Advertisement
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕೃಷ್ಣಾ ನದಿಗೆ ಬುಧವಾರ 3,46,567 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಘಟಪ್ರಭಾ ನದಿಗೆ 1.72 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ಎರಡೂ ನದಿಗಳ ನೀರು ಆಲಮಟ್ಟಿ ಜಲಾಶಯ ಸೇರುತ್ತಿದ್ದು, ಆಲಮಟ್ಟಿಯಿಂದ 4 ಲಕ್ಷ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಆಲಮಟ್ಟಿಯ ಜಲಾಶಯದ ಹಿನ್ನೀರು ಜಿಲ್ಲೆಯ ಬಾಗಲಕೋಟೆ, ಬೀಳಗಿ, ಜಮಖಂಡಿ ತಾಲೂಕಿನ ಹಲವು ಹಳ್ಳಿಗಳು ಬಾಧಿತಗೊಳಿಸಿದೆ.
Related Articles
Advertisement
ಮೂರು ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಜಮಖಂಡಿ-26, ಬೀಳಗಿ-12, ಮುಧೋಳ-21, ಬಾಗಲಕೋಟೆ-12, ಬಾದಾಮಿ-27 ಹಾಗೂ ಹುನಗುಂದ ತಾಲೂಕಿನ 33 ಹಳ್ಳಿಗಳು ಸೇರಿ ಒಟ್ಟು 131 ಹಳ್ಳಿಗಳಿಗೆ ಯಾವುದೇ ಕ್ಷಣದಲ್ಲಿ ನೀರು ನುಗ್ಗುವ ಆತಂಕ ಎದುರಾಗಿದೆ. ಈಗಾಗಲೇ ಮುಧೋಳ ಪಟ್ಟಣದ ಎರಡು ಗಲ್ಲಿಗಳು, ಮಿರ್ಜಿ ಗ್ರಾಮ ಸಹಿತ ಏಳು ಗ್ರಾಮ, ಜಮಖಂಡಿ ತಾಲೂಕಿನ 13 ಗ್ರಾಮಗಳ ಸುತ್ತ ನೀರು ಆವರಿಸಿಕೊಂಡಿದೆ.
ಬ್ಯಾರೇಜ್ ಗೇಟ್ ತೆರವು :
ಘಟಪ್ರಭಾ ನದಿ ಪಾತ್ರದಲ್ಲಿ 23 ಹಾಗೂ ಮಲಪ್ರಭಾ ನದಿ ಪಾತ್ರದಲ್ಲಿ 18 ಬ್ಯಾರೇಜ್‌ಗಳಿದ್ದು, ಬುಧವಾರ ಎಲ್ಲಾ ಬ್ಯಾರೇಜ್‌ಗಳ ಗೇಟ್‌ಗಳನ್ನು ತೆರವುಗೊಳಿಸಿ, ನೀರು ಹೊರ ಬಿಡಲಾಗುತ್ತಿದೆ.
ಇಬ್ಬರು ಯುವಕರ ರಕ್ಷಣೆ :
ಘಟಪ್ರಭಾ ನದಿ ಪ್ರವಾಹ ಉಂಟಾಗಿದ್ದು, ಮುಧೋಳ ತಾಲೂಕಿನ ನಾಗರಾಳದಲ್ಲಿ ನದಿ ದಟದಲ್ಲಿದ್ದ ವಿದ್ಯುತ್ ಪಂಪಸೆಟ್ ತರಲು ಹೋಗಿದ್ದ ಇಬ್ಬರು ಯುವಕರು ಪ್ರವಾಹದಲ್ಲಿ ಸಿಲುಕಿದ್ದರು. ಅವರನ್ನು ಮಹಾಲಿಂಗಪುರ ಪೋಲಿಸರು ರಕ್ಷಣೆ ಮಾಡಿದ್ದಾರೆ.
ನಾಗರಾಳದ ಮಹಾದೇವ ನೇಗಿ (29) ಮತ್ತು ರಾಜು ಬೆಳ್ಳೇರಿ (25) ಎಂಬುವವರು ನದಿಯಲ್ಲಿ ಪಂಪಸೆಟ್ ತರಲು ಹೋದಾಗ, ಏಕಾಏಕಿ ಘಟಪ್ರಭಾ ನದಿಯಲ್ಲಿ ನೀರು ಹೆಚ್ಚಿದ್ದರಿಂದ ಮರವೇರಿ ಆಶ್ರಯ ಪಡೆದಿದ್ದಾರೆ. ಸುಮಾರು ಐದು ಗಂಟೆಗಳ ಕಾಲ ಮರದಲ್ಲಿದ್ದ ಯುವಕರು, ರಕ್ಷಣೆಗಾಗಿ ಕೂಗುತ್ತಿದ್ದರು. ಗ್ರಾಮಸ್ಥರ ಮಾಹಿತಿಯಿಂದ ಸ್ಥಳಕ್ಕೆ ಧಾವರಿಸಿದ ಮಹಾಲಿಂಗಪುರ ಪೊಲೀಸರು, ಬೋಟ್ ಮೂಲಕ ತೆರಳಿ, ಯುವಕರನ್ನು ರಕ್ಷಣೆ ಮಾಡಿದ್ದಾರೆ.