ಮೈಸೂರು: ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಕಟೌಟ್ ನಿಲ್ಲಿಸುವ ವೇಳೆ ಉಂಟಾದ ವಿದ್ಯುತ್ ಅವಘಡದಲ್ಲಿ ಮೂವರು ಮೃತಪಟ್ಟು, 9 ಮಂದಿ ತೀವ್ರ ಗಾಯಗೊಂಡಿರುವ ಘಟನೆ ನಗರದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ನಗರದ ಕ್ಯಾತಮಾರನಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದ್ದು, ಎ.ಕೆ. ಕಾಲೋನಿ ನಿವಾಸಿ ಹಾಗೂ ಪಾಲಿಕೆ ನೌಕರ ಮಣಿಕಂಠ (27), ಪೇಂಟರ್ ಕುಮಾರಸ್ವಾಮಿ (40) ಹಾಗೂ ಟೈಲ್ಸ್ ಕೆಲಸಗಾರ ಶಿವು (25) ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ರಾತ್ರಿ 10.30ರ ಸುಮಾರಿನಲ್ಲಿ ಅಂಬೇಡ್ಕರ್ ಭಾವ ಚಿತ್ರವಿದ್ದ ಬೃಹತ್ ಕಟೌಟ್ ಅಳವಡಿಸಲಾಗುತ್ತಿತ್ತು. ಇದಕ್ಕಾಗಿ ಎ.ಕೆ. ಕಾಲೋನಿಯ ನಿಂಬೆಹಣ್ಣು ವೃತ್ತದಲ್ಲಿ 15ಕ್ಕೂ ಹೆಚ್ಚು ಮಂದಿ ಯುವಕರು ಸ್ಥಳದಲ್ಲಿ ಸಿದ್ಧತೆ ಮಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಭಾರಿ ಗಾಳಿ ಬೀಸಿದ ಪರಿಣಾಮ ಅಂಬೇಡ್ಕರ್ ಕಟೌಟ್ ವಾಲಿಕೊಂಡು ಸಮೀಪದಲ್ಲೇ ಇದ್ದ ವಿದ್ಯುತ್ ತಂತಿಗೆ ತಗುಲಿದೆ. ಕಟೌಟ್‌ನ ಹಿಂಭಾಗ ಕಬ್ಬಿಣದ ರಾಡ್ ಅಳವಡಿಸಿದ್ದ ಪರಿಣಾಮ ಕಟೌಟ್‌ಗೆ ವಿದ್ಯುತ್ ತಂತಿ ತಗಲುತ್ತಿದ್ದಂತೆ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ಇದರ ಪರಿಣಾಮ ಕಟೌಟ್ ಹಿಡಿದಿದ್ದ ಮಣಿಕಂಠ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತಪಟ್ಟರೆ, ಜತೆಯಲ್ಲಿದ್ದ ಶಿವು ಮತ್ತು ಕುಮಾರಸ್ವಾಮಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಇವರನ್ನು ನಗರದ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಶುಕ್ರವಾರ ಬೆಳಗ್ಗೆ ಕೆ.ಆರ್.ಆಸ್ಪತ್ರೆ ಶವಾಗಾರಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದರು. ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮೃತಪಟ್ಟ ಮೂವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ನೀಡುವ ಜತೆಗೆ ಗಾಯಾಳುಗಳಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.