ಎಲ್ಲವನ್ನೂ ಸರಿಯಾದ ಸಮಯದಲ್ಲಿ ಮಾಡುವುದನ್ನು ತಾನು ತಿಳಿದಿದ್ದರೆ ಎಷ್ಟು ಚೆನ್ನಾಗಿತ್ತು. ಅಭಿಪ್ರಾಯ ಕೇಳಲು ಯಾರು ಯೋಗ್ಯರು, ಯಾರನ್ನು ದೂರವಿರಿಸಬೇಕು ಎಂಬ ಅರಿವು ಇದ್ದರೆ ಎಷ್ಟು ಒಳ್ಳೆಯದಿತ್ತು. ಎಲ್ಲಕ್ಕಿಂತ, ಅತಿ ಮುಖ್ಯವಾಗಿ ಮಾಡುವಂತಹದು ಯಾವುದು ಎಂದು ಗೊತ್ತಿದ್ದರೆ ಎಷ್ಟು ಉತ್ತಮವಿತ್ತು.
Advertisement
ಇವೆಲ್ಲವನ್ನು ತಿಳಿದಿದ್ದರೆ ತಾನು ಯಾವುದೇ ಹೊಣೆ ಹೊತ್ತುಕೊಂಡರೂ ಎಂದಿಗೂ ವಿಫಲನಾಗುವುದಿಲ್ಲ !ಇವುಗಳನ್ನು ಯಾರಾದರೂ ಅವನಿಗೆ ಬೋಧಿಸಿದರೆ ಒಂದು ಉತ್ತಮ ಬಹುಮಾನವನ್ನು ತಾನು ಕೊಡುವೆನೆಂದು ತನ್ನ ರಾಜ್ಯದಲ್ಲೆಲ್ಲ ಘೋಷಿಸಿದ.
ವಿದ್ವಾಂಸರು ರಾಜನ ಬಳಿಗೆ ಬಂದರು. ಆದರೆ, ಅವರು ಯಾರೂ ಅವನ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ಕೊಡಲಿಲ್ಲ.
ರಾಜನಿಗೆ ಯಾವ ಉತ್ತರವೂ ಸರಿ ಬರಲಿಲ್ಲ. ಯಾರಿಗೂ ಬಹುಮಾನವನ್ನು ಕೊಡಲಿಲ್ಲ. ಯಾರೋ ಹೇಳಿದರು, ಈ ಪ್ರಶ್ನೆಗಳಿಗೆ ಉತ್ತರವನ್ನು ಒಬ್ಬ ಸನ್ಯಾಸಿಯಿಂದ ಪಡೆಯಬಹುದೆಂದು. ರಾಜ ಆ ಸನ್ಯಾಸಿಯನ್ನು ಹುಡುಕಿಕೊಂಡು ಹೊರಟ.
Related Articles
Advertisement
ರಾಜನು ಸರಳ ಬಟ್ಟೆಗಳನ್ನು ಧರಿಸಿ, ಆ ಸನ್ಯಾಸಿಯ ಕುಟೀರವನ್ನು ತಲುಪುವ ಮೊದಲು ತನ್ನ ಕುದುರೆಯಿಂದ ಇಳಿದು, ಅವನ ಅಂಗರಕ್ಷಕನನ್ನು ಹಿಂದೆಯೇ ಬಿಟ್ಟು , ಒಬ್ಬನೇ ಮುಂದೆ ಹೋದ.
ರಾಜನು ಸಮೀಪಿಸಿದಾಗ, ಆ ಸನ್ಯಾಸಿಯು ತನ್ನ ಗುಡಿಸಲಿನ ಮುಂದೆ ಭೂಮಿಯನ್ನು ಅಗೆಯುತ್ತಿದ್ದನು. ರಾಜನನ್ನು ನೋಡಿ, ಸ್ವಾಗತಿಸಿದ. ಮತ್ತೆ ಅಗೆಯುವ ಕೆಲಸದಲ್ಲಿಯೇ ಮಗ್ನನಾದ. ಸನ್ಯಾಸಿಯು ನಾಜೂಕಿನವನು ಮತ್ತು ಬಲವಿಲ್ಲದವನಾಗಿದ್ದ. ಪ್ರತಿಬಾರಿ ಅವನು ಗುದ್ದಲಿಯನ್ನು ಭೂಮಿಗೆ ಹೊಡೆದು ಸ್ವಲ್ಪ ಮಣ್ಣನ್ನು ಅಗೆದಾಗಲೂ, ಏದುಸಿರು ಬಿಡುತ್ತಿದ್ದ.
ರಾಜನು ಅವನ ಬಳಿಗೆ ಹೋಗಿ “”ವಿವೇಕಿಯಾದ ಸನ್ಯಾಸಿಯೇ, ಮೂರು ಪ್ರಶ್ನೆಗಳಿಗೆ ಉತ್ತರಗಳನ್ನು ಕೇಳಲು ನಿನ್ನ ಬಳಿ ಬಂದಿದ್ದೇನೆ. ಸರಿಯಾದ ವೇಳೆಯಲ್ಲಿ ಉತ್ತಮವಾದದ್ದನ್ನು ಮಾಡುವುದು ಹೇಗೆ, ಯಾರು ನನಗೆ ಅತ್ಯಂತ ಆವಶ್ಯಕತೆಯಿರುವವರು, ಅದರಿಂದಾಗಿ, ಇತರರಿಗಿಂತ ಯಾರಿಗೆ ನಾನು ಹೆಚ್ಚು ಗಮನ ಕೊಡಬೇಕು? ಯಾವುವು ಬಹುಮುಖ್ಯ ಕಾರ್ಯಗಳು ಹಾಗೂ ನನ್ನ ಗಮನವನ್ನು ಯಾವುದಕ್ಕೆ ಮೊದಲು ಕೊಡಬೇಕು?” ಎಂದು ಕೇಳಿದ.
ಸನ್ಯಾಸಿಯು ರಾಜನ ಮಾತುಗಳನ್ನು ಕೇಳಿದನು, ಆದರೆ, ಏನೂ ಉತ್ತರಿಸಲಿಲ್ಲ. ಅವನು ಕೈಗಳ ಮೇಲೆ ಉಗುಳಿಕೊಂಡು ಮತ್ತೆ ಅಗೆಯಲು ಪ್ರಾರಂಭಿಸಿದ.“”ನಿನಗೆ ಆಯಾಸವಾಗಿದೆ” ಎಂದ ರಾಜ, “”ಗುದ್ದಲಿಯನ್ನು ನಾನು ತೆಗೆದುಕೊಳ್ಳಲು ಬಿಡು ಹಾಗೂ ನಿನಗಾಗಿ ಸ್ವಲ್ಪ ಹೊತ್ತು ಕೆಲಸ ಮಾಡಿ ಕೊಡುತ್ತೇನೆ”. “”ಧನ್ಯವಾದಗಳು!” ಎಂದ ಸನ್ಯಾಸಿ, ಹಾಗೂ, ಗುದ್ದಲಿಯನ್ನು ರಾಜನಿಗೆ ಕೊಡುತ್ತಾ, ನೆಲದ ಮೇಲೆ ಕುಳಿತುಕೊಂಡನು. ಎರಡು ಪಾತಿಗಳನ್ನು ಅಗೆದ ನಂತರ, ರಾಜನು ನಿಲ್ಲಿಸಿದ ಮತ್ತು ಅವನ ಪ್ರಶ್ನೆಗಳನ್ನು ಪುನಃ ಕೇಳಿದ. ಸನ್ಯಾಸಿಯು ಮತ್ತೆ ಏನೂ ಉತ್ತರಿಸಲಿಲ್ಲ , ಆದರೆ, ಎದ್ದು ಗುದ್ದಲಿಗಾಗಿ ಕೈಚಾಚಿದ, ಮತ್ತು ಹೇಳಿದ,
“”ಈಗ ಸ್ವಲ್ಪ ಸುಧಾರಿಸಿಕೊ- ನಾನು ಸ್ವಲ್ಪ ಕೆಲಸ ಮಾಡುತ್ತೇನೆ”.
ಆದರೆ, ರಾಜ ಗುದ್ದಲಿಯನ್ನು ಅವನಿಗೆ ಕೊಡಲಿಲ್ಲ ಮತ್ತೂ ಅಗೆತವನ್ನು ಮುಂದುವರೆಸಿದ. ಒಂದು ಗಂಟೆ ದಾಟಿತು, ಮತ್ತೂಂದೂ. ಸೂರ್ಯನು ಮರಗಳ ಹಿಂದೆ ಮುಳುಗಲಾರಂಭಿ ಸಿದ. ಅಂತೂ ಕೊನೆಗೆ ರಾಜನು ಗುದ್ದಲಿಯನ್ನು ನೆಲಕ್ಕೆ ಸಿಕ್ಕಿಸಿ, ಮತ್ತೂ ಹೇಳಿದ: “”ನಾನು ನಿನ್ನ ಬಳಿಗೆ ಬಂದದ್ದು ನನ್ನ ಪ್ರಶ್ನೆಗಳ ಉತ್ತರಕ್ಕಾಗಿ. ಉತ್ತ ರ ಕೊಡಲಾಗದಿದ್ದರೆ, ಹಾಗೆಂದು ನನಗೆ ಹೇಳು, ನಾನು ಮನೆಗೆ ಹಿಂದಿರುಗುತ್ತೇನೆ”.
“”ಯಾರೋ ಇತ್ತ ಕಡೆ ಓಡುತ್ತ ಬರುತ್ತಿದ್ದಾರೆ,” ಎಂದ ಸನ್ಯಾಸಿ. ರಾಜನು ತಿರುಗಿದ, ಒಬ್ಬ ಗಡ್ಡ ಬಿಟ್ಟವನು ಅಡವಿಯಿಂದ ಓಡಿ ಬರುತ್ತಿರುವುದನ್ನು ನೋಡಿದ. ಆ ಮನುಷ್ಯನು ಅವನ ಹೊಟ್ಟೆಯನ್ನು ತನ್ನ ಕೈಗಳಿಂದ ಅದುಮಿ ಹಿಡಿದಿದ್ದ. ರಕ್ತವು ಅವುಗಳ ಕೆಳಗಿನಿಂದ ಸುರಿಯುತ್ತಿತ್ತು. ಅವನು ರಾಜನ ಹತ್ತಿರ ಬಂದಾಗ, ದುರ್ಬಲವಾಗಿ ಮುಲುಗುತ್ತ ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದುಬಿಟ್ಟನು. ರಾಜ ಮತ್ತು ಸನ್ಯಾಸಿಯು ಆ ಮನುಷ್ಯನ ಬಟ್ಟೆಯನ್ನು ಬಿಚ್ಚಿದರು. ಅವನ ಹೊಟ್ಟೆಯಲ್ಲಿ ದೊಡ್ಡ ಗಾಯವಿತ್ತು. ರಾಜನು ತನಗೆ ಸಾಧ್ಯವಾದಷ್ಟು ತೊಳೆದು, ತನ್ನ ಕರವಸ್ತ್ರದಿಂದ ಮತ್ತು ಸನ್ಯಾಸಿಯಲ್ಲಿ ಇದ್ದ ಟವೆಲಿನಿಂದ ಗಾಯದ ಮೇಲೆ ಪಟ್ಟಿ ಕಟ್ಟಿದನು. ಆದರೆ, ರಕ್ತವು ಸುರಿಯುವುದು ನಿಲ್ಲುತ್ತಲೇ ಇಲ್ಲ, ರಾಜನು ಮತ್ತೆ ಮತ್ತೆ ಬಿಸಿರಕ್ತದಿಂದ ಸೋಕಿದ ಪಟ್ಟಿಯನ್ನು ತೆಗೆದು, ತೊಳೆದು ಪುನಃ ಪಟ್ಟಿ ಕಟ್ಟುತ್ತಿದ್ದ. ಅಂತೂ ಕೊನೆಗೆ ರಕ್ತ ಹರಿಯುವುದು ನಿಂತಿತು. ಆ ಮನುಷ್ಯನು ಚೇತರಿಕೆ ಹೊಂದಿ ಕುಡಿಯಲು ಏನಾದರೂ ಕೊಡಲು ಕೇಳಿದನು. ರಾಜನು ಶುದ್ಧ ನೀರನ್ನು ತಂದು ಅವನಿಗೆ ಕೊಟ್ಟನು. ಅಷ್ಟರಲ್ಲಿ ಸೂರ್ಯ ಮುಳುಗಿದ್ದ. ವಾತಾವರಣ ತಂಪಾಗಿತ್ತು. ಆದ್ದರಿಂದ, ರಾಜನು ಸನ್ಯಾಸಿಯ ಸಹಾಯದಿಂದ, ಗಾಯವಾದ ಮನುಷ್ಯನನ್ನು ಕುಟೀರದೊಳಗೆ ಎತ್ತಿಕೊಂಡು ಹೋಗಿ ಹಾಸಿಗೆಯ ಮೇಲೆ ಮಲಗಿಸಿದ. ಹಾಸಿಗೆಯ ಮೇಲೆ ಕಣ್ಮುಚ್ಚಿ ಮಾತಾಡದೆ ಮಲಗಿಕೊಂಡ.
ರಾಜನೂ ನಡೆದು ಬಂದಿದ್ದರಿಂದ ಮತ್ತು ಕೆಲಸಮಾಡಿದ್ದರಿಂದ ಎಷ್ಟು ಆಯಾಸಗೊಂಡಿದ್ದನೆಂದರೆ, ಹೊಸ್ತಿಲ ಮೇಲೆ ಬಾಗಿ, ಅವನೂ ಮಲಗಿಬಿಟ್ಟ. ಎಷ್ಟೆಂದರೆ ಬೇಸಿಗೆಯ ರಾತ್ರಿ ಪೂರಾ ಎಚ್ಚರವಿಲ್ಲದೆ ಚೆನ್ನಾಗಿ ನಿದ್ದೆ ಮಾಡಿದ. ಮುಂಜಾನೆ ಅವನು ಎದ್ದಾಗ, ತಾನು ಎಲ್ಲಿರುವೆನೆಂದು ಸ್ಮರಿಸಲು ಅಥವಾ ಹಾಸಿಗೆಯ ಮೇಲೆ ಮಲಗಿ ಹೊಳೆಯುವ ಕಣ್ಣುಗಳಿಂದ ತನ್ನನ್ನೇ ತದೇಕವಾಗಿ ದಿಟ್ಟಿಸಿ ನೋಡುತ್ತಿರುವ ಅಪರಿಚಿತ ಗಡ್ಡಧಾರಿ ಮನುಷ್ಯನು ಯಾರೆಂದು ತಿಳಿಯಲು ಸ್ವಲ್ಪ ಕಾಲವೇ ಬೇಕಾಯಿತು. ರಾಜನು ಎಚ್ಚರಗೊಂಡು ತನ್ನ ಕಡೆಗೆ ನೋಡುತ್ತಿರುವಾಗ “ನನ್ನನ್ನು ಕ್ಷಮಿಸಿ!’ ಎಂದು ನಿತ್ರಾಣದ ಧ್ವನಿಯಲ್ಲಿ ಆ ಗಡ್ಡಧಾರಿ ಮನುಷ್ಯನು ಹೇಳಿದ.
“”ನೀನು ಯಾರೋ ನನಗೆ ಗೊತ್ತಿಲ್ಲ, ನಿನ್ನನ್ನು ಕ್ಷಮಿಸಲು ಕಾರಣವೇನೂ ಇಲ್ಲ” ಎಂದು ಹೇಳಿದ ರಾಜ. “”ನಿಮಗೆ ನಾನು ಗೊತ್ತಿಲ್ಲ, ಆದರೆ, ನಾನು ನಿಮ್ಮನ್ನು ಬಲ್ಲೆ. ನಾನು ನಿಮ್ಮ ಆ ಶತ್ರು. ಯಾರು ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಶಪಥ ಮಾಡಿದ್ದನೋ ಅವನು. ಏಕೆಂದರೆ, ನೀವು ಅವನ ಸಹೋದರನನ್ನು ವಧಿಸಿ ಅವನ ಆಸ್ತಿಯನ್ನು ವಶಪಡಿಸಿಕೊಂಡಿದ್ದೀರಿ. ನೀವೊಬ್ಬರೇ ಈ ಸನ್ಯಾಸಿಯನ್ನು ಕಾಣಲು ಬಂದದ್ದು ನನಗೆ ಗೊತ್ತಿತ್ತು, ನೀವು ಮರಳಿ ಬರುವಾಗ ನಿಮ್ಮನ್ನು ಕೊಲ್ಲಲು ತೀರ್ಮಾನಿಸಿದ್ದೆ. ಆದರೆ, ಹಗಲು ಕಳೆಯಿತಾದರೂ ನೀವು ಮರಳಿ ಬರಲಿಲ್ಲ. ಆದ್ದರಿಂದ, ನಾನು ಅವಿತ ತಾಣದಿಂದ ನಿಮ್ಮನ್ನು ಹಿಡಿಯಲು ಬಂದೆ. ನಾನು ನಿಮ್ಮ ಅಂಗರಕ್ಷಕನ ಬಳಿ ಬಂದೆ. ಅವರು ನನ್ನ ಗುರುತು ಹಿಡಿದರು. ನನ್ನನ್ನು ಗಾಯಗೊಳಿಸಿದರು. ನಾನು ಅವರಿಂದ ತಪ್ಪಿಸಿಕೊಂಡೆ. ಆದರೆ, ನೀವು ಗಾಯವನ್ನು ತೊಳೆದು ಔಷಧಿ ಹಚ್ಚದೇ ಇದ್ದಿದ್ದರೆ ನಾನು ರಕ್ತಸ್ರಾವದಿಂದ ಸತ್ತು ಹೋಗುತ್ತಿದ್ದೆ. ನಾನು ನಿಮ್ಮನ್ನು ಕೊಲ್ಲಲು ಇಚ್ಛಿಸಿದ್ದೆ, ಆದರೆ, ನೀವು ನನ್ನ ಪ್ರಾಣವನ್ನು ಉಳಿಸಿದಿರಿ. ಈಗ, ನಾನು ಬದುಕಿದರೆ, ನೀವು ಇಚ್ಛಿಸುವುದಾದರೆ, ನಾನು ನಿಮ್ಮ ನಂಬಿಗಸ್ಥ ಗುಲಾಮನಾಗಿ ಸೇವೆ ಮಾಡುತ್ತೇನೆ. ನನ್ನನ್ನು ಕ್ಷಮಿಸಿ!” ಇಷ್ಟು ಸುಲಭವಾಗಿ ತನ್ನ ಶತ್ರುವಿನೊಂದಿಗೆ ಶಾಂತಿ ಸಂಧಾನವಾಗಿದ್ದು ಮತ್ತು ಅವನನ್ನು ಸ್ನೇಹಿತನನ್ನಾಗಿ ಪಡೆದದ್ದು ಕಂಡು, ರಾಜನಿಗೆ ಬಹಳ ಸಂತೋಷವಾಯಿತು, ಹಾಗೆಯೇ ತನ್ನ ಆಳುಗಳನ್ನೂ ಮತ್ತು ಅವನಿಗೆ ಶುಶ್ರೂಷೆ ಮಾಡಲು ತನ್ನ ವೈದ್ಯನನ್ನೂ ಕಳುಹಿಸುವೆನೆಂದೂ ಮತ್ತು ಅವನ ಆಸ್ತಿಯನ್ನು ಪುನಃ ಅವನಿಗೆ ಮರಳಿಸುವೆನೆಂದೂ ಹೇಳಿದನು. ಗಾಯವಾದ ಮನುಷ್ಯನನ್ನು ಬೀಳ್ಕೊಟ್ಟ ಮೇಲೆ, ರಾಜನು ಹೊರಗೆ ಮೊಗಸಾಲೆಗೆ ಹೋಗಿ ಆ ಸನ್ಯಾಸಿಗಾಗಿ ಸುತ್ತಲೂ ಹುಡುಕಿದ. ಹೋಗುವ ಮೊದಲು ಅವನ ಪ್ರಶ್ನೆಗಳಿಗೆ ಮತ್ತೂಮ್ಮೆ ಉತ್ತರಕ್ಕಾಗಿ ಬೇಡಬೇಕೆಂದು ಇಷ್ಟಪಟ್ಟ. ಆ ಸನ್ಯಾಸಿಯು ಆಚೆ ಮೊಣಕಾಲೂರಿ, ಹಿಂದಿನ ದಿನ ಅಗೆದ ಪಾತಿಗಳಲ್ಲಿ ಬೀಜಗಳನ್ನು ಬಿತ್ತುತ್ತಿದ್ದ. ರಾಜನು ಅವನ ಬಳಿ ಬಂದು ಹೇಳಿದ:
“”ಕೊನೆಯ ಬಾರಿಗೆ, ಜ್ಞಾನಿಯೇ, ನನ್ನ ಪ್ರಶ್ನೆಗಳಿಗೆ ಉತ್ತರಿಸು ಎಂದು ಬೇಡಿಕೊಳ್ಳುತ್ತೇನೆ.” “”ನಿನಗೆ ಈಗಾಗಲೇ ಉತ್ತರಿಸಲಾಗಿದೆ!” ಆ ಸನ್ಯಾಸಿಯು, ತನ್ನ ಸಣಕಲು ಕಾಲುಗಳ ಮೇಲೆ ಬಾಗಿ ಕುಳಿತಲ್ಲಿಂದಲೇ, ಅವನ ಮುಂದೆ ನಿಂತಿದ್ದ ರಾಜನನ್ನು, ತಲೆಯೆತ್ತಿ ನೋಡುತ್ತಾ ಹೇಳಿದನು. “”ಹೇಗೆ ಉತ್ತರಿಸಲಾಗಿದೆ? ನಿನ್ನ ಮಾತಿನ ಅರ್ಥವೇನು?” ಎಂದು ಕೇಳಿದ ರಾಜ.
“”ನಿನಗೆ ಕಾಣುವುದಿಲ್ಲವೆ?” ಸನ್ಯಾಸಿಯು ಉತ್ತರಿಸಿದ. “”ನಿನ್ನೆ ನೀನು ನನ್ನ ಬಲಹೀನತೆಯನ್ನು ಕಂಡು ಕನಿಕರ ಪಡದೇ ಇದ್ದಿದ್ದರೆ, ಆ ಪಾತಿಗಳನ್ನು ನನಗಾಗಿ ಅಗೆಯದಿದ್ದರೆ, ನಿನ್ನ ದಾರಿಯಲ್ಲಿ ನೀನು ನಿನ್ನಷ್ಟಕ್ಕೇ ಹೋಗಿದ್ದಿದ್ದರೆ, ಆ ಮನುಷ್ಯನು ನಿನ್ನ ಮೇಲೆ ದಾಳಿ ಮಾಡುತ್ತಿದ್ದ. ಆಗ ನೀನು ನನ್ನ ಬಳಿ ಉಳಿಯದೇ ಇದ್ದದ್ದಕ್ಕಾಗಿ ಪಶ್ಚಾತ್ತಾಪಪಡುತ್ತಿದ್ದೆ. ನೀನು ಪಾತಿಗಳನ್ನು ಮಾಡುತ್ತಿದ್ದದ್ದು ನಿನ್ನ ಬದುಕಿನಲ್ಲಿ ಬಹುಮುಖ್ಯವಾದ ಕೆಲಸ. ನಾನು ನಿನ್ನ ಬದುಕಿನಲ್ಲಿ ಬಹುಮುಖ್ಯನಾದ ಮನುಷ್ಯನಾಗಿದ್ದೆ ಮತ್ತು ನನಗೆ ಒಳ್ಳೆಯದನ್ನು ಮಾಡುವುದೇ ನಿನ್ನ ಮುಖ್ಯವಾದ ವ್ಯವಹಾರವಾಗಿತ್ತು. ನಂತರ ಆ ಮನುಷ್ಯನು ನಮ್ಮ ಕಡೆಗೆ ಓಡಿ ಬಂದಾಗ ಅವನಿಗೆ ನೀನು ಶುಶ್ರೂಷೆ ಮಾಡುವುದೇ ನಿನ್ನ ಬದುಕಿನ ಪ್ರಧಾನ ಉದ್ದೇಶವಾಗಿತ್ತು. ನೀನು ಅವನ ಗಾಯಗಳಿಗೆ ಪಟ್ಟಿ ಕಟ್ಟದೆ ಇದ್ದಿದ್ದರೆ ನಿನ್ನ ಬಳಿ ಶಾಂತಿ ಸಂಧಾನ ಮಾಡಿಕೊಳ್ಳದೇ ಅವನು ಸತ್ತು ಹೋಗುತ್ತಿದ್ದ. ಆದ್ದರಿಂದ ಅವನು ಕೂಡ ನಿನ್ನ ಬದುಕಿನಲ್ಲಿ ಬಹುಮುಖ್ಯನಾದ ಮನುಷ್ಯ ಮತ್ತು ಅವನಿಗಾಗಿ ನೀನು ಮಾಡಿದ್ದೇ ಬಹುಮುಖ್ಯವಾದ ವ್ಯವಹಾರ. ಹಾಗಾದರೆ ಜ್ಞಾಪಕದಲ್ಲಿಟ್ಟುಕೋ- ಒಂದೇ ಒಂದು ಕಾಲವು ಮುಖ್ಯವಾಗಿರುವುದು- ಅದು ಈಗ, ಈ ಕ್ಷಣ. ನಮ್ಮ ಹಿಡಿತವಿರುವುದು ಇದೊಂದೇ ಕಾಲದ ಮೇಲೆ. ಅತಿ ಅಗತ್ಯತೆ ಇರುವ ವ್ಯಕ್ತಿಯು ನೀನು ಯಾರ ಬಳಿ ಇರುವೆಯೋ ಅವರು. ಏಕೆಂದರೆ ಯಾರ ಬಳಿಯಲ್ಲಿ ಎಂದಾದರೂ ವ್ಯವಹರಿಸಲಿದ್ದೇನೆ ಎಂದು ಯಾವ ಮನುಷ್ಯನೂ ತಿಳಿಯನು. ಹಾಗಾಗಿ, ಅವನಿಗೆ ಒಳ್ಳೆಯದನ್ನು ಮಾಡುವುದು ಅತ್ಯಂತ ಮುಖ್ಯ. ಏಕೆಂದರೆ, ಆ ಕಾರಣಕ್ಕಾಗಿಯೇ ದೇವರು ಮನುಷ್ಯನನ್ನು ಈ ಪ್ರಪಂಚಕ್ಕೆ ಕಳುಹಿಸಿರುವುದು!” ರಷ್ಯನ್ ಮೂಲ : ಲಿಯೋ ಟಾಲ್‌ಸ್ಟಾಯ್ ಕನ್ನಡಕ್ಕೆ : ಶಾಲಿನಿದೇವ ಪ್ರಕಾಶ್