾಡಲು ಸೋದರ ಮಾವ ಯೋಚಿಸುತ್ತಿದ್ದಂತೆ ಹುಡುಗ ಮತ್ತವನ ಕಡೆಯವರು ಹೊರತು ನಿಂತರು.

Advertisement

ಇತ್ತ ನಾವು ಮಂಡ್ಯಕ್ಕೆ ಬಂದೆವು. ಒಂದು ವಾರದ ಬಳಿಕ ಹುಡುಗನ ತಂದೆಯಿಂದ ನನ್ನಪ್ಪನಿಗೆ ಮತ್ತೆ ಫೋನ್‌! ಹಿಂದಿನ ಸಲವೂ ಹುಡುಗ, ಹುಡುಗಿಯನ್ನು ಮಾತಾಡಿಸದಿದ್ದ ಕಾರಣ, ಮತ್ತೆ ಮಂಡ್ಯಕ್ಕೇ ಬಂದು ಹೋಗುತ್ತಾರೆ ಎಂದು. ನನಗಂತೂ ಕೋಪ ನೆತ್ತಿಗೇರಿತ್ತು. ಇದೇ ಕೊನೆ ಸಲ, ಅಂತ ಸುಮ್ಮನಾದೆ. ನನ್ನ ಹುಟ್ಟುಹಬ್ಬದ ದಿನವೇ ಹುಡುಗ ಮತ್ತವನ ಬೆಂಗಳೂರು ಸ್ನೇಹಿತರು ಮಂಡ್ಯಕ್ಕೆ ಬಂದರು. ಚಹಾ ತಿಂಡಿ ಆದ ಬಳಿಕ ಹುಡುಗ ನನ್ನೊಂದಿಗೆ ಮಾತಾಡಬೇಕೆಂದಾಗ, ಅಪ್ಪ ನಮ್ಮನ್ನು ಪಕ್ಕದ ರೂಮಿಗೆ ಕಳಿಸಿದರು. ಹುಡುಗ “ಈ ಮದುವೆಗೆ ನಿಮ್ಮನ್ನು ಯಾರಾದ್ರೂ ಬಲವಂತವಾಗಿ ಒಪ್ಪಿಸಿದಾರ? ಇಲ್ಲ ನಾನು ನಿಜವಾಗಲೂ ಇಷ್ಟ ಆದೆನಾ?’ ಅಂತ ಕೇಳಿದ್ರು. ನಾನು- “ಹಾಗೇನಿಲ್ಲ, ಯಾರೂ ಬಲವಂತ ಮಾಡಿಲ್ಲ’ ಅಂದೆ. ತಕ್ಷಣ ಅವರು “ನನಗೂ ನೀವು ಇಷ್ಟ ಆಗಿದ್ದೀರಿ. ಮುಂದೆ ಏನು ಮಾಡಬೇಕಂತ ಅಂದುಕೊಂಡಿದ್ದೀರಿ?’ ಅಂತ ಕೇಳಿದಾಗ, ನಾನು ನನ್ನ ಭವಿಷ್ಯದ ಕನಸುಗಳ ಬಗ್ಗೆ ಚುಟುಕಾಗಿ ಉತ್ತರಿಸಿ ಹೊರಬಂದೆ. ಹುಡುಗ ಬೆಂಗಳೂರಿಗೆ ಹೋಗಿ ತನ್ನ ಒಪ್ಪಿಗೆ ತಿಳಿಸಿದ ಮೇಲೆ ಎರಡೂ ಮನೆಯವರು ಒಪ್ಪಿ ನಮ್ಮ ಮದುವೆ ನೆರವೇರಿತು.

ಹೀಗೆ ಮೂರು ಸಲ ವಧು ಪರೀಕ್ಷೆಯಾಗಿ ನಮ್ಮ ಮದುವೆಯಾಯ್ತು. ಈಗಲೂ ನನ್ನ ಮನೆಯವರಿಗೆ ಆಗಾಗ ಕಾಲೆಳೀತೀನಿ- ಒಂದೇ ಹುಡುಗಿಯನ್ನು ಮೂರು ಸಲ ಪರೀಕ್ಷೆ ಮಾಡಿ ಮದುವೆಗೆ ಒಪ್ಪಿಗೆ ಕೊಟ್ಟವರು ನೀವು ಅಂತ.

(ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆಂದರೆ, ಮನೆಮಂದಿಗೆಲ್ಲಾ ಖುಷಿ, ಗಡಿಬಿಡಿ, ಆತಂಕ, ನಿರೀಕ್ಷೆಗಳೆಲ್ಲವೂ ಒಟ್ಟೊಟ್ಟಿಗೇ ಆಗುವ ಸಂದರ್ಭ. ಭಾಮೆಯನ್ನು ನೋಡಲು ಬಂದಾಗ ಮನೆಯಲ್ಲಿ ಏನೇನಾಗಿತ್ತು ಅಂತ 250 ಪದಗಳಲ್ಲಿ uv.avalu@gmail.comಗೆ ಬರೆದು ಕಳಿಸಿ.)

-ಸುಜಾತಾ ಹೆಬ್ಟಾಳದ್‌ ದುಬೈ

Advertisement

Udayavani is now on Telegram. Click here to join our channel and stay updated with the latest news.

Next