ಚೆನ್ನೈ: ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುತಿ ಎಂಬಲ್ಲಿ ಮೂವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ನಕಲಿ ಶಾಖೆಯೊಂದನ್ನು ತೆರೆದು ಕಾರ್ಯಾಚರಿಸುತ್ತಿದ್ದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಲ್ಲಿ ಒಬ್ಬ ಎಸ್‌ಬಿಐ ಬ್ಯಾಂಕ್‌ನ ಮಾಜಿ ಉದ್ಯೋಗಿಯ ಪುತ್ರ ಎಂಬುದು ತಿಳಿದುಬಂದಿದೆ.
ಬ್ಯಾಂಕ್‌ನ ಮಾಜಿ ಉದ್ಯೋಗಿಯ ಪುತ್ರ ಕಮಲ್ ಬಾಬು(19) ಎಂಬಾತ ಎ.ಕುಮಾರ್(42) ಮತ್ತು ಎಂ. ಮಣಿಕಮ್ (52) ಎಂಬವರೊಂದಿಗೆ ಸೇರಿ ಈ ವಂಚನೆ ಎಸಗಿದ್ದಾನೆ. ದೇಶ ವ್ಯಾಪಿ ಲಾಕ್‌ಡಾನ್ ಜಾರಿಯಲ್ಲಿದ್ದ ಏಪ್ರಿಲ್‌ನಲ್ಲೇ ಇವರು ನಕಲಿ ಬ್ಯಾಂಕ್ ಶಾಖೆ ಆರಂಭಿಸಿದ್ದು, ಯಾರಿಗೂ ಅನುಮಾನ ಬರಲಿಕ್ಕಿಲ್ಲ ಎಂದು ಭಾವಿಸಿದ್ದರು. ಕಮಲ್‌ಬಾಬು ಹೊಸ ಶಾಖೆಗೆ ಕಂಪ್ಯೂಟರ್‌ಗಳು, ಲಾಕರ್‌ಗಳು, ಚಲನ್ ಮತ್ತು ನಕಲಿ ದಾಖಲೆಗಳನ್ನು ತಂದಿದ್ದ. ಪನ್ರುತಿ ಬಜಾರ್ ಶಾಖೆಯ ಹೆಸರಲ್ಲಿ ವೆಬ್‌ಸೈಟ್ ಕೂಡ ರಚಿಸಲಾಗಿತ್ತು.
ಬ್ಯಾಂಕ್‌ನ ಒಳಹೊರಗು ಗೊತ್ತಿತ್ತು: ಬಾಬುವಿನ ಹೆತ್ತವರು ಎಸ್‌ಬಿಐ ಮಾಜಿ ಉದ್ಯೋಗಿಗಳಾಗಿದ್ದ ಕಾರಣ, ಬಾಲ್ಯದಿಂದಲೇ ಆತ ಬ್ಯಾಂಕಿ ನಲ್ಲಿ ಅಡ್ಡಾಡುತ್ತಿದ್ದ. ಹೀಗಾಗಿ ಅಲ್ಲಿನ ಕಾರ್ಯಾ ಚರಣೆ, ಎಲ್ಲಿ- ಏನಿರುತ್ತದೆ ಎಂಬ ಪ್ರತಿಯೊಂದು ಮಾಹಿತಿಯೂ ಅವನ ಮನಸ್ಸಲ್ಲಿ ಅಚ್ಚೊತ್ತಿತ್ತು. ಕೆಲ ವರ್ಷಗಳ ಹಿಂದೆ ಆತನ ತಂದೆ ನಿಧನರಾಗಿದ್ದು, ತಾಯಿಯೂ ನಿವೃತ್ತರಾದರು. ತಂದೆಯ ಹುದ್ದೆಗಾಗಿ ಬಾಬು ಅರ್ಜಿ ಸಲ್ಲಿಸಿದ್ದನಾದರೂ, ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಹತಾಶನಾಗಿ ತಾನೇ ಬ್ಯಾಂಕ್ ಶಾಖೆ ತೆರೆಯಲು ನಿರ್ಧರಿಸಿದ್ದ. ಈ ಶಾಖೆಯಲ್ಲಿ ವಂಚನೆಗೀಡಾದ ಬಗ್ಗೆ ಯಾವೊಬ್ಬ ಗ್ರಾಹಕನಿಂದಲೂ ದೂರು ಬಂದಿಲ್ಲ. ಆದರೆ, ಬಾಬುವಿನ ತಾಯಿ ಮತ್ತು ಚಿಕ್ಕಮ್ಮನ ಖಾತೆಗಳಲ್ಲಿ ಭಾರೀ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದ್ದು, ತನಿಖೆ ನಡೆಸಲಾಗುತ್ತಿದೆ.
ಸಿಕ್ಕಿಬಿದ್ದಿದ್ದು ಹೇಗೆ?
ಇತ್ತೀಚೆಗೆ ಅದೇ ನಗರದಲ್ಲಿದ್ದ ನೈಜ ಶಾಖೆಗೆ ಹೋಗಿದ್ದ ಎಸ್‌ಬಿಐ ಗ್ರಾಹಕರೊಬ್ಬರು, ಅಲ್ಲಿನ ಮ್ಯಾನೇಜರ್ ಬಳಿ ಹೊಸ ಶಾಖೆಯ ಕುರಿತು ಮಾಹಿತಿ ನೀಡಿದ್ದರು. ಅಲ್ಲದೆ ನಕಲಿ ಶಾಖೆಯಲ್ಲಿ ಪಡೆದಿದ್ದ ರಶೀದಿಯನ್ನೂ ತೋರಿಸಿದ್ದರು. ಅನುಮಾನ ಬಂದ ಮ್ಯಾನೇಜರ್ ಇತರೆ ಅಧಿಕಾರಿಗಳ ಜತೆಗೂಡಿ ಆ ಶಾಖೆಗೆ ಭೇಟಿ ನೀಡಿದಾಗ ಸತ್ಯ ಬಯಲಾಯಿತು. ಆದರೆ, ನಕಲಿ ಶಾಖೆಯನ್ನು ಅಸಲಿ ಬ್ಯಾಂಕ್ ಶಾಖೆ ಹೇಗಿರುತ್ತದೋ ಅದೇ ಮಾದರಿಯಲ್ಲಿ ಸ್ವಲ್ಪವೂ ಅನುಮಾನ ಬಾರದಂತೆ ರೂಪಿಸಿದ್ದು ನೋಡಿ ಆ ಅಧಿಕಾರಿಗಳೇ ಚಕಿತರಾಗಿದ್ದರು.