ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಕಾರು ಮೇಲ್ಸೇತುವೆ ಗೋಡೆಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ
ಪರಿಣಾಮ ಮೂವರು ಬಿಬಿಎಂ ವಿದ್ಯಾರ್ಥಿನಿಯರು ಮೃತರಾದ ಘಟನೆ ಹುಳಿಮಾವು ಸಂಚಾರ ಠಾಣೆ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಆನೇಕಲ್‌ನ ಅಲಯನ್ಸ್ ವಿವಿ ವಿದ್ಯಾರ್ಥಿಗಳಾದ ಅರ್ಷಿಯಾ ಕುಮಾರಿ (22) ಹರ್ಷಾ ಶ್ರೀವಾತ್ಸವ (24) ಹಾಗೂ
ಶ್ರುತಿ ಗೋಪಿನಾಥ್ (24) ಮೃತರು. ಕಾರು ಚಾಲಕ ಪ್ರವೀಣ್ (24) ಹಾಗೂ ಪವಿ ಕೊಯ್ಲಿ (23) ಎಂಬುವರಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅತೀ ವೇಗವಾಗಿ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಬೇಗೂರು-ಕೊಪ್ಪ ಬಳಿಯ ಮೇಲ್ಸೇತುವೆ ಗೋಡೆಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶದ ಹರ್ಷಿಯಾ ಶ್ರೀವತ್ಸ, ಜಾರ್ಖಂಡ್‌ನ ಹರ್ಷಿತಾ, ಕೇರಳದ ಶೃತಿ ಹಾಗೂ ಪವಿ ಕೊಯ್ಲಿ ಆನೇಕಲ್‌ನ ಅಲಯನ್ಸ್ ವಿವಿಯಯಲ್ಲಿ ಬಿಬಿಎಂ 4ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದು, ಬನ್ನೇರುಘಟ್ಟದ ಬಾಡಿಗೆ ಮನೆಯೊಂದರಲ್ಲಿ ಒಟ್ಟಿಗೆ ನೆಲೆಸಿದ್ದಾರೆ. ನಿತ್ಯ ಕಾಲೇಜಿಗೆ ನೈಸ್ ರಸ್ತೆ ಮೂಲಕವೇ ಬಾಡಿಗೆ ಕಾರಿನಲ್ಲಿ ಹೋಗುತ್ತಿದ್ದರು.
ಶುಕ್ರವಾರ ಬೆಳಗ್ಗೆ ಕೂಡ ಎಂದಿನಂತೆ ವಿದ್ಯಾರ್ಥಿನಿಯರು ಪ್ರವೀಣ್ ಎಂಬುವರ ಬಾಡಿಗೆ ಕಾರು ಬುಕ್ ಮಾಡಿದ್ದು, ನೈಸ್ ರಸ್ತೆ ಮೂಲಕವೇ ಬೆಳಗ್ಗೆ 7.30ರ ಸುಮಾರಿಗೆ ಕಾಲೇಜಿಗೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಹೋಗು ವಾಗ ಬೇಗೂರು-ಕೊಪ್ಪ ಮೇಲ್ಸೇತುವೆ ಬಳಿ ಬಲದಿಂದ ಎಡಕ್ಕೆ ತಿರುಗಿಸುವಾಗ ನಿಯಂತ್ರಣ ಕಳೆದುಕೊಂಡ ಚಾಲಕ
ಪ್ರವೀಣ್, ಮೇಲ್ಸೇತುವೆ ಗೋಡೆಗೆ ಡಿಕ್ಕಿ ಹೊಡೆದಿದ್ದು, ಕಾರು ಉರುಳಿ ಬಿದ್ದಿದೆ.
ಕೂಡಲೇ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ. ಅಷ್ಟರಲ್ಲಿ ಇಬ್ಬರು ವಿದ್ಯಾರ್ಥಿನಿಯರು ಸ್ಥಳದಲ್ಲೇ ಮೃತಪಟ್ಟಿದ್ದು, ಶೃತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಹುಳಿಮಾವು ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ