Advertisement

ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ

06:00 AM Jul 15, 2018 | Team Udayavani |

ಹೊಸದಿಲ್ಲಿ: ಮಾಜಿ ಸಂಸದ ಮತ್ತು ದಲಿತ ನಾಯಕ ರಾಮ್‌ ಶಕಲ್‌, ಆರ್‌ಎಸ್‌ಎಸ್‌ ಸಿದ್ಧಾಂತ ಪ್ರತಿಪಾದಕ ಮತ್ತು ಅಂಕಣಕಾರ ರಾಕೇಶ್‌ ಸಿನ್ಹಾ, ಶಾಸ್ತ್ರೀಯ ನೃತ್ಯಗಾರ್ತಿ ಸೋನಲ್‌ ಮಾನ್‌ಸಿಂಗ್‌ ಮತ್ತು ಶಿಲ್ಪಿ ರಘುನಾಥ ಮಹಾಪಾತ್ರ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಆದೇಶ ಹೊರಡಿಸಿದ್ದಾರೆ.

Advertisement

ಪ್ರಧಾನಮಂತ್ರಿಗಳ ಶಿಫಾರಸಿನ ಆಧಾರದ ಮೇಲೆ ರಾಷ್ಟ್ರಪತಿಗಳು ಈ ಆದೇಶ ಹೊರಡಿಸಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ. ಖ್ಯಾತ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ಬಾಲಿವುಡ್‌ ನಟಿ ರೇಖಾ, ಉದ್ಯಮಿ ಅನು ಅಘಾ ಮತ್ತು ವಕೀಲ ಕೆ.ಪರಾಸರನ್‌ ಅವರ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನಗಳನ್ನು ಭರ್ತಿ ಮಾಡಲಾಗಿದೆ. ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಾಮಾಜಿಕ ಸೇವೆ ಪರಿಗಣಿಸಿ ರಾಷ್ಟ್ರಪತಿಗಳು ಒಟ್ಟು 12 ಮಂದಿಯನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಬಹುದು. ಈ ವಿಭಾಗದಲ್ಲಿ ಈಗಾಗಲೇ 8 ಸದಸ್ಯರಿದ್ದು, 4 ಸ್ಥಾನಗಳು ಖಾಲಿ ಉಳಿದಿದ್ದವು.

ಸೋನಾಲ್‌ ಮಾನ್ಸಿಂಗ್‌ 
ಭಾರತೀಯ ಶಾಸ್ತ್ರೀಯ ನೃತ್ಯ ಕಲಾವಿದೆ ಮತ್ತು ಪದ್ಮವಿಭೂಷಣ(2003) ಪುರಸ್ಕೃತೆಯಾಗಿರುವ ಸೋನಾಲ್‌ ಮಾನ್‌ಸಿಂಗ್‌ ಸದ್ಯ ಮಹಾರಾಷ್ಟ್ರ ಮತ್ತು ದಿಲ್ಲಿಯಲ್ಲಿ ವಾಸ ಮಾಡುತ್ತಿದ್ದಾರೆ. ಇವರಿಗೆ 1992ರಲ್ಲೇ ಪದ್ಮಭೂಷಣ, 1987ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಇವರು ನೃತ್ಯ ನಿರ್ದೇಶಕಿ, ಶಿಕ್ಷಕಿ, ಮಾರ್ಗದರ್ಶಕಿ ಮತ್ತು ಸಾಮಾಜಿಕ ಹೋರಾಟ ಗಾರ್ತಿಯೂ ಆಗಿದ್ದಾರೆ. 1977ರಲ್ಲಿ ಇವರು ಭಾರ ತೀಯ ಶಾಸ್ತ್ರೀಯ ನೃತ್ಯಗಳ ಕೇಂದ್ರ ಆರಂಭಿಸಿದ್ದಾರೆ.

ರಾಮ್‌ ಶಕಲ್‌


55 ವರ್ಷದ ಇವರು ಉತ್ತರ ಪ್ರದೇಶದ ರಾಬರ್ಟ್ಸ್ಗಂಜ್‌ನಿಂದ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ರಾಮ್‌ ಶಕಲ್‌ಅವರು ಕಾರ್ಮಿಕ ಕಲ್ಯಾಣ, ಇಂಧನ, ಕೃಷಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳಿಗೆ ಸಂಬಂಧಿಸಿದ ವಿವಿಧ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬೈಷಾರ್‌ ಸಮುದಾಯಕ್ಕೆ ಸೇರಿದ ದಲಿತ ನಾಯಕರಾಗಿರುವ ಇವರು ಮಧ್ಯಪ್ರದೇಶದ ಗಡಿಭಾಗದಲ್ಲೂ ಪ್ರಭಾವ ಹೊಂದಿದ್ದಾರೆ. ಇವರ ನೇಮಕದಿಂದಾಗಿ ವರ್ಷಾಂತ್ಯದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಮತ್ತು ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭವಾಗಬಹುದು ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರ.

ರಘುನಾಥ ಮಹಾಪಾತ್ರ


75 ವರ್ಷ ವಯಸ್ಸಿನ ಶಿಲ್ಪಿ ರಘುನಾಥ ಮಹಾಪಾತ್ರ ಅವರದ್ದು ಒಡಿಶಾ ಮೂಲ. ಸದ್ಯ ಇಲ್ಲಿನ ಲಲಿತ ಕಲಾ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ 2013ರಲ್ಲಿ ಪದ್ಮವಿಭೂಷಣ, 2001ರಲ್ಲಿ ಪದ್ಮಭೂಷಣ, 1975ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿದ್ದವು. 1964ರಲ್ಲೇ ಶಿಲ್ಪಕಲೆಯಲ್ಲಿನ ಸಾಧನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು. ಆಗ ಇವರಿಗಿನ್ನೂ 22 ವರ್ಷ ವಯಸ್ಸು. ಇದಷ್ಟೇ ಅಲ್ಲ, ಪುರಿ ಜಗನ್ನಾಥ ದೇಗುಲದ ಸೌಂದಯೀì ಕರಣದಲ್ಲಿ ಅಭೂತಪೂರ್ವ ಕೆಲಸ ಮಾಡಿರುವ ಇವರು, 2,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.

Advertisement

ರಾಕೇಶ್‌ ಸಿನ್ಹಾ


ದಿಲ್ಲಿ ವಿಶ್ವವಿದ್ಯಾನಿಲಯದ ಮೋತಿಲಾಲ್‌ ನೆಹರು ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 53 ವಯಸ್ಸಿನ ಸಿನ್ಹಾ  ಭಾರತೀಯ
ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿಯ ಸದಸ್ಯರಾಗಿದ್ದಾರೆ. ಇವರು ಸ್ವರಾಜ್‌ ಇಂಡಿಯಾ: ಭಾರತೀಯ ಮನಸ್ಸುಗಳ ಸ್ವಾತಂತ್ರ್ಯದ ಸಂಶೋಧನೆ, ಡಾ. ಕೆ.ಬಿ.ಹೆಡೆವಾರ್‌ ಜೀವನಚರಿತ್ರೆ ಮತ್ತು ಸಾಮಾಜಿಕ ಕ್ರಾಂತಿಯ ತತ್ವಶಾಸ್ತ್ರ ಕುರಿತಂತೆ ಪುಸ್ತಕಗಳನ್ನೂ ಬರೆದಿದ್ದಾರೆ. ಅಲ್ಲದೆ ದೆಹಲಿ ಮೂಲದ ಭಾರತ ನೀತಿ ಪ್ರತಿಷ್ಠಾನದ ಸ್ಥಾಪಕರೂ ಆಗಿದ್ದಾರೆ. ಸಾಮಾಜಿಕ ವಿಜ್ಞಾನದಲ್ಲಿನ ಸೇವೆ ಪರಿಗಣಿಸಿ 2017ರಲ್ಲಿ ಸಿನ್ಹಾ ಅವರಿಗೆ ದೀನದಯಾಳ್‌ ಉಪಾಧ್ಯಾಯ್‌ ಪ್ರಶಸ್ತಿ ದೊರೆತಿದೆ.

Advertisement

Udayavani is now on Telegram. Click here to join our channel and stay updated with the latest news.

Next